ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ನಲ್ಲಿ ಡಿಪ್ಲೊಮಾ ಪರೀಕ್ಷೆ: ಡಿಸಿಎಂ ಅಶ್ವತ್ಥನಾರಾಯಣ ಸೂಚನೆ

ಉನ್ನತ ಶಿಕ್ಷಣ ಮಂಡಳಿ ಸಭೆಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಸೂಚನೆ
Last Updated 16 ಜುಲೈ 2021, 20:39 IST
ಅಕ್ಷರ ಗಾತ್ರ

ಬೆಂಗಳೂರು: ಡಿಪ್ಲೊಮಾ ಮತ್ತು ಪದವಿ ಸೆಮಿಸ್ಟರ್‌ಗಳ ಬಾಕಿ ಉಳಿದಿರುವ ಪರೀಕ್ಷೆಗಳನ್ನು ಅನುಕ್ರಮವಾಗಿ ಆಗಸ್ಟ್‌ ಹಾಗೂ ಅಕ್ಟೋಬರ್‌ ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, ಪಾಲಿಟೆಕ್ನಿಕ್‌ಗಳಿಗೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಸೂಚಿಸಿದ್ದಾರೆ.

ಶುಕ್ರವಾರ ಉನ್ನತ ಶಿಕ್ಷಣ ಮಂಡಳಿ ಸದಸ್ಯರ ಜತೆ ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಡಿಪ್ಲೊಮಾ 1, 3 ಮತ್ತು 5ನೇ ಸೆಮಿಸ್ಟರ್‌ಗಳ ಪ್ರಾಯೋಗಿಕ ಪರೀಕ್ಷೆಗಳು ಜುಲೈ 26ರಿಂದ 28ರವರೆಗೆ ನಡೆಯಲಿವೆ. ಇದೇ ಸೆಮಿಸ್ಟರ್‌ಗಳ ಲಿಖಿತ ಪರೀಕ್ಷೆಗಳನ್ನು ಆಗಸ್ಟ್‌ 2ರಿಂದ 21ರವರೆಗಿನ ಅವಧಿಯಲ್ಲಿ ನಡೆಸಲು ಸೂಚಿಸಲಾಗಿದೆ’ ಎಂದರು.

ಡಿಪ್ಲೊಮಾ 2, 4 ಮತ್ತು 6ನೇ ಸೆಮಿಸ್ಟರ್‌ಗಳ ಪ್ರಾಯೋಗಿಕ ಪರೀಕ್ಷೆಗಳು ನವೆಂಬರ್‌ 2ರಿಂದ 12ರವರೆಗೆ ನಡೆಯಲಿವೆ. ಇದೇ ಸೆಮಿಸ್ಟರ್‌ಗಳ ಲಿಖಿತ ಪರೀಕ್ಷೆಗಳನ್ನು ನವೆಂಬರ್‌ 17ರಿಂದ ಡಿಸೆಂಬರ್‌ 6ರೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳು ಪದವಿ ಪರೀಕ್ಷೆಗಳನ್ನು ಮುಗಿಸಿವೆ. ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಕರ್ನಾಟಕ ವಿಶ್ವವಿದ್ಯಾಲಯ, ಕಲಬುರ್ಗಿ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಈ ಮೂರು ವಿಶ್ವವಿದ್ಯಾಲಯಗಳಲ್ಲಿ ಬಾಕಿ ಇರುವ ಪರೀಕ್ಷೆಗಳನ್ನು ಅಕ್ಟೋಬರ್ ಅಂತ್ಯದೊಳಗೆ ನಡೆಸಲು ಸೂಚಿಸಲಾಗಿದೆ ಎಂದರು.

ಎರಡು ದಿನದಲ್ಲಿ ನಿರ್ಧಾರ:

ಉನ್ನತ ಶಿಕ್ಷಣ ವಿಭಾಗದ ಕಾಲೇಜುಗಳನ್ನು ಆರಂಭಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಈಗಾಗಲೇ ಶೇಕಡ 65ರಷ್ಟು ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಭೌತಿಕ ತರಗತಿ ಕಡ್ಡಾಯ ಅಲ್ಲ. ಇಷ್ಟ ಇದ್ದವರು ಲಸಿಕೆ ಪಡೆದು ಬರಬಹುದು, ಇಲ್ಲದವರು ಆನ್‌ಲೈನ್‌ ತರಗತಿಯಲ್ಲಿ ಪಾಠ ಕೇಳಬಹುದು. ಆದರೆ, ಹಾಜರಿ ಮಾತ್ರ ಕಡ್ಡಾಯ ಎಂದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ್‌, ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT