ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌ಐ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ: ಬೊಮ್ಮಾಯಿ

Last Updated 19 ಫೆಬ್ರುವರಿ 2021, 16:19 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರಿನ ಉಳ್ಳಾಲದಲ್ಲಿ ನಡೆದ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಸ್ಥಾಪನಾ ದಿನಾಚರಣೆಯಲ್ಲಿ ದೇಶದ ಏಕತೆ, ಸಾರ್ವಭೌಮತೆ ಮತ್ತು ಸಂವಿಧಾನದ ವಿರುದ್ಧ ಭಾಷಣ ಮಾಡಲಾಗಿದೆ. ಸಂಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪಿಎಫ್‌ಐ ಸಂಘಟನೆ ತನ್ನ ನೈಜ ಬಣ್ಣವನ್ನು ಮತ್ತೊಮ್ಮೆ ತೋರಿಸಿದೆ. ಸಂಘಟನೆಯ ನಾಯಕರು ದೇಶದ್ರೋಹಿ ಹೇಳಿಕೆ ನೀಡಿದ್ದು, ಸೌಹಾರ್ದ ಕೆಡಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ದೇಶದ ಜನರನ್ನು ವಿಭಜಿಸುವುದಕ್ಕೆ ಕಾರಣವಾಗುವ ದ್ವೇಷದ ಹೇಳಿಕೆ ನೀಡಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಆರ್‌ಎಸ್‌ಎಸ್‌ ಮತ್ತು ರಾಮ ಮಂದಿರ ನಿರ್ಮಾಣದ ವಿರುದ್ಧ ಪಿಎಫ್‌ಐ ಸಮಾವೇಶದಲ್ಲಿ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ದೇಶಪ್ರೇಮಿ ಸಂಘಟನೆ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕತೆ ಪಿಎಫ್‌ಐ ಸಂಘಟನೆಗೆ ಇಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿದೆ. ಪಿಎಫ್‌ಐ ದೇಶಕ್ಕೆ ಮಾರಕವಾದ ಸಂಘಟನೆ. ಹಣಕ್ಕಾಗಿ ದೇಶದ ವಿರುದ್ಧ ಇರುವ ವಿಚ್ಛಿದ್ರಕಾರಿ ಶಕ್ತಿಗಳ ಜತೆ ಸೇರಿರುವ ಸಂಘಟನೆ ಅದಾಗಿದೆ’ ಎಂದು ಹೇಳಿದರು.

ಈಗಾಗಲೇ ಪಿಎಫ್‌ಐ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಘಟನೆಗೆ ಕಾರಣವಾದ ಎಲ್ಲರಿಗೂ ಶಿಕ್ಷೆಯಾಗುವಂತೆ ಕ್ರಮ ಜರುಗಿಸಲಾಗುವುದು ಎಂದರು.

ಟ್ವಿಟರ್‌ನಲ್ಲಿ ಪುನರುಚ್ಛಾರ

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದಂತೆ ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಅನೀಸ್‌ ಅಹ್ಮದ್‌ ಮಾಡಿದ್ದ ಭಾಷಣವನ್ನು ಪುನರುಚ್ಛರಿಸಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಯಾಸಿರ್‌ ಹಸನ್‌ ಶನಿವಾರ ಟ್ವೀಟ್ ಮಾಡಿದ್ದಾರೆ.

‘ಕಾರ್ಪೋರೇಟ್‌ ಕುಳಗಳ ಹಣದಿಂದ ಕೊಬ್ಬಿರುವ ಬಿಜೆಪಿಗೆ ದೇಣಿಗೆ ಸಂಗ್ರಹಿಸದೇ ರಾಮ ಮಂದಿರ ಕಟ್ಟುವುದು ದೊಡ್ಡ ಸಂಗತಿಯೇನಲ್ಲ. ಆದರೆ, ಗಲಭೆ, ಕೋಮು ಧ್ರುವೀಕರಣ, ಮುಸ್ಲಿಮರನ್ನು ಬೆದರಿಸುವ ಪಿತೂರಿಯ ಉದ್ದೇಶವನ್ನಷ್ಟೇ ಹೊಂದಿರುವ ಬಿಜೆಪಿಯ ಮಂದಿರ ನಿರ್ಮಾಣಕ್ಕೆ ಯಾರೂ ದೇಣಿಗೆ ನೀಡಬಾರದು ಎಂಬ ಅನೀಸ್‌ ಅವರ ಹೇಳಿಕೆಯನ್ನು ಪುನರುಚ್ಛರಿಸಬೇಕಿದೆ’ ಎಂದು ಹಸನ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT