ಶನಿವಾರ, ಅಕ್ಟೋಬರ್ 23, 2021
21 °C

ಶಾಸಕಾಂಗದಲ್ಲಿ ಶಿಸ್ತು, ಸಭ್ಯತೆ ಮರೆಯಾಗುತ್ತಿದೆ: ಲೋಕಸಭಾಧ್ಯಕ್ಷ ಓಂ ಬಿರ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಶಾಸಕಾಂಗದಲ್ಲಿ ಶಿಸ್ತು, ಸಭ್ಯತೆ ಮರೆಯಾಗುತ್ತಿದೆ. ಇದು ಎಲ್ಲರ ಚಿಂತೆಗೆ ಕಾರಣವಾಗಿದೆ’ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕೋವಿಡ್ ಕಾರಣ ಅಧಿವೇಶನ ನಡೆಸುವುದು ಕಷ್ಟಕರವಾಗಿತ್ತು. ಆದರೂ, ನಾವು ಸಂಸತ್ ಕಲಾಪವನ್ನು ಸಮರ್ಪಕವಾಗಿ ನಡೆಸಿದ್ದೇವೆ. ಸದನದಲ್ಲಿ ಚರ್ಚೆ, ಜೋರು‌ ಧ್ವನಿ ಎಲ್ಲವೂ ಇರಬೇಕು. ಅದು ಇದ್ದಾಗಲೇ ಉತ್ತಮ ನಿರ್ಣಯ ಸಾಧ್ಯ. ಆದರೆ, ಸದಸ್ಯರು ಶಿಸ್ತು ಮೀರಬಾರದು ಅಷ್ಟೆ’ ಎಂದು ಅಭಿಪ್ರಾಯಪಟ್ಟರು.

‘ಕಲಾಪಗಳು ಸುಸೂತ್ರವಾಗಿ, ಪರಿಣಾಮಕಾರಿಯಾಗಿ ನಡೆಯಬೇಕು. ಕಲಾಪಗಳ ಹಾದಿ ತಪ್ಪಿದರೆ ಎಲ್ಲ ಪಕ್ಷಗಳು ಸಾಮೂಹಿಕ ಹೊಣೆಗಾರರಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದರು.

‘ಚರ್ಚೆಗಳಲ್ಲಿ ಗುಣಮಟ್ಟ ಕುಸಿಯುತ್ತಿದೆ. ಇದರ ಸುಧಾರಣೆಗೆ ನಾವೆಲ್ಲರೂ ಪಣ ತೊಡಬೇಕು. ವೈಯುಕ್ತಿಕವಾಗಿ ತೆಗೆದುಕೊಂಡು ಕಲಾಪ ವ್ಯರ್ಥವಾಗಲು ಬಿಡಬಾರದು. ಪೀಠದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಶೋಭೆ ತರುವುದಿಲ್ಲ’ ಎಂದ ಅವರು, ‘ಶಾಸಕಾಂಗದಲ್ಲಿ ಶಿಸ್ತು, ಸಭ್ಯತೆ ತರುವ ಪ್ರಯತ್ನ ನಡೆದಿದೆ. ಮಾಧ್ಯಮಗಳು ಪ್ರಜಾಪ್ರಭುತ್ವದ ವಿಶ್ವಾಸ ಉಳಿಸಬೇಕು’ ಎಂದೂ ಸಲಹೆ ನೀಡಿದರು.

‘ಪ್ರಜಾಪ್ರಭುತ್ವವನ್ನು ಬಲಪಡಿಸಲು ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯ. ಜನರ ಪ್ರತಿನಿಧಿಗಳಾಗಿ ಪಾರದರ್ಶಕವಾಗಿರಬೇಕು. ಜನತೆಯ ಆಸೆ, ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಜನಸಾಮಾನ್ಯರ ಪರ ಕೆಲಸ ಮಾಡಬೇಕು. ಪ್ರತಿನಿಧಿಗಳಿಗೆ ಜನತೆಯ ಸಮಸ್ಯೆಗಳ ಬಗ್ಗೆ ಮೊದಲು ಅರಿವಿರಬೇಕು. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗಲಿದೆ’ ಎಂದರು.

‘75 ವರ್ಷಗಳ ಸ್ವಾತಂತ್ರ್ಯ ಪೂರೈಸಿದ್ದೇವೆ. ಪಂಚಾಯಿತಿಮಟ್ಟದಿಂದ ಸಂಸತ್ ವರೆಗೆ ಜನರ ಧ್ವನಿ ಕೇಳಬೇಕು. ಈ ವರ್ಷ ಸಾರ್ವಜನಿಕ‌ ಲೆಕ್ಕಪತ್ರ ಸಮಿತಿಗೆ 100 ವರ್ಷ ಆಗಲಿದೆ. ಡಿಸೆಂಬರ್ 4 ಮತ್ತು 5ರಂದು ದೆಹಲಿಯಲ್ಲಿ ಶತಮಾನೋತ್ಸವ ಆಚರಿಸಲಾಗುವುದು. ಇದರ ಅಂಗವಾಗಿ ಯುವ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗುವುದು. ಮಹಿಳಾ ದಿನಾಚರಣೆ ಪ್ರಯುಕ್ತ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.

‘ಸರ್ಕಾರದಲ್ಲಿ ಮುಖ್ಯಮಂತ್ರಿ ಸೇರಿ ಆಯಕಟ್ಟಿನಲ್ಲಿನ ಸ್ಥಾನಗಳಲ್ಲಿ ಇರುವವರು ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ತರಬೇಕು. ಜನರಿಗೆ ಉತ್ತಮ ಸಂದೇಶ ರವಾನೆಯಾಗಬೇಕು’ ಎಂದರು

‘ರಾಷ್ಟ್ರೀಯ ಶಿಕ್ಷಣ ನೀತಿ ಸಂಬಂಧ ಸರ್ಕಾರ ಕಾನೂನು‌ ಮಾಡಲಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಚರ್ಚೆಗಳ ಬಳಿಕ‌ ಈ ಕಾನೂನು  ರಚನೆ ಆಗಲಿದೆ.. ಈ ಬಗ್ಗೆ ಬಿಎಸಿ‌ ಸಭೆಯಲ್ಲೂ ಚರ್ಚೆಯಾಗಿದೆ. ಕರ್ನಾಟಕದಲ್ಲಿ ಈ ನೀತಿ ಜಾರಿಯಾಗುತ್ತಿದೆ. ಕೆಲವರು ಅನುಮಾನಗಳನ್ನು ಎತ್ತಿರಬಹುದು.ನೀತಿ ಜಾರಿ ವೇಳೆ ಇದು ಸಾಮಾನ್ಯ. ಸಾಧಕ ಬಾಧಕಗಳನ್ನು ನೋಡಿಕೊಂಡು ಸರ್ಕಾರ ನಿರ್ಧರಿಸಲಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು