ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿ: ಪಿಜಿ 'ತಾರತಮ್ಯ'; ಅಭ್ಯರ್ಥಿಗಳ ಅಳಲು

ರಾಜ್ಯಶಾಸ್ತ್ರ ವಿಷಯದ ಹುದ್ದೆಗೆ ‘ಸಾರ್ವಜನಿಕ ಆಡಳಿತ’ ಓದಿದವರಿಗೆ ಅವಕಾಶ ಇಲ್ಲ
Last Updated 4 ನವೆಂಬರ್ 2021, 3:06 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಸಾರ್ವಜನಿಕ ಆಡಳಿತ ವಿಷಯದ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ, ರಾಜ್ಯಶಾಸ್ತ್ರ ವಿಷಯದ ಹುದ್ದೆಗಳಿಗೆ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಅವಕಾಶ ನಿರಾಕರಿಸಿದೆ!

ಈ ನೀತಿಯಿಂದಾಗಿ, ಇದೀಗ ಅರ್ಜಿ ಆಹ್ವಾನಿಸಿದ ರಾಜ್ಯಶಾಸ್ತ್ರ ವಿಷಯದ 98 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅರ್ಹತಾ ಪರೀಕ್ಷೆ (ನೆಟ್‌, ಕೆ–ಸೆಟ್‌) ಪಾಸಾದ ಅಭ್ಯರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಈ ತಾರತಮ್ಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಈ ಅಭ್ಯರ್ಥಿಗಳು ಮುಂದಾಗಿದ್ದಾರೆ.

ಈ 98 ಹುದ್ದೆಗಳೂ ಸೇರಿ ಒಟ್ಟು 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನವೆಂಬರ್ 6 ಕೊನೆ ದಿನ.

‘ರಾಜ್ಯಶಾಸ್ತ್ರ ವಿಷಯದಿಂದ ಬೇರ್ಪಡಿಸಿ ಸಾರ್ವಜನಿಕ ಆಡಳಿತ ವಿಷಯ ಸೃಷ್ಟಿಸಲಾಗಿದೆ. ಹೀಗಾಗಿ, ಸಾರ್ವಜನಿಕ ಆಡಳಿತ ವಿಷಯ ಬೋಧಿಸಲು ಅದೇ ವಿಷಯದಲ್ಲಿ ಅಥವಾ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಹರು‘ ಎಂದು2015ರ ಫೆ. 12ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದೇ ರೀತಿ, ರಾಜ್ಯಶಾಸ್ತ್ರ ವಿಷಯವು ಸಾರ್ವಜನಿಕ ಆಡಳಿತ ವಿಷಯಕ್ಕೆ ತತ್ಸಮಾನ ಪದವಿ ಎಂದು ಪರಿಗಣಿಸಿ, ರಾಜ್ಯಶಾಸ್ತ್ರ ವಿಷಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಉನ್ನತ ಶಿಕ್ಷಣ ಸಚಿವರು ಮತ್ತು ಇಲಾಖೆಯ ಆಯುಕ್ತರಿಗೆ ಹುದ್ದೆ ಆಕಾಂಕ್ಷಿಗಳು ಮನವಿ ಸಲ್ಲಿಸಿದ್ದಾರೆ.

‘ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಷಯಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಹೀಗಾಗಿ, ಈ ಎರಡೂ ವಿಷಯಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ, ಈ ಪೈಕಿ ಯಾವುದಾದರೂ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅರ್ಹತಾ ಪರೀಕ್ಷೆ ಪಾಸಾದವರನ್ನು ಪರಿಗಣಿಸಬಹುದು‘ ಎಂದು2018 ಜುಲೈ 4ರಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತಿಳಿಸಿದೆ. ಆದರೆ, ಈ ಬಗ್ಗೆ ಈ ಆದೇಶ ಪಾಲಿಸಲು ರಾಜ್ಯ ಸರ್ಕಾರ ತಯಾರಿಲ್ಲ’ ಎಂದೂ ಅಭ್ಯರ್ಥಿಗಳು ದೂರಿದ್ದಾರೆ.

‘ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕಾರಣಕ್ಕೆ ರಾಜ್ಯಶಾಸ್ತ್ರ ವಿಷಯದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಸಂದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ಉತ್ತರಾಖಂಡದಅಭ್ಯರ್ಥಿಯೊಬ್ಬರು ಅಲ್ಲಿನ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅಭ್ಯರ್ಥಿಯಪರ 2021ರ ಮೇ 13ರಂದು ತೀರ್ಪು ನೀಡಿರುವ ಹೈಕೋರ್ಟ್‌, ಸಂದರ್ಶನಕ್ಕೆ ಅವಕಾಶ ನೀಡುವಂತೆ ಸೂಚಿಸಿದೆ’ ಎಂದೂ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ನೇಮಕಾತಿಯಲ್ಲಿ ವಯೋಮಿತಿ ಸಡಿಲಿಸಲು ಆಗ್ರಹ
ಸಹಾಯಕ ಪ್ರಾಧ್ಯಾಪಕರ 1,242 ಹುದ್ದೆಗಳ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಸಾವಿರಾರು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.

ಈ ಹುದ್ದೆಗಳ ನೇಮಕಾತಿಗೆ ಒಂದು ವರ್ಷ ಮೂರು ತಿಂಗಳ ಹಿಂದೆಯೇ ಉನ್ನತ ಶಿಕ್ಷಣ ಇಲಾಖೆ ಮುಂದಾಗಿತ್ತು. ಆದರೆ, ಕೋವಿಡ್‌ ಕಾರಣ ನೀಡಿ ನೇಮಕಾತಿ ಪ್ರಕ್ರಿಯೆ ಮುಂದೂಡಲಾಗಿತ್ತು.

ಆದರೆ, ಇದೀಗ ವಯೋಮಿತಿ ಸಡಿಲಿಕೆ ನೀಡದೇ ಇರುವುದರಿಂದ, ಕೋವಿಡ್‌ ಕಾರಣಕ್ಕೆ ಹುದ್ದೆ ಪಡೆಯುವ ಅವಕಾಶದಿಂದ ವಂಚಿತರಾಗಿದ್ದೇವೆ. ನೆಟ್‌, ಕೆ–ಸೆಟ್‌, ಪಿಎಚ್.ಡಿ ಅರ್ಹತೆ ಇದ್ದರೂ ಉದ್ಯೋಗ ವಂಚಿತರಾಗಿದ್ದೇವೆ. ಈ ಅನ್ಯಾಯ ಸರಿಪಡಿಸಬೇಕು.ಇಲ್ಲದೇ ಇದ್ದರೆ ಕಾನೂನು ಹೋರಾಟ ನಡೆಸುತ್ತೇವೆ’ ಎಂದೂ ಎಚ್ಚರಿಕೆ ನೀಡಿದ್ದಾರೆ.

‘ಕೋವಿಡ್‌ ಸಾಂಕ್ರಾಮಿಕದಿಂದ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮವಾಗಿದೆ. ಅಲ್ಲದೆ, ರಾಜ್ಯದ ಆರ್ಥಿಕ ಸಂಪನ್ಮೂಲವನ್ನು ಈ ಸಾಂಕ್ರಾಮಿಕದ ನಿಯಂತ್ರಣಕ್ಕೆ ಸರ್ಕಾರ ಬಳಕೆ ಮಾಡಿದೆ. ಹೀಗಾಗಿ, ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ’ ಎಂದು ಉನ್ನತ ಶಿಕ್ಷಣ ಇಲಾಖೆ ಇತ್ತೀಚೆಗೆ ಯುಜಿಸಿಗೂ ಪತ್ರ ಬರೆದಿತ್ತು.

*

ಸಾರ್ವಜನಿಕ ಆಡಳಿತ ಮತ್ತು ರಾಜ್ಯಶಾಸ್ತ್ರ ವಿಷಯಗಳ ತತ್ಸಮಾನ ಕುರಿತು ಸ್ಪಷ್ಟೀಕರಣ ನೀಡು ವಂತೆ ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಸ್ಪಷ್ಟೀಕರಣ ಬರಬಹುದು.
-ಎಸ್. ರಮ್ಯಾ, ಕಾರ್ಯನಿರ್ವಾಹಕ ನಿರ್ದೇಶಕಿ, ಕೆಇಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT