ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ವರ್ಷ ದಾಟಿದವರಿಗೆ ಲಭ್ಯವಿರುವ 4 ಲಕ್ಷ ಡೋಸ್ ಲಸಿಕೆ ವಿತರಣೆ: ಮುಖ್ಯಮಂತ್ರಿ

Last Updated 1 ಮೇ 2021, 7:23 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 18 ವರ್ಷ ದಾಟಿದವರಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಶನಿವಾರ ಸಾಂಕೇತಿಕವಾಗಿ ಚಾಲನೆ ನೀಡಿದರು.

18 ವರ್ಷ ದಾಟಿದವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ‘ಕೋವಿಡ್‌ ವಿರುದ್ಧ ಸಮರದಲ್ಲಿ ನನ್ನ ಪ್ರಕಾರ ಇಂದು ಮಹತ್ವದ ದಿನ. ಇಂದಿನಿಂದ ಕೇಂದ್ರದ ಸೂಚನೆಯಂತೆ 18 ವರ್ಷ ದಾಟಿದವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗುತ್ತಿದೆ’ ಎಂದರು.

‘18 ವರ್ಷ ದಾಟಿದ ಎಲ್ಲರಿಗೂ ಉಚಿತವಾಗಿ ನೀಡಲು ಲಸಿಕೆ ನೀಡಲು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಸದ್ಯ ಈ ಉದ್ದೇಶಕ್ಕೆ ಕೇಂದ್ರ ಸರ್ಕಾರದಿಂದ 3 ಲಕ್ಷ ಲಸಿಕೆ ಲಭ್ಯವಾಗಿದೆ. ನಮ್ಮ ಬಳಿ 1 ಲಕ್ಷ ಹೆಚ್ಚು ಲಸಿಕೆ ಇದೆ. ಅದನ್ನು ಇವತ್ತಿನಿಂದ ಕೊಡಲು ಆರಂಭಿಸುತ್ತೇವೆ. 2 ಕೋಟಿ ಲಸಿಕೆ ಖರೀದಿಗೆ ರಾಜ್ಯ ಸರ್ಕಾರ ಈಗಾಗಲೇ ಹಣ ಕೊಟ್ಟಾಗಿದೆ’ ಎಂದರು.

‘ರಾಜ್ಯದಲ್ಲಿ 18 ವರ್ಷ ವಯೋಮಾನದ 3.26 ಕೋಟಿ ಜನರಿದ್ದಾರೆ. ಅವರೆಲ್ಲರಿಗೂ ಲಸಿಕೆ ಕೊಡಲು ಸರ್ಕಾರ ಉದ್ದೇಶಿಸಿದೆ. ಕೋವಿಡ್‌ ಎರಡನೇ ಅಲೆ ನಮ್ಮನ್ನು ತೀವ್ರವಾಗಿ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಈ ತೀರ್ಮಾನ ಅತ್ಯಂತ ಸಮಯೋಚಿತ. ಅದಕ್ಕೆ ಪ್ರಧಾನಿ ಅವರಿಗೆ ಅಭಿನಂದನೆಗೆ ಸಲ್ಲಿಸುತ್ತೇನೆ’ ಎಂದರು.

‘ಸ್ವದೇಶದಲ್ಲಿ ಉತ್ಪಾದನೆಯಾದ ಎರಡು ಲಸಿಕೆ ಈಗಾಗಲೇ ಲಭ್ಯವಾಗಿದ್ದು. ಇದೇ ತಿಂಗಳಲ್ಲಿ ಇನ್ನೊಂದು ಲಸಿಕೆ ಮಾರುಕಟ್ಟೆಗೆ ಬರಲಿದೆ. ರಾಜ್ಯದಲ್ಲಿ ಈಗಾಗಲೇ 96.35 ಲಕ್ಷ ಜನರಿಗೆ ಲಸಿಕೆ ಕೊಡಲಾಗಿದೆ. ಇದೀಗ 18 ವರ್ಷ ದಾಟಿದ ದೊಡ್ಡ ಸಂಖ್ಯೆಯ ಜನರಿಗೂ ದೊಡ್ಡ ಲಸಿಕೆ ದೊರೆತಂತಾಗುತ್ತದೆ’ ಎಂದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ನಿಗದಿಪಡಿಸಿದ ದರದೊಂದಿಗೆ ₹ 100 ಸೇವಾ ಶುಲ್ಲವನ್ನು ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚು ಹಣವನ್ನು ಯಾರೂ ತೆಗೆದುಕೊಳ್ಳಬಾರದು. ಹೆಚ್ಚು ಹಣ ತೆಗೆದುಕೊಂಡರೆ ತೀವ್ರ ಕ್ರಮ ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಲಭ್ಯತೆಯ ಆಧಾರದಲ್ಲಿ ಹಂತ ಹಂತವಾಗಿ ಲಸಿಕೆ ವಿತರಣೆ ಮುಂದುವರಿಸಲಾಗುವುದು’ ಎಂದರು.

‘ಕೋವಿಡ್‌ ನಿಂಯತ್ರಿಸಲು ಹೊರಡಿಸಿರುವ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸುವ ಮೂಲಕ ಸರ್ಕಾರದ ಜೊತೆ ಕೈ ಜೋಡಿಸಬೇಕು. ಮಾಸ್ಕ್, ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್‌ ಬಳಸಬೇಕು’ ಎಂದೂ ಸಲಹೆ ನೀಡಿದರು.

‘ಕಾಳಸಂತೆಯಲ್ಲಿ ರೆಮ್‌ಡಿಸಿವಿರ್‌ ಚುಚ್ಚುಮದ್ದು ಮಾರಾಟ ಮಾಡುವವರ ಮೇಲೆ 24 ಗಂಟೆಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅಂಥವರನ್ನು ಕೆಲಸದಿಂದ ವಜಾ ಮಾಡಲಾಗುವುದು. ಅಲ್ಲದೆ, ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ’ ಎಂದೂ ಎಚ್ಚರಿಕೆ ನೀಡಿದರು.

‘ಡಾ. ದೇವಿಶೆಟ್ಟಿ ಸೇರಿದಂತೆ ಖಾಸಗಿ ಆಸ್ಪತ್ರೆಯ 7–8 ಪ್ರಮುಖರ ಜೊತೆ ಇಂದು ಸಂಜೆ 4 ಗಂಟೆಗ ಸಭೆ ನಡೆಸುತ್ತೇನೆ. ಈ ಸಭೆಯಲ್ಲಿ ಬೆಡ್‌, ಆಕ್ಸಿಜನ್ ಕೊರತೆ ನೀಗಿಸಲು ಕುರಿತು ಚರ್ಚಿ ನಡೆಸುತ್ತೇನೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT