ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್ ಅಧಿಕಾರಿ ಜತೆ ಒಡನಾಟ; ಏಕಮುಖ ಪ್ರೀತಿಯಿಂದ ರವಿ ಆತ್ಮಹತ್ಯೆ: ಸಿದ್ದರಾಮಯ್ಯ

Last Updated 3 ಅಕ್ಟೋಬರ್ 2021, 1:33 IST
ಅಕ್ಷರ ಗಾತ್ರ

ಬೆಂಗಳೂರು: 'ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ಡಿ.ಕೆ. ರವಿ ದಕ್ಷ,‌ ಪ್ರಾಮಾಣಿಕ ಅಧಿಕಾರಿ ಆಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವರು ಪ್ರಚಾರಪ್ರಿಯರೂ ಆಗಿದ್ದರು. ಅನೇಕ ಮಹತ್ವಾಕಾಂಕ್ಷೆಗಳ ನಡುವೆ ತಮ್ಮ ಜೊತೆಗಾರ್ತಿ ಐಎಎಸ್ ಅಧಿಕಾರಿಯ ನಿಕಟ ಒಡನಾಟದಲ್ಲಿ ಏಕಮುಖ ಪ್ರೀತಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡರು'ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪತ್ರಕರ್ತ ರಾಮಕೃಷ್ಣ ಉಪಾಧ್ಯ ಬರೆದಿರುವ ಡಿ.ಕೆ. ರವಿ ದುರಂತ ಕತೆ, "ನಗ್ನಸತ್ಯ" ಹಾಗೂ "ಲ್ಯಾಂಡ್, ಲಸ್ಟ್ ಆ್ಯಂಡ್ ಆಡಿಯೊಟೇಪ್ಸ್" ಪುಸ್ತಕಗಳ ಬಿಡುಗಡೆ ಮಾಡಿ ಅವರು ಮಾತನಾಡಿದರು.

"ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ರವಿ ಅವರಿಗೆ ತಮ್ಮ ಕೆಲಸ ಅಷ್ಟಾಗಿ ಖುಷಿ ಕೊಟ್ಟಿರಲಿಲ್ಲ. ಕೋಲಾರದಲ್ಲಿ ಡಿಸಿಯಾಗಿಯೇ ಮುಂದುವರಿಯುವ ಇಚ್ಛೆ ಇತ್ತು. ಆದರೆ, ಅವರ ಮಾವ ಹನುಮಂತರಾಯಪ್ಪ, ರಮೇಶ್ ಕುಮಾರ್ ಅವರ ಕೋರಿಕೆಯ ಮೇರೆಗೆ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದೆ. ಆದರೆ, ಅವರು ಕಾನೂನು ರೀತಿಯಲ್ಲಿ ಅಪಾರ ಹಣ ಸಂಪಾದಿಸಿ, ಐಎಎಸ್ ಹುದ್ದೆಗೆ ರಾಜೀನಾಮೆ ಕೊಟ್ಟು, ಉದ್ಯಮಿಯಾಗಿ ಹೆಸರು ಮಾಡಬೇಕೆಂಬ ಆಸೆ ಹೊಂದಿದ್ದರು. ಅದು ಸಾಧ್ಯವಾಗಲಿಲ್ಲ. ಪ್ರಚಾರ ಮತ್ತು ಜನಪ್ರಿಯತೆಯ ಮಧ್ಯದಲ್ಲೇ ಅವರು ಭೂ-ಮರಳು ಮಾಫಿಯಾ ಮತ್ತು ಏಕಮುಖ ಪ್ರೀತಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದು ಮೂರ್ಖತನದ ಪರಮಾವಧಿ" ಎಂದರು.

"ರವಿ ಸಾವು ಆತ್ಮಹತ್ಯೆ ಎಂಬುದನ್ನು ಸಿಬಿಐ ದೃಢಪಡಿಸಿತು. ಆದರೆ, ಅದಕ್ಕೂ ಮೊದಲೇ ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಘಟನೆಯನ್ನು ಸಂಪೂರ್ಣ ಪಾರದರ್ಶಕವಾಗಿ ತನಿಖೆ ನಡೆಸಿತ್ತು. ಬಿಜೆಪಿ ಮತ್ತು ಜೆಡಿಎಸ್ ವಿರೋಧ ಪಕ್ಷಗಳಾಗಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದವು. ಅಂದಿನ ಗೃಹಮಂತ್ರಿಯಾಗಿದ್ದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೆ.ಜೆ. ಜಾರ್ಜ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ರಾಜೀನಾಮೆ ಕೊಡಿಸುವ ಯತ್ನ ಮಾಡಿದರು. ರಾಜೀನಾಮೆಗೆ ಆಗ್ರಹಿಸಿ, ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್, ಅನಂತ ಕುಮಾರ್ ಹಾಗೂ ಸದಾನಂದಗೌಡ ಅವರು ಅಂದಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬಳಿ ತೆರಳಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಒತ್ತಡ ಹೇರಿದರು. ಆದರೆ, ನಾನು ಅಂಜಲಿಲ್ಲ. ಉಪ್ಪು ತಿಂದವರು ನೀರು ಕುಡಿಯಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ನಾನೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದೆ. ತನಿಖೆಯ ಎಲ್ಲ ಹಂತಗಳಲ್ಲೂ ಅದು ಆತ್ಮಹತ್ಯೆ ಎಂಬುದನ್ನೇ ದೃಢಪಟ್ಟಿತು. ಕೊಲೆ ಎಂಬ ಆರೋಪ ಹುಸಿಯಾಯಿತು. ಜಾರ್ಜ್ ಪ್ರಾಮಾಣಿಕ ಗೃಹ ಮಂತ್ರಿಯಾಗಿ ಕೆಲಸ ಮಾಡಿದವರು. ಯಾವತ್ತಿದ್ದರೂ ಸತ್ಯವನ್ನು ಮುಚ್ಚಿ ಹಾಕಲು ಎಷ್ಟೇ ಯತ್ನಿಸಿದರೂ ಇಂದಲ್ಲ ನಾಳೆ ಸಿಗಬೇಕಾದ ನ್ಯಾಯ ಸಿಕ್ಕೇ ಸಿಗುತ್ತದೆ. ಅದಕ್ಕೆ ಈ ಪ್ರಕರಣವೇ ಸಾಕ್ಷಿ" ಎಂದರು.

"ಇಂದಿನ ವ್ಯವಸ್ಥೆ ಕುಲಗೆಟ್ಟು ಹೋಗಿದೆ‌. ಈ ಭ್ರಷ್ಟ ಮತ್ತು ಜಾತಿ ವ್ಯವಸ್ಥೆಗೆ ನಾವೇ ಕಾರಣ. ಎಲ್ಲಿಯವರೆಗೆ ಸಮಾಜ ಇಂಥವರನ್ನು ವಿರೋಧಿಸದೆ ಸಹಿಸಿಕೊಳ್ಳುವುದೊ ಅಲ್ಲಿಯವರೆಗೆ ಇದು ಮುಂದುವರಿಯುತ್ತದೆ. ಈ ವ್ಯವಸ್ಥೆಗೆ ಈಗ ಯಾರನ್ನು ದೂಷಿಸಬೇಕು, ಯಾರ ಮೇಲೆ ಆರೋಪ ಹೊರಿಸಬೇಕು ಎಂಬುದೃ ತಿಳಿಯುತ್ತಿಲ್ಲ" ಎಂದು ಹತಾಶೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಸಿ. ನಾಣಯ್ಯ ಮಾತನಾಡಿ, "ಐಎಎಸ್, ಐಪಿಎಸ್ ಅಧಿಕಾರಿಗಳಲ್ಲಿ ಭ್ರಷ್ಟರು ಹೆಚ್ಚಾಗುತ್ತಿದ್ದಾರೆ. ಪ್ರಾಮಾಣಿಕರು ಹಾಗೂ ಬದ್ಧತೆ ಇರುವ ಅಧಿಕಾರಿಗಳಿದ್ದರೂ ಅವರ ಸಂಖ್ಯೆ ಕಡಿಮೆಯಾಗಿದೆ. ಡಿ.ಕೆ. ರವಿ ಅವರಂಥ ಅಧಿಕಾರಿಯ ಸಾವಿಗೆ ಜಮೀನು, ಕಾಮಾಂಧತೆ ಹೇಗೆ ಕಾರಣವಾದವು ಎಂಬುದನ್ನು ವಿವರಿಸುವ ಸಮಗ್ರ ತನಿಖಾ ವರದಿಯ ಕ್ರೋಢೀಕರಣವನ್ನು ಈ ಪುಸ್ತಕ ಒಳಗೊಂಡಿದೆ. ಇದರಲ್ಲಿ, ಡಿ.ಕೆ. ರವಿ ಸಾವಿನ ಸುತ್ತ ಕೇಳಿ ಬಂದ ಮಹಿಳಾ ಅಧಿಕಾರಿಯೊಬ್ಬರ ವಿವರವೂ ಇದೆ. ಡಿ.ಕೆ. ರವಿ ಸಾವನ್ನು ಅಂದಿನ ವಿರೋಧ ಪಕ್ಷಗಳು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದವು. ಇಂಥ ಸಂದರ್ಭಗಳಲ್ಲಿ ಮಾಧ್ಯಮಗಳು ಯಾರ ಕೈಗೊಂಬೆಯೂ ಆಗದೆ ಕೆಲಸ ನಿರ್ವಹಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಲೇಖಕ ರಾಮಕೃಷ್ಣ ಉಪಾಧ್ಯ, ಚಿತ್ರನಟ ಹಾಗೂ ಪರಿಸರ ವಾದಿ ಸುರೇಶ್ ಹೆಬ್ಳೀಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT