ಶುಕ್ರವಾರ, ಸೆಪ್ಟೆಂಬರ್ 17, 2021
24 °C
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ

ಶಾಲಾರಂಭಕ್ಕೆ ಎರಡು ವಾರ ವಿಳಂಬ ಸೂಕ್ತ: ಡಾ.ಸಿ.ಎನ್. ಮಂಜುನಾಥ್ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನೆರೆಯ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಮುಂದಿನ ಎರಡು ವಾರಗಳು ಕಾಯುವುದು ಉತ್ತಮ’ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.

ಶಾಲೆಗಳ ಪುನರಾರಂಭದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‌‘ರಾಜ್ಯದಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಸೋಂಕು ದೃಢ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಲ್ಲಿ ಈ ಪ್ರಮಾಣ ಏರಿಕೆ ಕಾಣುತ್ತಿದೆ. ಹಾಗಾಗಿ, ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಎರಡು ವಾರಗಳ ಬಳಿಕ ನಿರ್ಧಾರ ಕೈಗೊಳ್ಳುವುದು ಉತ್ತಮ. ಈ ಬಗ್ಗೆ ಸರ್ಕಾರವು ಶಾಲಾ ಆಡಳಿತ ಮಂಡಳಿಗಳು ಹಾಗೂ ಪಾಲಕರ ಅಭಿಪ್ರಾಯ ಪಡೆದು, ಅಂತಿಮ ತೀರ್ಮಾನ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಸೋಂಕು ದೃಢ ಪ್ರಮಾಣದ ಬಗ್ಗೆ ಗಮನ ನೀಡಬೇಕು. ಶೇ 3ರಿಂದ ಶೇ 4ರಷ್ಟು ಸೋಂಕು ದೃಢ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಪ್ರಾರಂಭಿಸುವುದು ಸ್ವಲ್ಪ ದಿನಕ್ಕೆ ಮುಂದೂಡುವುದು ಉತ್ತಮ. ಆಗ ಸೋಂಕು ಏರಿಕೆಯಾಗುತ್ತದೆಯೇ ಅಥವಾ ಇಳಿಕೆಯಾಗುತ್ತದೆಯೇ ಎನ್ನುವುದರ ಬಗ್ಗೆ ಚಿತ್ರಣ ದೊರೆಯಲಿದೆ. ಈಗ ಮೂರಲೇ ಅಲೆಯ ಮುನ್ಸೂಚನೆಗಳು ಗೋಚರಿಸುತ್ತಿವೆ. ಹಾಗಾಗಿ, ಎಚ್ಚರಿಕೆಯ ನಡೆ ಅಗತ್ಯ’ ಎಂದು ವಿವರಿಸಿದರು.

ಮೂರನೇ ಅಲೆ ಖಚಿತ: ‘ಕೇರಳದಲ್ಲಿ ದಿನವೊಂದಕ್ಕೆ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವುದು ಖಚಿತ. ಆದರೆ, ಅದು ರಾಜ್ಯದಲ್ಲಿ ಯಾವ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ ಎನ್ನುವುದನ್ನು ನಿರ್ಧರಿಸಲು ಈಗಲೇ ಸಾಧ್ಯವಿಲ್ಲ. ಹೆಚ್ಚಿನ ಸಂಖ್ಯೆಯ ಜನರು ಲಸಿಕೆ ಹಾಕಿಸಿಕೊಂಡು, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದಲ್ಲಿ ಮೂರನೇ ಅಲೆಯನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯ’ ಎಂದು ಹೇಳಿದರು.

‘ಸಭೆ–ಸಮಾರಂಭಗಳನ್ನು ಸದ್ಯ ನಡೆಸಬಾರದು. ಮುಂಬರುವ ತಿಂಗಳುಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಜನರು ಮೈಮರೆಯಬಾರದು. ಹಬ್ಬಗಳನ್ನು ಸರಳವಾಗಿ ಮನೆಯಲ್ಲಿಯೇ ಆಚರಣೆ ಮಾಡಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು