ಬುಧವಾರ, ಮಾರ್ಚ್ 3, 2021
19 °C
86ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

ಹಿಂದಿ ಭಾಷೆಯ ತಿರಸ್ಕಾರ ಏಕೆ: ದೊಡ್ಡರಂಗೇಗೌಡ ಪ್ರಶ್ನೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇಂಗ್ಲಿಷಿಗೆ ನಾವು ಮಣೆ ಹಾಕುತ್ತೇವೆ. ಹಿಂದಿಯನ್ನು ಏಕೆ ತಿರಸ್ಕಾರ ಮಾಡಬೇಕು. ಹಿಂದಿ ನಮ್ಮ ರಾಷ್ಟ್ರ ಭಾಷೆ. ಇಲ್ಲಿ ಕನ್ನಡ ಹೇಗೋ ಅದೇ ರೀತಿ ಉತ್ತರ ಭಾರತದಲ್ಲಿ ಹಿಂದಿಗೆ ಸ್ಥಾನಮಾನವಿದೆ. ಇಂಗ್ಲಿಷ್ ಒಪ್ಪುವ ನಾವು ಹಿಂದಿ ಭಾಷೆಯನ್ನು ಏಕೆ ಒಪ್ಪಿಕೊಳ್ಳಬಾರದು’ ಎಂದು 86ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಪ್ರಶ್ನಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದು ಇಷ್ಟು.

*ಸಮ್ಮೇಳನದ ಅಧ್ಯಕ್ಷರಾದ ಸಂಭ್ರಮದಲ್ಲಿ ಕನ್ನಡಿಗರಿಗೆ ನೀವು ಹೇಳುವುದೇನು?

ವಿಶ್ವದ ಯಾವುದೇ ರಾಷ್ಟ್ರಕ್ಕೂ ಹೋದರೂ ಕನ್ನಡಿಗರಿಗೆ ಗೌರವ ಸಿಗುತ್ತಿದೆ. ಅದಕ್ಕೆ ಇಲ್ಲಿನ ಸಾಂಸ್ಕೃತಿಕ ವೈವಿಧ್ಯ ಹಾಗೂ ಸಾಹಿತ್ಯ ಶ್ರೀಮಂತಿಕೆಯೇ ಕಾರಣ. ಕನ್ನಡದ ಬಗ್ಗೆ ಕೀಳರಿಮೆಯನ್ನು ಬಿಟ್ಟು, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಈ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ವಿಶ್ವದ ಭಾಷೆಗಳಲ್ಲಿ ಕನ್ನಡಕ್ಕೆ ಹಿರಿಯ ಸ್ಥಾನವಿದ್ದು, ನಮ್ಮ ಭಾಷೆ ವಿಶ್ವಮುಖಿಯಾಗಿ ಬೆಳೆದಿದೆ. ಕನ್ನಡ ವಚನಕಾರರನ್ನು ಪ್ರೊ.ಎ.ಕೆ. ರಾಮಾನುಜನ್ ಅವರು ಇಂಗ್ಲಿಷ್‌ಗೆ ಅನುವಾದ ಮಾಡಿದ ಬಳಿಕ ಇಲ್ಲಿನ ಸಾಹಿತ್ಯವು ಜಾಗತಿಕ ಮಟ್ಟದಲ್ಲಿ ಪರಿಚಯವಾಗಿ, ಎತ್ತರದ ಸ್ಥಾನ ಪಡೆಯಿತು. ಕನ್ನಡ ಭಾಷೆ ಕೀಳಲ್ಲ. ಕನ್ನಡಿಗರು ಕೀಳರಿಮೆ ಬೆಳೆಸಿಕೊಳ್ಳಬಾರದು. ಇಂಗ್ಲಿಷ್ ಭಾಷೆಗೆ ದಾಸರಾಗುವುದನ್ನು ಬಿಡಬೇಕು.

* ಗಡಿ ವಿಚಾರವಾಗಿ ಮಹಾರಾಷ್ಟ್ರದವರ ತಗಾದೆ ಬಗ್ಗೆ?

ಕನ್ನಡಿಗರು ಸೌಮ್ಯ ಸ್ವಭಾವದವರು. ಆದರೆ, ತಿರುಗಿ ಬಿದ್ದರೆ ಸುಮ್ಮನಿರುವವರಲ್ಲ. ಮರಾಠಿಗರು ಗಡಿಯಲ್ಲಿ ಗಲಾಟೆ ಮಾಡುವ ಮೊದಲು ನಮ್ಮ ಇತಿಹಾಸವನ್ನು ತಿಳಿದುಕೊಳ್ಳಬೇಕು. ಗಡಿ ರಾಜ್ಯಗಳಲ್ಲಿ ಎಷ್ಟೊಂದು ಕನ್ನಡ ಶಾಸನಗಳು ದೊರೆತಿದೆ.ಬೆಳಗಾವಿ ಸೇರಿದಂತೆ ಗಡಿ ಜಿಲ್ಲೆಗಳು ಯಾವತ್ತಿದ್ದರೂ ಇಲ್ಲಿಯವೇ.

*ಕನ್ನಡಿಗರ ಮುಂದಿರುವ ಸದ್ಯದ ಸವಾಲುಗಳೇನು?

ಭಾಷೆಯ ವಿಚಾರದಲ್ಲಿ ಮೊದಲು ನಾವು ಶೈಕ್ಷಣಿಕ ಸವಾಲನ್ನು ಎದುರಿಸಬೇಕಿದೆ. ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ, ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಕನ್ನಡದಿಂದ ಅನ್ನ ಹುಟ್ಟಿಸಿಕೊಳ್ಳಲು ಸಾಧ್ಯ. ಅದಕ್ಕೆ ನಾನು ಮತ್ತು ನನ್ನ ಕುಟುಂಬವೇ ಸಾಕ್ಷಿ. 

* ಕ್ಷುಲ್ಲಕ ಪ್ರಕರಣವೊಂದರಲ್ಲಿ  ಸಾಹಿತಿ ಹಂಪನಾ ಅವರನ್ನು ಕರೆಸಿ ನಡೆಸಿದ್ದು ಎಷ್ಟು ಸರಿ?

ಹಂಪನಾ ಅವರು ನನ್ನ ಮೇಷ್ಟ್ರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದವರು.  ಎಲ್ಲವನ್ನೂ ತಿಳಿದಿರುವ ಪ್ರಕಾಂಡ ಪಂಡಿತರು. ಅವರು ಏನನ್ನೋ ಹೇಳಿದ್ದಾರೆ ಅಂದರೆ ಅದನ್ನು ಗಂಭೀರವಾಗಿ ನೋಡಬೇಕು. ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ನೋಡಬಾರದು.

ಪರಿಚಯ: ಕವಿತೆ, ಕತೆ, ಭಾವಗೀತೆ, ಚಲನಚಿತ್ರಗೀತೆ ಸೇರಿದಂತೆ ಸಾಹಿತ್ಯದ ಎಲ್ಲ ತೆರನಾದ ಪ್ರಕಾರಗಳಲ್ಲಿಯೂ  ದೊಡ್ಡರಂಗೇಗೌಡ ಛಾಪು ಮೂಡಿಸಿದ್ದಾರೆ. ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ಕೆ. ರಂಗೇಗೌಡ ಮತ್ತು ಅಕ್ಕಮ್ಮ ದಂಪತಿಗೆ 1946ರ ಫೆ.7ರಂದು ಜನಿಸಿದ ಅವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು.

1982ರಲ್ಲಿ ‘ಆಲೆಮನೆ’ ಚಿತ್ರಕ್ಕೆ ಅವರು ಬರೆದ ಭಾವೈಕ್ಯ ಗೀತೆಗೆ ಸರ್ಕಾರವು ‘ವಿಶೇಷ ಗೀತೆ ಪ್ರಶಸ್ತಿ’ ನೀಡಿ ಗೌರವಿಸಿತು. ‘ಕಣ್ಣು ನಾಲಿಗೆ ಕಡಲು ಕಾವ್ಯ’, ‘ಜಗುಲಿ ಹತ್ತಿ ಇಳಿದು’, ‘ನಾಡಾಡಿ’, ‘ಮೌನ‌ ಸ್ಪಂದನ’ ಸೇರಿದಂತೆ ಹಲವು ಕವನ ಸಂಕಲನಗಳನ್ನು ರಚಿಸಿದ್ದಾರೆ. 80ಕ್ಕೂ ಅಧಿಕ ಕೃತಿಗಳನ್ನು ಬರೆದಿದ್ದಾರೆ. 600ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿದ್ದು, 10 ಚಲನಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಅವರಿಗೆ ಕೇಂದ್ರ ಸರ್ಕಾರವು 2018ರಲ್ಲಿ ‘ಪದ್ಮಶ್ರೀ’ ಪುರಸ್ಕಾರ ನೀಡಿ ಗೌರವಿಸಿದೆ.

ಅಧ್ಯಕ್ಷರಾಗಿ ಆಯ್ಕೆ: ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ದೊಡ್ಡರಂಗೇಗೌಡ ಆಯ್ಕೆಯಾಗಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಶುಕ್ರವಾರ ಈ ಆಯ್ಕೆ ಮಾಡಿದೆ. ಫೆ.26ರಿಂದ ಫೆ.28ರವರೆಗೆ ಸಮ್ಮೇಳನ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು