ಮಂಗಳವಾರ, ಮಾರ್ಚ್ 21, 2023
20 °C

ವೇಗದ ಭರದಲ್ಲಿ ಸುದ್ದಿಯ ಸಾರ ಮರೆಯದಿರಿ: ಪತ್ರಕರ್ತರಿಗೆ ಮುಖ್ಯಮಂತ್ರಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ವೇಗವಾಗಿ ಸುದ್ದಿ ಪ್ರಕಟಿಸುವ ಭರದಲ್ಲಿ ಪತ್ರಕರ್ತರು ಸುದ್ದಿಯ ಸಾರವನ್ನು ಮರೆಯಬಾರದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಲಹೆ ನೀಡಿದರು.

ಪತ್ರಿಕಾ ದಿನಾಚರಣೆ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳು ಜಂಟಿಯಾಗಿ ಗುರುವಾರ ಆಯೋಜಿಸಿದ್ದ ಆನ್‌ಲೈನ್‌ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎರಡು ಶತಮಾನಗಳ ಹಿಂದೆ ಹರ್ಮನ್‌ ಮೊಗ್ಲಿಂಗ್‌ ಮೂಲಕ ಕನ್ನಡ ಪತ್ರಿಕೋದ್ಯಮ ಆರಂಭವಾಯಿತು. ಈಗ ತಂತ್ರಜ್ಞಾನ ಮತ್ತು ಇಂಟರ್‌ನೆಟ್‌ ಸೇವೆಯ ಲಭ್ಯತೆಯಿಂದಾಗಿ ಪತ್ರಿಕೋದ್ಯಮದ ಸ್ವರೂಪವೇ ಬದಲಾಗಿದೆ. ಎಷ್ಟೇ ಅವಸರ, ಒತ್ತಡಗಳು ಇದ್ದರೂ ಸತ್ಯ, ಪ್ರಾಮಾಣಿಕತೆ ಮತ್ತು ವಸ್ತುನಿಷ್ಟತೆಯ ಆಧಾರದಲ್ಲೇ ಸುದ್ದಿಗಳನ್ನು ನೀಡುವುದನ್ನು ರೂಢಿಸಿಕೊಂಡರೆ ಮಾತ್ರ ಮಾಧ್ಯಮ ಕ್ಷೇತ್ರದ ನೈಜ ಧ್ಯೇಯದಂತೆ ನಡೆದಂತಾಗುತ್ತದೆ ಎಂದರು.

ಕೋವಿಡ್‌ ಅವಧಿಯಲ್ಲಿ ಪತ್ರಕರ್ತರು ಮತ್ತು ಮಾಧ್ಯಮ ಕ್ಷೇತ್ರದ ನೌಕರರ ಹಿತರಕ್ಷಣೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್‌ನಿಂದ ಮೃತಪಟ್ಟ 31 ಪತ್ರಕರ್ತರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ವಿತರಿಸಲಾಗಿದೆ. 25,000ಕ್ಕೂ ಹೆಚ್ಚು ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ಉಚಿತವಾಗಿ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ‘ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪತ್ರಕರ್ತರಿಗೆ ತಮಿಳುನಾಡು ಮಾದರಿಯಲ್ಲಿ ನೆರವು ನೀಡಬೇಕು. ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಆರೋಗ್ಯ ವಿಮೆ ಮತ್ತು ಬಸ್‌ ಸೌಲಭ್ಯ ಒದಗಿಸಬೇಕು’ ಎಂದು ಮನವಿ ಮಾಡಿದರು.

ಮುಖ್ಯಮಂತ್ರಿಯವರ ಸಲಹೆಗಾರ ಎಂ. ಲಕ್ಷ್ಮಿನಾರಾಯಣ, ಮಾಧ್ಯಮ ಸಲಹೆಗಾರ ಎನ್‌. ಭೃಂಗೀಶ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್‌. ಹರ್ಷ, ಇಂಡಿಯನ್‌ ಫೆಡರೇಷನ್‌ ಫಾರ್‌ ವರ್ಕಿಂಗ್‌ ಜರ್ನಲಿಸ್ಟ್ಸ್‌ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕಟ್ಟಡ ಸಮಿತಿ ಅಧ್ಯಕ್ಷ ಮದನ್‌ ಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮತ್ತಿಕೆರೆ ಜಯರಾಂ, ಲೋಕೇಶ್, ಪುಂಡಲೀಕ ಬಾಳೋಜಿ, ಬಿ. ಮಲ್ಲಿಕಾರ್ಜುನ, ಸಂಜೀವ್‌ ರಾವ್‌ ಕುಲಕರ್ಣಿ, ಉಮೇಶ್ವರ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಕೆಂಚೇಗೌಡ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು