ಬುಧವಾರ, ಸೆಪ್ಟೆಂಬರ್ 22, 2021
22 °C
ಆರು ರಾಜ್ಯಗಳ ಪೊಲೀಸ್ ಮುಖ್ಯಸ್ಥರ ಜತೆ ಮಾತುಕತೆ

ಡ್ರಗ್‌ ಸಾಗಣೆ ನಿಯಂತ್ರಣಕ್ಕೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿದೇಶ ಮತ್ತು ಹೊರ ರಾಜ್ಯಗಳಿಂದ ರಾಜ್ಯಕ್ಕೆ ಡ್ರಗ್‌ ಸಾಗಣೆಯಾಗದಂತೆ ನಿಯಂತ್ರಿಸಲು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಡ್ರಗ್‌ ಹಾವಳಿ ನಿಯಂತ್ರಿಸುವ ಕುರಿತು ಎಲ್ಲ ಜಿಲ್ಲೆಗಳ ಎಸ್‌ಪಿಗಳು, ನಗರ ಪೊಲೀಸ್‌ ಕಮಿಷನರ್‌ಗಳು ಮತ್ತು ಐಜಿಪಿಗಳ ಜತೆ ವಿಡಿಯೊ ಸಂವಾದ ನಡೆಸಿದ ಸಚಿವರು, ಮಾದಕವಸ್ತು ಪೂರೈಕೆ, ಸಾಗಣೆ ಮತ್ತು ಸೇವನೆ ಜಾಲವನ್ನು ಬಗ್ಗುಬಡಿಯಲು ವಿಶೇಷ ತನಿಖಾ ತಂಡಗಳನ್ನು ರಚಿಸುವಂತೆ ಆದೇಶಿಸಿದರು.

ಅಕ್ಕಪಕ್ಕದ ಆರು ರಾಜ್ಯಗಳ ಪೊಲೀಸ್‌ ಮುಖ್ಯಸ್ಥರನ್ನು ಸಂಪರ್ಕಿಸಿದ ಬೊಮ್ಮಾಯಿ, ಮಾದಕವಸ್ತು ಜಾಲದ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸುವಂತೆಯೂ ನಿರ್ದೇಶನ ನೀಡಿದರು.

ಆನ್‌ಲೈನ್‌ ವಹಿವಾಟು ಮತ್ತು ಕೊರಿಯರ್‌ ಸೇವೆಗಳ ಮೂಲಕ ರಾಜ್ಯಕ್ಕೆ ಡ್ರಗ್‌ ಪೂರೈಕೆಯಾಗುತ್ತಿರುವುದನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಹಿಂದೆ ಮಾದಕ ವಸ್ತು ಸಂಬಂಧಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳ ಮೇಲೆ ನಿರಂತರ ನಿಗಾ ಇರಿಸಬೇಕು. ಮಾದಕವಸ್ತು ಪೂರೈಕೆ ಜಾಲದ ಪ್ರಮುಖ ಅಪರಾಧಿಗಳನ್ನು ಪತ್ತೆಮಾಡಿ ಬಂಧಿಸಬೇಕು. ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಮೇಲೆ ನಿಗಾ ಇರಿಸಬೇಕು ಎಂದು ಸಚಿವರು ಸೂಚಿಸಿದರು.

ಮಾದಕದ್ರವ್ಯವನ್ನು ಒಳಗೊಂಡಿರುವ ಔಷಧಗಳ ದುರ್ಬಳಕೆ ಆಗದಂತೆ ಎಚ್ಚರಿಕೆ ವಹಿಸಬೇಕು. ಇದನ್ನು ನಿಯಂತ್ರಿಸಲು ಪೊಲೀಸರು ಔಷಧ ನಿಯಂತ್ರಕರ ಜೊತೆಗೂಡಿ ಕೆಲಸ ಮಾಡಬೇಕು. ರಾಜ್ಯದಲ್ಲಿ ಗಾಂಜಾ ಬೆಳೆಯುವ ಪ್ರಕರಣಗಳು ಹೆಚ್ಚುತ್ತಿದ್ದು, ವ್ಯಾಪಕ ಶೋಧ ನಡೆಸಿ ಪತ್ತೆ ಮಾಡಬೇಕು. ಗಾಂಜಾ ಬೆಳೆಯನ್ನು ಸಂಪೂರ್ಣ ನಾಶ ಮಾಡಬೇಕು. ಅಫೀಮು ಬಳಸಿ ಕೆಳ ದರ್ಜೆಯ ಹೆರಾಯಿನ್‌ ಉತ್ಪಾದಿಸುವ ಘಟಕಗಳನ್ನೂ ಪತ್ತೆಮಾಡಿ ನಾಶಪಡಿಸಬೇಕು ಎಂದು ಗೃಹ ಸಚಿವರು ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಮಾದಕ ವಸ್ತು ಜಾಲವನ್ನು ಬೇರುಸಮೇತ ಕಿತ್ತುಹಾಕಲು ಶ್ರಮಿಸಬೇಕು. ಮಾದಕವಸ್ತು ಪ್ರಕರಣಗಳಲ್ಲಿ ಬಂಧಿತರಾಗುವವರ ವಿರುದ್ಧ ಗೂಂಡಾ ಕಾಯ್ದೆಯನ್ನೂ ಪ್ರಯೋಗಿಸಬೇಕು. ಅಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲು ಪ್ರಾಸಿಕ್ಯೂಷನ್‌ ಅಧಿಕಾರಿಗಳಿಗೆ ಪೊಲೀಸರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು