ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈರುಳ್ಳಿ’ಯ ಹೆಸರಲ್ಲಿ ಡ್ರಗ್ಸ್‌ ವ್ಯವಹಾರ

ಮಾದಕ ಪದಾರ್ಥ ಮಾರಾಟ: ಅಗೆದಷ್ಟು ಆಳದ ಜಾಲ l ಕತ್ತಲ ಸಾಮ್ರಾಜ್ಯಕ್ಕೆ ಡಾರ್ಕ್‌ನೆಟ್ l ಪೆಡ್ಲರ್‌ಗಳ ಹೆಜ್ಜೆ ಪತ್ತೆ ಬಲು ಕಷ್ಟ
Last Updated 7 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಅಂತರ್ಜಾಲವನ್ನೇ ಡ್ರಗ್ಸ್ ವ್ಯವಹಾರಕ್ಕೆ ಬಳಸಿಕೊಂಡಿರುವ ಪೆಡ್ಲರ್‌ಗಳು, ‘ಡಾರ್ಕ್‌ನೆಟ್’ ಅಸ್ತ್ರದಿಂದ ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುತ್ತಿರುವ ಸಂಗತಿ ಸಿಸಿಬಿ ಹಾಗೂ ಸಿಐಡಿ ತನಿಖೆಯಿಂದ ಹೊರಬಿದ್ದಿದೆ.

ಕೇರಳ, ಆಂಧ್ರಪ್ರದೇಶದಲ್ಲಿ ಬೆಳೆಯುವ ಗಾಂಜಾವನ್ನು ಕರ್ನಾಟಕಕ್ಕೆ ತಂದು ಮಾರುವ ಜಾಲಗಳು ಇವೆ. ಇಲ್ಲಿ ಕೋಡಿಂಗ್‌ ವ್ಯವಹಾರ ನಡೆಯುವುದು ವಿರಳ. ಇಂಥ ಜಾಲವನ್ನು ಬೇಗನೇ ಭೇದಿಸಬಹುದು. ಆದರೆ, ತಂತ್ರಜ್ಞಾನ ಬಳಸಿಕೊಂಡು ಕೋಡಿಂಗ್‌ ಮೂಲಕ ಡ್ರಗ್ಸ್ ದಂಧೆ ನಡೆಸುವ ಪೆಡ್ಲರ್‌ಗಳನ್ನು ಹಿಡಿಯುವುದು ಕಷ್ಟ ಎಂಬುದು ಪೊಲೀಸ್ ಅಧಿಕಾರಿಯೊಬ್ಬರ ಅಭಿಪ್ರಾಯ.

ಡ್ರಗ್ಸ್‌ ವಿರುದ್ಧ ಸಮರ ಸಾರಿರುವ ಸಿಸಿಬಿ ಹಾಗೂ ಸಿಐಡಿ, ಮೇಲಿಂದ ಮೇಲೆ ಡ್ರಗ್ಸ್ ಆರೋಪಿಗಳನ್ನು ಬಂಧಿಸುತ್ತಿವೆ. ಆ ಪೈಕಿ ಬಹುತೇಕರು, ‘ಡಾರ್ಕ್‌ನೆಟ್‌’ ಮೂಲಕ ವ್ಯವಹಾರ ನಡೆಸಿದ್ದು ಬಯಲಾಗಿದೆ.

‘ಅಂತರ್ಜಾಲದಲ್ಲಿ ‘ಡಿಪ್’ ಹಾಗೂ ‘ಡಾರ್ಕ್‌’ ಎಂಬ ಎರಡು ಪ್ರಕಾರದ ಸರ್ಚ್‌ ಎಂಜಿನ್‌ಗಳಿವೆ. ಹೆಚ್ಚು ಜನರು ಬಳಸುವ ‘ಗೂಗಲ್ ಡಾಟ್ ಕಾಮ್’ ಡಿಪ್ ನೆಟ್‌ಗೆ ಉದಾಹರಣೆ. ಅದಕ್ಕೆ ವಿರುದ್ಧವಾಗಿರುವ ಸರ್ಚ್‌ ಎಂಜಿನ್‌ಗಳೇ ಡಾರ್ಕ್‌ನೆಟ್‌ (ಡಾರ್ಕ್‌ವೆಬ್‌) ಪಟ್ಟಿಗೆ ಸೇರುತ್ತವೆ. ಇದೊಂದು ಕತ್ತಲಿನ ಸಾಮ್ರಾಜ್ಯವಾಗಿದ್ದು, ಇಲ್ಲಿ ಕೋಡಿಂಗ್ ಸಂವಹನದಿಂದಲೇ ಅಕ್ರಮ ಚಟುವಟಿಕೆಗಳು ನಡೆಯುತ್ತವೆ’ ಎಂದು ಸಿಐಡಿಯ ಸೈಬರ್‌ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.

‘ಡಾರ್ಕ್‌ನೆಟ್‌ನಲ್ಲಿ ಬಹುಪಾಲು ಸರ್ಚ್‌ ಎಂಜಿನ್‌ಗಳು, ‘ಆನಿಯನ್ (ಈರುಳ್ಳಿ)’ ಡೊಮೈನ್ ಹೆಸರಿನಲ್ಲೇ ಚಿರಪರಿಚಿತ. ‘ಈರುಳ್ಳಿ’ ಹಾಗೂ ಇತರೆ ಕೋಡಿಂಗ್‌ ಮೂಲಕ ಡ್ರಗ್ಸ್ ದಂಧೆ ಜೀವಂತವಾಗಿದೆ. ಉದಾಹರಣೆಗೆ ‘**** ಡಾಟ್ ಆನಿಯನ್’ ಎಂಬುದು ಡಾರ್ಕ್‌ನೆಟ್‌ ಭಾಗವೇ. ಇಂಥ ಸಾವಿರಾರು ಸರ್ಚ್‌ ಎಂಜಿನ್‌
ಗಳು ಹಾಗೂ ಅದಕ್ಕೆ ತಕ್ಕ ಮೊಬೈಲ್‌ ಆ್ಯಪ್‌ಗಳು ಲಭ್ಯ ಇವೆ. ಇದರಲ್ಲಿ ನಡೆಯುವ ಮಾತುಕತೆ ಹಾಗೂ ವ್ಯವಹಾರ ಮೂರನೇ ವ್ಯಕ್ತಿಗೆ ತಿಳಿಯುವುದೇ ಇಲ್ಲ’ ಎಂದೂ ಅವರು ವಿವರಿಸಿದರು.

‘ಡಾರ್ಕ್‌ನೆಟ್‌ನಲ್ಲಿ ದಂಧೆಗಳ ರಾಶಿಯೇ ಇದೆ. ಇಲ್ಲಿ ಒಬ್ಬರ ಮುಖ ಮತ್ತೊಬ್ಬರಿಗೆ ಹಾಗೂ ಒಬ್ಬರ ಮಾಹಿತಿ ಮತ್ತೊಬ್ಬರಿಗೆ ಗೊತ್ತಾಗುವುದಿಲ್ಲ. ಏನು ಬೇಕು? ಎಷ್ಟು ಬೇಕು? ಎಂಬುದಷ್ಟೇ ಮುಖ್ಯ. ಖರೀದಿಸಿದ ವಸ್ತು, ಕೊರಿಯರ್ ಹಾಗೂ ಇತರೆ ಮಾರ್ಗದಲ್ಲಿ ಖರೀದಿದಾರರ ವಿಳಾಸಕ್ಕೆ ಬರುತ್ತದೆ. ಈ ಮಾಹಿತಿಯನ್ನು ಕೆಲ ಆರೋಪಿಗಳೇ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ರೂಪದರ್ಶಿ ಬಂಧನ, ರಾಗಿಣಿ ಚಾಲಕ ವಶಕ್ಕೆ

ಅಂತರರಾಷ್ಟ್ರೀಯ ಡ್ರಗ್ಸ್ ಜಾಲದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ರೂಪದರ್ಶಿ ನಿಯಾಜ್‌ನನ್ನು ಬಂಧಿಸಿದ್ದು, ನಟಿ ರಾಗಿಣಿ ದ್ವಿವೇದಿ ಅವರ ಕಾರು ಚಾಲಕನನ್ನು ಸೋಮವಾರ ವಶಕ್ಕೆ ಪಡೆದಿದ್ದಾರೆ.

‘ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನಿಯಾಜ್ ಸಹ ಆರೋಪಿ. ವೃತ್ತಿಯಿಂದ ಮಾಡೆಲ್‌ ಆತ, ಇತ್ತೀಚೆಗೆ ಡ್ರಗ್ಸ್ ಜಾಲದಲ್ಲೇ ಹೆಚ್ಚು
ಸಕ್ರಿಯನಾಗಿದ್ದ. ಆತನನ್ನು ಬಂಧಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈಗಾಗಲೇ ಬಂಧಿತರಾಗಿರುವ ದೆಹಲಿಯ ವಿರೇನ್‌ ಖನ್ನಾ ಜೊತೆಯಲ್ಲಿ ನಿಯಾಜ್ ಒಡನಾಟವಿಟ್ಟುಕೊಂಡಿದ್ದ. ಆತನ ಸೂಚನೆಯಂತೆ ಬೆಂಗಳೂರು ಹಾಗೂ ಹಲವು ನಗರ ಗಳಲ್ಲಿ ಪಾರ್ಟಿ ಆಯೋಜಿಸುತ್ತಿದ್ದ. ಪೆಡ್ಲರ್‌ಗಳನ್ನು ಸಂಪರ್ಕಿಸಿ, ಪಾರ್ಟಿಗೆ ಅಗತ್ಯವಿರುವಷ್ಟು ಡ್ರಗ್ಸ್ ತರಿಸುತ್ತಿದ್ದ ಎಂಬ ಮಾಹಿತಿ ಇದೆ’ ಎಂದೂ ತಿಳಿಸಿದರು. ‘ರಾಗಿಣಿ ಸ್ನೇಹಿತ ಬಿ.ಕೆ. ರವಿಶಂಕರ್, ನಿಯಾಜ್‌ ಬಗ್ಗೆ ಬಾಯ್ಬಿಟ್ಟಿದ್ದ. ಡ್ರಗ್ಸ್ ಜಾಲದಲ್ಲಿ ನಯಾಜ್ ಸಹ ಪಾಲುದಾರನಾಗಿದ್ದ ಎಂಬುದು ಗೊತ್ತಾಗಿದೆ’ ಎಂದೂ ಅಧಿಕಾರಿ ಹೇಳಿದರು.

ಬಿಟ್‌ ಕಾಯಿನ್ ಪಾವತಿ

‘ನಗದು, ಡೆಬಿಟ್, ಕ್ರೆಡಿಟ್‌ ಕಾರ್ಡ್‌ಗಳಿಗೆ ಡಾರ್ಕ್‌ನೆಟ್‌
ನಲ್ಲಿ ಆಸ್ಪದವಿಲ್ಲ. ಕ್ರಿಪ್ಟೊ ಕರೆನ್ಸಿ ಹಾಗೂ ಬಿಟ್‌ ಕಾಯಿನ್‌ಗೆ ಮಾತ್ರ ಮಾನ್ಯತೆ. ಇಂಥ ಕರೆನ್ಸಿ ಯಾರಿಗೆ ಹೋಗುತ್ತದೆ ಎಂಬ ಮಾಹಿತಿಯೂ ಮೂರನೇ ವ್ಯಕ್ತಿಗೆ ತಿಳಿಯುವುದಿಲ್ಲ’ ಎಂದು ಅಧಿಕಾರಿ ಹೇಳಿದರು.

ಮೂಲ ಎಲ್ಲಿ? ಬಳಕೆ ಎಲ್ಲಿ?

ಬೆಂಗಳೂರು:ಭಾರತದಲ್ಲಿ ಮಾದಕವಸ್ತುಗಳ ಬಳಕೆ ದೊಡ್ಡ ಪ್ರಮಾಣದಲ್ಲಿಯೇ ಇದೆ. ಕೆಲವು ಸ್ವರೂಪದ ಮಾದಕವಸ್ತುಗಳನ್ನು ವಿದೇಶಗಳಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಬಳಕೆಯಾಗುವ ಮಾದಕವಸ್ತುಗಳಲ್ಲಿ ಬಹುಪಾಲನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ಉತ್ತರ ಅಮೆರಿಕ, ಯುರೋಪ್‌, ಆಗ್ನೇಯ ಏಷ್ಯಾದ ಕೆಲವು ರಾಷ್ಟ್ರಗಳಿಗೆ ಭಾರತದಿಂದ ವಿಪರೀತ ಪ್ರಮಾಣದ ಮಾದಕವಸ್ತು ಕಳ್ಳಸಾಗಣೆಯಾಗುತ್ತದೆ ಎಂದುಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿಯ ವರದಿ ಹೇಳುತ್ತದೆ.

ಭಾರತದಲ್ಲಿ ಗಾಂಜಾ, ಅಫೀಮು, ಕೊಕೇನ್ ಮತ್ತು ಹೆರಾಯಿನ್‌ ಬಳಕೆ ಹೆಚ್ಚು. ಮಾದಕ ಪದಾರ್ಥ ಬಳಕೆದಾರರಲ್ಲಿ 10–75 ವರ್ಷದ ವರೆಗಿನ ವಯೋಮಾನದವರು ಇದ್ದಾರೆ. ಮಾದಕ ವಸ್ತು ಬಳಕೆಯಲ್ಲಿ ಮಹಿಳೆಯರು ಮತ್ತು ಪುರುಷರು ಎಂಬ ಭೇದವೇನೂ ಇಲ್ಲ. ಮೇಲೆ ಹೇಳಿದ ಮಾದಕವಸ್ತುಗಳು ಮಾತ್ರವಲ್ಲದೆ, ಕೆಲವು ನಿಷೇಧಿತ ಔಷಧಗಳನ್ನೂ ನಶೆ ಏರಿಸಿಕೊಳ್ಳಲು ಬಳಸಲಾಗುತ್ತದೆ.ಮಾತ್ರೆಗಳು ಮತ್ತು ಲಸಿಕೆ ರೂಪದಲ್ಲಿ ಇವುಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ. ಇವುಗಳ ಬಳಕೆಯೂ ವ್ಯಾಪಕವಾಗಿ ಇದೆ. ನೋವು ನಿವಾರಕಗಳ ಹೆಸರಿನಲ್ಲಿ ಇವುಗಳ ಬಳಕೆಯನ್ನು ಉತ್ತೇಜಿಸಲಾಗುತ್ತದೆ. ಔಷಧದ ಅಂಗಡಿಗಳಲ್ಲೂ ಇವುಗಳನ್ನು ಮಾರಾಟ ಮಾಡಲಾಗುತ್ತದೆ ಎನ್ನುತ್ತದೆ ವರದಿ.

ಗಾಂಜಾ, ಅಫೀಮು ಮತ್ತು ಗಸಗಸೆಯನ್ನು ಭಾರತದಲ್ಲಿ ಅಕ್ರಮವಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ಬೆಳೆಯುವ ಮಾದಕವಸ್ತುಗಳಲ್ಲಿ ಗಾಂಜಾದ ಪ್ರಮಾಣ ಅತ್ಯಂತ ಹೆಚ್ಚು. ದೇಶದಲ್ಲಿ ಐದಾರು ವರ್ಷಗಳಲ್ಲಿ ವಶಪಡಿಸಿಕೊಂಡಿರುವ ಗಾಂಜಾದ ಪ್ರಮಾಣವೇ ಇದನ್ನು ಪುಷ್ಟೀಕರಿಸುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

–3,446 ಹೆಕ್ಟೇರ್‌ನಷ್ಟು ಗಾಂಜಾ ಬೆಳೆಯನ್ನು 2017ರಲ್ಲಿ ಭಾರತದಲ್ಲಿ ನಾಶ ಮಾಡಲಾಗಿದೆ

–1,980 ಹೆಕ್ಟೇರ್‌ನಷ್ಟು ಗಾಂಜಾ ಬೆಳೆಯನ್ನು 2018ರಲ್ಲಿ ಭಾರತದಲ್ಲಿ ನಾಶ ಮಾಡಲಾಗಿದೆ

–266.5 ಟನ್‌ಗಳಷ್ಟು ಗಾಂಜಾವನ್ನು 2018ರಲ್ಲಿ ವಶಕ್ಕೆ ಪಡೆಯಲಾಗಿತ್ತು. 2018ರಲ್ಲಿ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ವಶಕ್ಕೆ ಪಡೆಯಲಾದ ಗಾಂಜಾದಲ್ಲಿ ಭಾರತದ ಪಾಲು ಶೇ 79ರಷ್ಟು


ದೇಶದಲ್ಲಿ ವಶಕ್ಕೆ ಪಡೆದ ಅಫೀಮು
1.7 ಟನ್;2015

2.3 ಟನ್;2016

2.6 ಟನ್;2017

4.1 ಟನ್;2018

ಡಾರ್ಕ್‌ನೆಟ್‌ನಲ್ಲಿ ನಡೆಯುವ ದಂಧೆಗಳು

ಡ್ರಗ್ಸ್ – ಶೇ 15.44

ಹ್ಯಾಕಿಂಗ್ – ಶೇ 4.25

ಹಣಕಾಸಿನ ವಂಚನೆ – ಶೇ 9

ಕಿರುಕುಳ – ಶೇ 2.2

ನೀಲಿಚಿತ್ರಗಳು – ಶೇ 2.75

ಲಿಂಕ್‌ ವಂಚನೆ – ಶೇ 3.3

ಶಸ್ತ್ರಾಸ್ತ್ರ – ಶೇ 2


ಆಧಾರ: ಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿ ವಾರ್ಷಿಕ ವರದಿ 2019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT