ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್: ಅಕುಲ್ ಬಾಲಾಜಿ, ಯುವರಾಜ್‌ಗೆ ನೋಟಿಸ್‌

ಲಾಕ್‌ಡೌನ್‌ ವೇಳೆ ಫಾರ್ಮ್‌ಹೌಸ್‌ನಲ್ಲಿ ಪಾರ್ಟಿ ? :ನಟ–ನಟಿಯರು ಭಾಗಿಯಾರುವ ಶಂಕೆ
Last Updated 18 ಸೆಪ್ಟೆಂಬರ್ 2020, 19:53 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ರಿಯಾಲಿಟಿ ಶೋ ನಿರೂಪಕ ಅಕುಲ್ ಬಾಲಾಜಿ, ಕಾಂಗ್ರೆಸ್ ಮುಖಂಡಆರ್‌.ವಿ. ದೇವರಾಜ್‌ ಮಗಆರ್.ವಿ. ಯುವರಾಜ್ ಹಾಗೂ ‘ನೂರು ಜನ್ಮಕು’ ಸಿನಿಮಾ ನಟ ಸಂತೋಷ್‌ ಕುಮಾರ್‌ಗೆ ನೋಟಿಸ್ ನೀಡಿದ್ದಾರೆ.

‘ಡ್ರಗ್ಸ್ ಜಾಲದಲ್ಲಿ ಕೆಲ ಮಾಹಿತಿ ಸಂಗ್ರಹಿಸಲಾಗಿದ್ದು, ನಿಮ್ಮ ಹೇಳಿಕೆಯ ಅಗತ್ಯವಿದೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದು ವಿಚಾರಣೆ ಎದುರಿಸಬೇಕು’ ಎಂದು ಪೊಲೀಸರು ನೋಟಿಸ್‌ನಲ್ಲಿ ಹೇಳಿದ್ದಾರೆ.

‘ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಡಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಕೆಲ ಆರೋಪಿಗಳು ಹಾಗೂ ಸಾಕ್ಷಿಗಳ ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿ ಕಲೆಹಾಕಲಾಗಿದೆ. ಇದನ್ನು ಆಧರಿಸಿ ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಹಾಗೂ ಆರ್.ವಿ.
ಯುವರಾಜ್‌ಗೆ ನೋಟಿಸ್‌ ನೀಡಲಾಗಿದೆ’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

‘ಮೂವರು ವಿಚಾರಣೆಗೆ ಹಾಜರಾದ ಬಳಿಕ ಸಿಸಿಬಿ ಅಧಿಕಾರಿಗಳು ಹೇಳಿಕೆ ಪಡೆಯಲಿದ್ದಾರೆ. ಅದನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಿದ್ದಾರೆ’ ಎಂದೂ ಹೇಳಿದರು.

ಲಾಕ್‌ಡೌನ್ ವೇಳೆಯಲ್ಲೇ ಪಾರ್ಟಿ: ‘ದೊಡ್ಡಬಳ್ಳಾಪುರ ಸಮೀಪದ ಲಘುಮೇನಹಳ್ಳಿ ಬಳಿ ಅಕುಲ್ ಬಾಲಾಜಿಗೆ ಸೇರಿದ್ದ ಫಾರ್ಮ್‌ಹೌಸ್ ಇದೆ. ಅಲ್ಲಿಯೇ ಲಾಕ್‌ಡೌನ್‌ ಸಂದರ್ಭದಲ್ಲಿ ಹಲವು ಬಾರಿ ಪಾರ್ಟಿ ನಡೆದಿರುವ ಅನುಮಾನವಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಪಾರ್ಟಿಯಲ್ಲಿ ಕೆಲವರಿಗೆ ಡ್ರಗ್ಸ್ ಪೂರೈಕೆ ಮಾಡಿರುವ ಸಂಶಯ ಇದೆ. ಪಾರ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ಕೆಲ ನಟ–ನಟಿಯರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ಪಾಲ್ಗೊಂಡಿರುವ ಮಾಹಿತಿಯೂ ಇದೆ’ ಎಂದೂ ಮೂಲಗಳು ಹೇಳಿವೆ.

ಮಾಜಿ ಕಾರ್ಪೋರೇಟರ್‌ ಪಾತ್ರ: ಕಾಂಗ್ರೆಸ್ ಮುಖಂಡ ಆರ್‌.ವಿ.ದೇವರಾಜ್ ಅವರ ಪುತ್ರ, ಬಿಬಿಎಂಪಿ ಮಾಜಿ ಸದಸ್ಯ ಆರ್‌.ವಿ.ಯುವರಾಜ್ ಅವರು ಬಂಧಿತ ರಾಹುಲ್ ಹಾಗೂ ವೈಭವ್ ಜೈನ್ ಜೊತೆಯಲ್ಲಿ ಒಡನಾಟವಿಟ್ಟುಕೊಂಡಿದ್ದರು ಎನ್ನಲಾಗಿದೆ. ಅವರು ಆಯೋಜಿಸಿದ್ದ ಪಾರ್ಟಿಗಳಲ್ಲೂ ಪಾಲ್ಗೊಂಡಿದ್ದರೆಂಬ ಮಾಹಿತಿ ಸಿಸಿಬಿಗೆ ಸಿಕ್ಕಿದೆ.

ಇತ್ತೀಚೆಗೆ ವಿಚಾರಣೆ ಎದುರಿಸಿದ್ದ ತಾರಾ ಜೋಡಿ ದಿಗಂತ–ಐಂದ್ರಿತಾ ರೇ, ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರ ಬಗ್ಗೆ ಸಿಸಿಬಿಗೆ ಮಾಹಿತಿ ನೀಡಿರುವುದಾಗಿ ಗೊತ್ತಾಗಿದೆ. ‘ನೂರು ಜನ್ಮಕು’ ಸಿನಿಮಾದಲ್ಲಿ ನಟ ಸಂತೋಷ್‌ಕುಮಾರ್ ಹಾಗೂ ನಟಿ ಐಂದ್ರಿತಾ ಅಭಿನಯಿಸಿ
ದ್ದರು. ಅದರ ಮೂಲಕವೇ ಅವರಿಬ್ಬರ ನಡುವೆ ಒಡನಾಟ ಬೆಳೆದಿತ್ತು ಎನ್ನಲಾಗಿದೆ.

ಇದೇ 30ರವರೆಗೆ ಸಂಜನಾಗೆ ಜೈಲು

ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿಸಲಾಗಿರುವ ನಟಿ ಸಂಜನಾ ಗಲ್ರಾನಿ ಅವರನ್ಯಾಯಾಂಗ ಬಂಧನ ಅವಧಿಯನ್ನು ಸೆ. 30ರವರೆಗೆ ವಿಸ್ತರಿಸಲಾಗಿದೆ. ಜಾಮೀನು ಕೋರಿಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನೂ ಮುಂದೂಡಲಾಗಿದೆ.

ಡ್ರಗ್ಸ್‌ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ

‘ಡ್ರಗ್ಸ್‌‍ಪ್ರಕರಣದ ತನಿಖೆಯಲ್ಲಿ ಕಾಂಗ್ರೆಸ್‌ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಪೊಲೀಸರು ತನಿಖೆಯ ವೇಳೆ ಲಭಿಸಿದ ಮಾಹಿತಿ ಆಧರಿಸಿ ಮುಂದಿನ ವಿಚಾರಣೆ ನಡೆಸುತ್ತಾರೆ. ತಪ್ಪು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ, ರಾಜಕೀಯ ಒತ್ತಡಕ್ಕೆ ಮಣಿದು ಯಾರನ್ನೂ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಬಾರದು’ ಎಂದರು.

‘ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮ್ಮದ್ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿಲ್ಲ. ಬೀದಿಯಲ್ಲಿ ಹೋಗುವವರು ಏನೇನೋ ಮಾತನಾಡುತ್ತಾರೆ. ಜಮೀರ್‌ ವೈಯಕ್ತಿಕವಾಗಿ ಕೊಲಂಬೊಗಾದರೂ ಹೋಗಲಿ, ಅಮೆರಿಕಕ್ಕಾದರೂ ಹೋಗಲಿ. ಅವರ ಹಣದಲ್ಲಿ ಹೋಗುತ್ತಾರೆ. ರಸ್ತೆಯಲ್ಲಿ ಮಾತಾಡಿದವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಜಮೀರ್‌ ಒಬ್ಬ ಜವಾಬ್ದಾರಿಯುತ ಶಾಸಕ. ಈ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂಬುದು ಅವರಿಗೆ ಗೊತ್ತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಂತ್ರಿಗಳು ತನಿಖೆ ನಡೆಸುತ್ತಿದ್ದಾರಾ?:

‘ಈ ಪ್ರಕರಣದಲ್ಲಿ ಒಬ್ಬೊಬ್ಬ ಮಂತ್ರಿ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಪೊಲೀಸರು ತನಿಖೆ ಮಾಡುತ್ತಿದ್ದಾರೊ? ಅಥವಾ ಮಂತ್ರಿಗಳೇ ತನಿಖೆ ನಡೆಸುತ್ತಿದ್ದಾರೊ? ಎಂಬ ಅನುಮಾನ ಮೂಡುತ್ತಿದೆ’ ಎಂದು ಶಿವಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT