ಬೆಂಗಳೂರು: ಸಿಐಡಿ ಡಿವೈಎಸ್ಪಿ ವಿ. ಲಕ್ಷ್ಮಿ (33) ಆತ್ಮಹತ್ಯೆ ಪ್ರಕರಣ ಸಂಬಂಧ, ಅವರ ಸ್ನೇಹಿತ ಸೇರಿ ನಾಲ್ವರನ್ನು ಅನ್ನಪೂರ್ಣೆಶ್ವರಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
‘ಕೋಣನಕುಂಟೆ ನಿವಾಸಿ ಆಗಿದ್ದ ಲಕ್ಷ್ಮಿ, ನಾಗರಬಾವಿಯಲ್ಲಿರುವ ಸ್ನೇಹಿತನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಲಕ್ಷ್ಮಿ ಅವರ ತಂದೆ ವೆಂಕಟೇಶ್ ದೂರು ನೀಡಿದ್ದಾರೆ. ಅದರನ್ವಯ ಸ್ನೇಹಿತ ಮನೋಹರ್, ಪ್ರಜ್ವಲ್, ವಸಂತ್ ಹಾಗೂ ರಂಜಿತ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕೌಟುಂಬಿಕ ಕಲಹದಿಂದಾಗಿ ಲಕ್ಷ್ಮಿ ಮಾನಸಿಕವಾಗಿ ನೊಂದಿದ್ದರು. ಅದೇ ಕಾರಣಕ್ಕೆ ಬುಧವಾರ ರಾತ್ರಿ ಸ್ನೇಹಿತರೆಲ್ಲರೂ ಒಟ್ಟಿಗೆ ಸೇರಿ ಗುತ್ತಿಗೆದಾರನೂ ಆಗಿರುವ ಮನೋಹರ್ ಮನೆಯಲ್ಲಿ ಪಾರ್ಟಿ ಮಾಡಿದ್ದರು. ಅದಾದ ನಂತರವೇ ಲಕ್ಷ್ಮಿ ಕೊಠಡಿಗೆ ಹೋಗಿ ಮಲಗಿದ್ದರು. ಬೆಳಿಗ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಕಂಡಿತ್ತು’ ಎಂದೂ ಮೂಲಗಳು ಹೇಳಿವೆ.
‘ಎರಡು ದಿನಗಳ ಹಿಂದಷ್ಟೇ ಲಕ್ಷ್ಮಿ ಅವರ ಪತಿ ಹೈದರಾಬಾದ್ ಹೋಗಿರುವುದಾಗಿ ದೂರುದಾರ ವೆಂಕಟೇಶ್ ತಿಳಿಸಿದ್ದಾರೆ. ಇದರ ನಡುವೆಯೇ ಈ ಘಟನೆ ನಡೆದಿದೆ. ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ’ ಎಂದೂ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.