ಶನಿವಾರ, ಜೂನ್ 25, 2022
24 °C
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಲಗತ್ತಿಸಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ನಾಯಕರು

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ರೋಹಿತ್‌ ಚಕ್ರತೀರ್ಥ ವಜಾಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು 5 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದರೆನ್ನಲಾದ ಪೋಸ್ಟ್‌ ಒಂದನ್ನು ಲಗತ್ತಿಸಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ನಾಯಕರು, ಚಕ್ರತೀರ್ಥ ಅವರನ್ನು ಸಮಿತಿಯಿಂದ ವಜಾ ಮಾಡುವಂತೆ ಆಗ್ರಹಿಸಿದ್ದಾರೆ.

ಟ್ವೀಟ್‌ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 'ನಾಡಗೀತೆಯನ್ನು ಅವಹೇಳನ ಮಾಡಿದ, ರಾಷ್ಟ್ರಕವಿಯನ್ನು ಗೇಲಿ ಮಾಡಿದ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾನ-ಮರ್ಯಾದೆ ಏನಾದರೂ ಇದ್ದರೆ ಮೊದಲು ಆತನನ್ನು ಕಿತ್ತುಹಾಕಬೇಕು' ಎಂದು ಒತ್ತಾಯಿಸಿದ್ದಾರೆ.

ರೋಹಿತ್ ಚಕ್ರತೀರ್ಥ ಅವರು ಈ ಹಿಂದೆ (2017ರ ಮಾರ್ಚ್‌ 16) ನಾಡಗೀತೆಯನ್ನು ತಿರುಚಿ ಬರೆದಿದ್ದಾರೆ ಎನ್ನಲಾದ ಪೋಸ್ಟ್ ಅನ್ನು ತಮ್ಮ ಆಗ್ರಹದೊಂದಿಗೆ ಸಿದ್ದರಾಮಯ್ಯ ಲಗತ್ತಿಸಿದ್ದಾರೆ.

ರೋಹಿತ್‌ ಚಕ್ರತೀರ್ಥ ಅವರ ಇದೇ ಪೋಸ್ಟ್‌ ಲಗತ್ತಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ, ‘ಶಿಕ್ಷಣ ತಜ್ಞರು, ವಿದ್ವಾಂಸರು ಇರಬೇಕಾದ ಪಠ್ಯಪುಸ್ತಕ ಸಮಿತಿಗೆ ₹2 ಟ್ರಾಲ್‌ಗಳು, ಬಿಜೆಪಿಯ ಬಾಡಿಗೆ ಭಾಷಣಕಾರರನ್ನು ಕೂರಿಸಿ ಮಕ್ಕಳಿಗೆ ಸುಳ್ಳಿನ ಶೂರರ ಪಾಠ ಹೇಳಿಸುವುದು ವಿಪರ್ಯಾಸ. ನಾಡು ನುಡಿಗೆ, ಕುವೆಂಪು ಅವರಿಗೆ ಅವಮಾನಿಸಿದ ಈತನ ಟ್ರೋಲ್ ಪಾಂಡಿತ್ಯವೇ ಅರ್ಹತೆಯೇ? ಕೂಡಲೇ ಈತನನ್ನು ಕಿತ್ತೆಸೆದು ಮಕ್ಕಳ ಭವಿಷ್ಯವನ್ನು ಸರ್ಕಾರ ಕಾಪಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಕುವೆಂಪುಗೆ ಅವಮಾನ: ಖಂಡನೆ
ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರು ಕುವೆಂಪು ಮತ್ತು ನಾಡಗೀತೆಗೆ ಅವಮಾನ ಮಾಡಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘ ದೂರಿದೆ. ರೋಹಿತ್ ಚಕ್ರತೀರ್ಥ ಅವರು ಈ ಹಿಂದೆ ತಿರುಚಿದ ನಾಡಗೀತೆಯ ಸಾಲುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವುದರ ಮೂಲಕ ನಾಡಗೀತೆಗೆ ಅವಮಾನ ಮಾಡಿದ್ದರು. ಇದು ನಾಡಗೀತೆಗೆ ಅಷ್ಟೇ ಅಲ್ಲದೆ ಇಡೀ ಕನ್ನಡನಾಡಿಗೆ ಮತ್ತು ವಿಶ್ವಮಾನವತೆಯ ಸಂದೇಶ ಸಾರಿದ ಕುವೆಂಪು ಅವರಿಗೆ ಮಾಡಿದ ಅವಮಾನವಾಗಿದೆ. ಇದನ್ನು ರಾಜ್ಯ ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದೆ. ರೋಹಿತ್ ಚಕ್ರತೀರ್ಥ ಅವರು ತಮ್ಮ ಈ ಬೇಜವಾಬ್ದಾರಿ ಮತ್ತು ಅಗೌರವಯುತ ನಡವಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪರೆಡ್ಡಿ ತಿಳಿಸಿದ್ದಾರೆ.

31ಕ್ಕೆ ಪ್ರತಿಭಟನೆ
ಬೆಂಗಳೂರು: ಪಠ್ಯಪುಸ್ತಕಗಳ ಪರಿಷ್ಕರಣೆ ವಿರೋಧಿಸಿ ಇದೇ 31 ರಂದು ವಿವಿಧ ಸಂಘಟನೆಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಸೋಮವಾರ ನಗರದಲ್ಲಿ ಈ ಬಗ್ಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಣ ತಜ್ಞರು, ಸಾಹಿತಿಗಳು, ಸಂಘಟನೆಗಳ ಮುಖಂಡರು, ರೋಹಿತ್‌ ಚಕ್ರತೀರ್ಥ ಸಮಿತಿ ರದ್ದುಪಡಿಸಬೇಕು ಹಾಗೂ ಪಠ್ಯಪುಸ್ತಕದಿಂದ ಕೆಲವು ಪಾಠಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿದರು. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ), ಎನ್‌ಎಸ್‌ಯುಐ, ಎಐಎಸ್‌ಎಫ್‌, ಕೆವಿಎಸ್‌, ಮಾನವ ಬಂಧುತ್ವ ವೇದಿಕೆ, ಜನವಾದಿ ಮಹಿಳಾ ಸಂಘಟನೆ, ವಕೀಲರ ಸಂಘ, ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು