ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣವೇ ಅಭಿವೃದ್ಧಿಯ ಬುನಾದಿ: ಸಚಿವ ರಾಜ್‌ ಕುಮಾರ್‌ ರಂಜನ್‌ ಸಿಂಗ್‌

ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ‘ಶ್ರೀ ಶ್ರೀ ಶಿಕ್ಷಣ ಪ್ರಶಸ್ತಿ’ ಪ್ರದಾನ
Last Updated 28 ಜನವರಿ 2023, 19:14 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣವೇ ದೇಶದ ಅಭಿವೃದ್ಧಿಯನ್ನು ನಿರ್ಧರಿಸುವ ಪ್ರಮುಖ ಅಂಶ. ಶಿಕ್ಷಣವು ಮಕ್ಕಳಲ್ಲಿ ಮಾನವೀಯತೆ, ಸ್ಪರ್ಧಾತ್ಮಕ ಗುಣ, ಪ್ರಾಮಾಣಿಕತೆ ಮತ್ತು ಸಂತೋಷದಿಂದ ಬದುಕುವುದನ್ನು ಕಲಿಸುತ್ತದೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ರಾಜ್‌ ಕುಮಾರ್‌ ರಂಜನ್‌ ಸಿಂಗ್‌ ಹೇಳಿದರು.

ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಶನಿವಾರ ನಡೆದ ‘ಶ್ರೀ ಶ್ರೀ ಶಿಕ್ಷಣ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಆಧರಿಸಿದ ಶಿಕ್ಷಣ ಕ್ರಮವನ್ನು ರೂಪಿಸುವುದು ಬಹಳ ಮುಖ್ಯ. ಅದನ್ನು ಗುರಿಯಾಗಿಟ್ಟುಕೊಂಡು ಹೊಸ ಶಿಕ್ಷಣ ನೀತಿ–2020 ಜಾರಿಗೆ ತರಲಾಗಿದೆ. ಶ್ರೀ ಶ್ರೀ ರವಿಶಂಕರ್‌ ವಿದ್ಯಾ ಮಂದಿರ ಟ್ರಸ್ಟ್‌ ನೀತಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ ಗುರೂಜಿ, ‘ಸ್ವಾತಂತ್ರ್ಯ, ನಿರ್ಭೀತಿ, ಮುಕ್ತವಾದ ವಾತಾವರಣ ಮತ್ತು ಅರಿತಿರುವ ಸಂಗತಿಗಳನ್ನು ಹಂಚಿಕೊಳ್ಳುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಭಾಗವಾಗಬೇಕು’ ಎಂದು ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ಮಾತನಾಡಿ, ‘ಭಾರತೀಯ ಸಂಸ್ಕೃತಿಯ ತಳಹದಿಯ ಮೇಲೆ ಶಿಕ್ಷಣ ವ್ಯವಸ್ಥೆ ರೂಪಿಸಬೇಕು ಎಂಬುದು ಸ್ವಾಮಿ ವಿವೇಕಾನಂದ ಅವರ ಆಶಯವಾಗಿತ್ತು. ರವಿಶಂಕರ್‌ ಗುರೂಜಿಯವರು ಅವರ ಸಂಸ್ಥೆಯ ಶಾಲೆಗಳಲ್ಲಿ ಅಂತಹ ಶಿಕ್ಷಣ ಕ್ರಮವನ್ನು ಅಳವಡಿಸಿದ್ದಾರೆ. ಅದೇ ಮಾದರಿಯ ಶಿಕ್ಷಣ ಕ್ರಮ ಜಾರಿಗೊಳಿಸಲು ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ’ ಎಂದರು.

ಸರ್ಕಾರ ಕೂಡ ತಲುಪಲಾಗದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಗುರೂಜಿಯವರು ಶಾಲೆಗಳನ್ನು ಆರಂಭಿಸಿದ್ದಾರೆ ಎಂದು ಶ್ಲಾಘಿಸಿದರು.

ಡ್ರೇಪರ್‌ ಅಸೋಸಿಯೇಟ್‌ನ ಸಂಸ್ಥಾಪಕ ಟಿಮ್‌ ಡ್ರೇಪರ್‌ ಉಪಸ್ಥಿತರಿದ್ದರು. ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರಿಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀ ಶ್ರೀ ಶಿಕ್ಷಣ ಪ್ರಶಸ್ತಿ ಪುರಸ್ಕೃತ ಶಾಲೆಗಳು

ಆರ್ಮಿ ಪಬ್ಲಿಕ್‌ ಸ್ಕೂಲ್‌, ಶಂಕರ ವಿಹಾರ, ದೆಹಲಿ ಕಂಟೋನ್ಮೆಂಟ್‌

ದಿ ಹೆರಿಟೇಜ್‌ ಸ್ಕೂಲ್‌, ಕೋಲ್ಕತ್ತ

ಅಮಿಟಿ ಇಂಟರ್‌ನ್ಯಾಷನಲ್‌ ಸ್ಕೂಲ್‌, ಗುರುಗ್ರಾಮ

ಡೆಲ್ಲಿ ಪಬ್ಲಿಕ್‌ ಸ್ಕೂಲ್‌– ಬೆಂಗಳೂರು ಉತ್ತರ

ಮೌಂಟು ಅಬು ಪಬ್ಲಿಕ್‌ ಸ್ಕೂಲ್‌, ರೋಹಿಣಿ, ನವದೆಹಲಿ


ಸಮಗ್ರ ಶಿಕ್ಷಣಕ್ಕಾಗಿ ಶ್ರೀ ಶ್ರೀ ಪ್ರಶಸ್ತಿ:

ಶ್ರೀಮತಿ ಸುಲೋಚನಾದೇವಿ ಸಿಂಘಾನಿಯಾ ಶಾಲೆ, ಠಾಣೆ

ಮೇಯೋ ಕಾಲೇಜ್‌, ಅಜ್ಮೀರ್

ಶ್ರೀ ಶ್ರೀ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ:

ಸಹನಾ, ವಿದ್ಯಾ ಭಾರತಿ ಚಿನ್ಮಯ ವಿದ್ಯಾಲಯ, ಜೆಮ್‌ಶೆಡ್‌ಪುರ (ಪೂರ್ವ ವಲಯ)

ಪ್ರಿಯಾಂಕಾ ಯಾದವ್‌, ಕೆಐಟಿ, ಗುರುಗ್ರಾಮ (ಉತ್ತರ ವಲಯ)

ಡಾ. ಗೀತಾ ಲಕ್ಷ್ಮಣ್‌, ಸಿಂಧಿ ಸ್ಕೂಲ್‌, ಹೆಬ್ಬಾಳ, ಬೆಂಗಳೂರು (ದಕ್ಷಿಣ ವಲಯ)

ಸುನೀತಾ ಚಾಂದ್‌, ಡಿಎವಿ ಪಬ್ಲಿಕ್‌ ಸ್ಕೂಲ್‌, ಐರೋಲಿ, ನವಿ ಮುಂಬೈ (ಪಶ್ಚಿಮ ವಲಯ)

ವಿಶೇಷ ಪ್ರಶಸ್ತಿ: ರಾಜೇಂದರ್‌ ಅಪ್ಪಾ ಸಾಹೇಬ್‌ ಕೋಲಿ, ಸರ್ಕಾರಿ ಪ್ರಾಥಮಿಕ ಶಾಲೆ, ಮಂಗಲ್‌ವಾಡಾ, ಸೊಲ್ಲಾಪುರ ಜಿಲ್ಲೆ.

ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಕೊಡುಗೆಗಾಗಿ ಪ್ರಶಸ್ತಿ: ಪೋಲ ಭಾಸ್ಕರ್‌, ಕಾಲೇಜು ಶಿಕ್ಷಣ ಆಯುಕ್ತ, ಆಂಧ್ರಪ್ರದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT