ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ನಗರಸಭೆ: ಪಕ್ಷದ ಅಭ್ಯರ್ಥಿಗಳಿಗೆ ಪಕ್ಷೇತರರ ಸವಾಲು

ಮಡಿಕೇರಿ ನಗರಸಭೆ ಚುನಾವಣೆ ಪ್ರತಿಷ್ಠೆಯ ಕಣ, ಅಭ್ಯರ್ಥಿಗಳ ಮನೆ ಮನೆ ಸುತ್ತಾಟ ಜೋರು
Last Updated 20 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊರೊನಾದ ಆತಂಕದ ನಡುವೆಯೂ ಮಡಿಕೇರಿ ನಗರಸಭೆ ಚುನಾವಣೆಯ ಪ್ರಚಾರದ ಕಾವು ಏರುತ್ತಿದೆ.

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಎಸ್‌.ಡಿ.ಪಿ.ಐ ಹಾಗೂ ಪಕ್ಷೇತರ ಅಭ್ಯರ್ಥಿಗಳ ಮನೆ ಮನೆ ಸುತ್ತಾಟ ಜೋರಾಗಿದೆ. ರಾಷ್ಟ್ರೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಿಗೆ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪ್ರಬಲ ಸವಾಲು ಒಡ್ಡುತ್ತಿದ್ದಾರೆ. ಇದು ಅಧಿಕೃತ ಅಭ್ಯರ್ಥಿಗಳಿಗೆ ಆತಂಕಕ್ಕೆ ಕಾರಣವಾಗಿದೆ.

ಬಿಜೆಪಿ ಅಭ್ಯರ್ಥಿಗಳ ಮನೆ ಮನೆ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ. ‘ಕೈ’ ಹಾಗೂ ಜೆಡಿಎಸ್‌ ಅಭ್ಯರ್ಥಿಗಳೂ ತಾವೂ ಯಾವುದಕ್ಕೂ ಕಮ್ಮಿಯಿಲ್ಲದಂತೆ ಪ್ರಚಾರ ನಡೆಸುತ್ತಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿಗಳು ತಮ್ಮ ಪ್ರಾಬಲ್ಯವುಳ್ಳ ವಾರ್ಡ್‌ಗಳಲ್ಲಿ ತಮ್ಮದೇ ಶೈಲಿಯಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ.

ಬಿಜೆಪಿಯಿಂದ ಸಂಘಟಿತ ಹೋರಾಟ: ಜಿಲ್ಲೆಯಲ್ಲಿ ಬಿಜೆಪಿ ಭದ್ರ ನೆಲೆಕಂಡುಕೊಂಡಿದೆ. ತನ್ನ ನೆಲೆಯನ್ನು ಇನ್ನಷ್ಟು ಭದ್ರ ಪಡಿಸಿಕೊಳ್ಳಲು ಸಂಘಟಿತ ಹೋರಾಟಕ್ಕೆ ಮುಂದಾಗಿದೆ. ಕಳೆದ ಅವಧಿಯಲ್ಲಿ, ಬಿಜೆಪಿಗೆ ನಗರಸಭೆ ಆಡಳಿತವು ಕೈಕೊಟ್ಟಿತ್ತು. ಚುನಾವಣೋತ್ತರವಾಗಿ ಕಾಂಗ್ರೆಸ್‌ ಹಾಗೂ ಎಸ್‌ಡಿಪಿಐ ‘ಮೈತ್ರಿ’ ಮಾಡಿಕೊಂಡು, ಅಧಿಕಾರದ ಗದ್ದುಗೆ ಏರಿದ್ದವು. ಎಸ್‌ಡಿಪಿಐ ಸದಸ್ಯರಿಗೆ ಸ್ಥಾಯಿ ಸಮಿತಿ ಭಾಗ್ಯವು ಒಲಿದಿತ್ತು. 2ನೇ ಅವಧಿಯ ಅಧ್ಯಕ್ಷ– ಉಪಾಧ್ಯಕ್ಷ ಅವಧಿಯಲ್ಲಿ ಲಾಟರಿ ಆಯ್ಕೆಯಲ್ಲಿ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದಿತ್ತು. ಈಗ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದೆ.

ಇನ್ನು ಜಿಲ್ಲೆಯಲ್ಲಿ ಕಾಂಗ್ರೆಸ್‌ ಸತತ ಸೋಲಿನ ಬಳಿಕ ಪುಟಿದೇಳುವ ಪ್ರಯತ್ನದಲ್ಲಿದೆ. ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕೈತಪ್ಪಿರುವ ಅಧಿಕಾರವನ್ನು ಮಡಿಕೇರಿ ನಗರಸಭೆಯಲ್ಲಾದರೂ ಹಿಡಿಯಬೇಕೆಂಬ ಪ್ರಯತ್ನದಲ್ಲಿದೆ. ಎಸ್‌.ಡಿ.ಪಿ.ಐ ಅಭ್ಯರ್ಥಿಗಳೂ ತಾವು ಸ್ಪರ್ಧಿಸಿರುವ ವಾರ್ಡ್‌ನಲ್ಲಿ ಗೆದ್ದು ಹೊಸ ಭಾಷ್ಯ ಬರೆಯಲು ಅಣಿಯಾಗಿದ್ದಾರೆ. ಚುನಾವಣೋತ್ತರ ‘ಮೈತ್ರಿ’ ಮಾಡಿಕೊಂಡಿಲ್ಲ. ಆದರೆ, ಫಲಿತಾಂಶ ಬಂದ ಬಳಿಕ, ಹಿಂದಿನ ಅವಧಿಯಂತೆಯೇ ‘ಮೈತ್ರಿ’ಯ ಅವಕಾಶ ಸಿಗುವುದೇ ಇಲ್ಲವೇ ನೋಡಬೇಕಿದೆ.

ಹಣ ಹಂಚಿಕೆ ಆರೋಪ: ಮಡಿಕೇರಿಯಲ್ಲಿ ಒಟ್ಟು 23 ವಾರ್ಡ್‌ಗಳಿದ್ದು ಕೆಲವು ವಾರ್ಡ್‌ ಈಗಲೇ ಹಣ ಹಂಚಿಕೆಯ ಆರೋಪ ಕೇಳಿಬಂದಿದೆ. ಕೆಲವು ಅಭ್ಯರ್ಥಿಗಳು ಮನೆ ಮನೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಒಳ ಏಟಿನ ಆತಂಕ: ಒಟ್ಟು ನಾಲ್ವರು ನಾಮಪತ್ರ ವಾಪಸ್‌ ಪಡೆದಿದ್ದು 23 ವಾರ್ಡ್‌ನಲ್ಲಿ 109 ಮಂದಿ ಕಣದಲ್ಲಿದ್ದಾರೆ. 23 ವಾರ್ಡ್‌ನಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್‌ ಅಭ್ಯರ್ಥಿಗಳು 22 ವಾರ್ಡ್‌ನಲ್ಲಿ, ಎಸ್‌ಡಿಪಿಐ 9, ಆಮ್‌ ಆದ್ಮಿ ಪಕ್ಷ 4 ಹಾಗೂ ಕರ್ನಾಟಕ ರಾಷ್ಟ್ರ ಸಂಘದ ಪಕ್ಷದಿಂದ ಒಬ್ಬ ಅಭ್ಯರ್ಥಿ ಕಣದಲ್ಲಿದ್ದಾರೆ.

ಕೆಲವು ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಕಂಡುಬಂದರೆ, ಕೆಲವು ವಾರ್ಡ್‌ಗಳಲ್ಲಿ ಇಬ್ಬರು ನಡುವೆ ಬಿರುಸಿನ ಸ್ಪರ್ಧೆ ಕಾಣಿಸುತ್ತಿದೆ. ಬಂಡಾಯ ಅಭ್ಯರ್ಥಿಗಳೂ, ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಪೆಟ್ಟು ನೀಡುವ ಆತಂಕವಿದೆ. ಒಟ್ಟು 27 ಮಂದಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರೂ ಸಹ ಪ್ರಬಲ ಸವಾಲೊಡ್ಡುತ್ತಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಗಳು ತಾವು ಜಯಗಳಿಸದಿದ್ದರೂ ಕೆಲವರನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT