ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಜಿಲ್ಲೆಯಲ್ಲಿ ಹೆಚ್ಚಿದ ಕಾಡಾನೆಗಳ ಉಪಟಳ, ಮನೆ ಬಾಗಿಲಿಗೇ ಕಾಡಾನೆ ಹಿಂಡು

ಮನೆಯಿಂದ ಹೊರ ಹೋಗಲೂ ಭಯ
Last Updated 6 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾಫಿ ತೋಟ, ಭತ್ತದ ಗದ್ದೆಗೆ ನುಗ್ಗುತ್ತಿದ್ದ ಆನೆಗಳು ಇದೀಗ ಮನೆ ಬಾಗಿಲಿಗೇ ಬರುತ್ತಿವೆ. ಮನೆಯಿಂದ ಹೊರಗೆ ಹೋಗಲೂ ಆಗದೇ, ಒಳಗಿರಲೂ ಆಗದೇ ರೈತಾಪಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಈಚೆಗಷ್ಟೇ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ 32 ವರ್ಷದ ಯುವಕನ ಮೇಲೆ ಆನೆ ದಾಳಿ ಮಾಡಿದ್ದು, ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ವರ್ಷ ಜಿಲ್ಲೆಯಲ್ಲಿ ಐವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.

2019ರಿಂದ ಇಲ್ಲಿಯವರೆಗೆ 18 ಜನರು ಪ್ರಾಣ ಕಳೆದುಕೊಂಡಿದ್ದು, 15ಕ್ಕೂ ಹೆಚ್ಚು ಜನರು ಗಾಯ ಗೊಂಡಿದ್ದಾರೆ. 450ಕ್ಕೂ ಅಧಿಕ ಜಾನುವಾರುಗಳು ಆನೆ ದಾಳಿಗೆ ಮೃತಪಟ್ಟಿವೆ.

ಸಕಲೇಶಪುರ, ಆಲೂರು ತಾಲ್ಲೂಕಿನ ಸುತ್ತ 100ಕ್ಕೂ ಹೆಚ್ಚು ಕಾಡಾನೆಗಳಿವೆ ಎಂದು ಅಂದಾಜಿಸಲಾಗಿದೆ. ಕೆಲ ಬಾರಿ ಆನೆಗಳ ಹಿಂಡು ದಾಳಿ ಮಾಡಿದರೆ, ಕೆಲ ಬಾರಿ ಒಂಟಿ ಸಲಗಗಳು ದಾಳಿ ಮಾಡುತ್ತಿವೆ.

ಸಂತ್ರಸ್ತ ಆನೆಗಳು: ಗೊರೂರು ಬಳಿ ಹೇಮಾವತಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡಿದ ಸಂದರ್ಭದಲ್ಲಿ ಹಿನ್ನೀರು ತಗ್ಗು ಪ್ರದೇಶವನ್ನು ಆವರಿಸಿತು. ಇದರಿಂದ ಕಾಡಾನೆಗಳು ತಗ್ಗು ಪ್ರದೇಶವನ್ನು ಬಿಟ್ಟು, ಮೇಲಿನ ಭಾಗಕ್ಕೆ ವಲಸೆ ಬಂದವು.

ಹಿನ್ನೀರಿನ ಸಂತ್ರಸ್ತರಿಗೆ ಬ್ಯಾಬ ಅರಣ್ಯ ಪ್ರದೇಶದಲ್ಲಿ ಜಮೀನು ನೀಡಲಾಯಿತು. ಇದರಿಂದ ಅರಣ್ಯ ಪ್ರದೇಶ ನಾಶ ಮಾಡಲಾಯಿತು. ಮತ್ತೊಂದೆಡೆ ಕಾಡಾನೆಗಳು ಆಹಾರಕ್ಕಾಗಿ ಈ ಕಾಡಿನತ್ತ ಬರಲಾರಂಭಿಸಿದವು. ಆಗ ಕಾಡಾನೆ ಮತ್ತು ಮಾನವ ನಡುವಿನ ಸಂಘರ್ಷ ಶುರುವಾಯಿತು. ನಾಲ್ಕು ದಶಕ ಕಳೆದರೂ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ.

ಮನೆಗೆ ನುಗ್ಗುವ ಆನೆ: ಆನೆಗಳು, ಮನೆಯೊಳಗೆ ದಾಸ್ತಾನು ಇರುವ ಭತ್ತವನ್ನು ವಾಸನೆ ಮೂಲಕವೇ ಪತ್ತೆ ಹಚ್ಚಿ ದಾಳಿ ಮಾಡುತ್ತಿವೆ.

‘ಸಕಲೇಶಪುರ ತಾಲ್ಲೂಕಿನ ಕ್ಯಾನಹಳ್ಳಿ, ಬೊಮ್ಮನಕೆರೆ, ಸತ್ತಿಗಾಲ, ಉದೇವಾರ, ಕಲ್ಲಹಳ್ಳಿ ಸೇರಿದಂತೆ ಹಲವೆಡೆ ಕಾಡಾನೆಗಳು ಮನೆಗಳ ಕಿಟಕಿ, ಬಾಗಿಲು ಮುರಿದು ಭತ್ತ ತಿಂದು ಹೋಗಿವೆ’ ಎನ್ನುತ್ತಾರೆ ಇಲ್ಲಿನ ಜನರು.

‘ಬೆಳಗಾಗುವರೆಗೂ ನಾವೆಲ್ಲಾ ಜೀವ ಭಯದಿಂದ ಒಂದು ಮೂಲೆಯಲ್ಲಿ ಕುಳಿತಿದ್ದೆವು. ಮರು ಹುಟ್ಟು ಪಡೆದ ಅನುಭವವಾಯಿತು’ ಎಂದು ಆನೆ ದಾಳಿಗೆ ಒಳಗಾದ ಕ್ಯಾನಹಳ್ಳಿ–ನೂದರಹಳ್ಳಿಯ ಕೆಂಚಮ್ಮ ಹೇಳಿದರು.

‘ಎರಡಕ್ಕಿಂತ ಹೆಚ್ಚು ಆನೆ ಹಿಡಿಯಲು ಕೇಂದ್ರ ಸರ್ಕಾರದ ಅನುಮತಿ ಬೇಕು. ಎಲ್ಲ ಆನೆಗಳನ್ನು ಸ್ಥಳಾಂತರಿಸಲು ಸಾಧ್ಯವಾಗುವುದಿಲ್ಲ. ಅನುಭವ ಇರುವವರು ಸಮಿತಿಯಲ್ಲಿದ್ದು, ಆಗುಹೋಗುಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಲಯ ಅರಣ್ಯಾಧಿಕಾರಿಯೊಬ್ಬರು ಹೇಳುತ್ತಾರೆ.

ಅಧಿಕಾರಿಗಳ ತಂಡ ಭೇಟಿ
ಹಾಸನ, ಕೊಡಗು ಜಿಲ್ಲೆಗಳಲ್ಲಿ ಮಾನವ–ವನ್ಯಜೀವಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಪರಿಶೀಲನೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ತಂಡ ರಚಿಸಲಾಗಿದ್ದು, ಈ ತಂಡವು ನ.7ರಿಂದ 9ರವರೆಗೆ ಪ್ರವಾಸ ಕೈಗೊಳ್ಳಲಿದೆ.

7ರಂದು ಹಾಸನಕ್ಕೆ ಬರುವ ತಂಡ ಸಕಲೇಶಪುರ ತಾಲ್ಲೂಕಿನ ಬೆಳಗೋಡು, ಮಾದಿಹಳ್ಳಿ, ಭರತ್ತೂರು, ನಾಗವಾರ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದೆ.

8ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದೆ. ದುಬಾರೆ, ಎಡವನಾಡು, ಸಿದ್ದಾಪುರ, ಅತ್ತೂರು, ನೆಲ್ಲಿಹುದಿಕೇರಿಯ ಕಾಫಿ ತೋಟದ ರೈತರೊಂದಿಗೆ ಚರ್ಚಿಸಲಿದೆ. 9ರಂದು ಮಡಿಕೇರಿ, ವಿರಾಜಪೇಟೆ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ಆನೆ ಕಾರಿಡಾರ್‌ಗಳ ಕ್ಷೇತ್ರ ಪರಿವೀಕ್ಷಣೆ ನಡೆಸಲಿದೆ.

74 ಕಾಡಾನೆ ಸೆರೆ
ಜಿಲ್ಲೆಯಲ್ಲಿ 2000ರಿಂದ ಇಲ್ಲಿಯವರೆಗೆ ಒಟ್ಟು 74 ಕಾಡಾನೆಗಳನ್ನು ಸೆರೆ ಹಿಡಿಯಲಾಗಿದ್ದು, ಬೇರೆಡೆ ಸ್ಥಳಾಂತರಿಸಲಾಗಿದೆ. 23 ಆನೆಗಳು ಮೃತಪಟ್ಟಿವೆ.

ರೈಲು ಕಂಬಿಯ ಬ್ಯಾರಿಕೇಡ್‌ ಅಳವಡಿಕೆ ಹಾಗೂ ಸೌರ ಬೇಲಿ ಅಳವಡಿಕೆ ಮಾಡಲಾಗುತ್ತಿದೆ. ಇದುವರೆಗೆ 9.50 ಕಿ.ಮೀ. ರೈಲು ಕಂಬಿಯ ಬ್ಯಾರಿಕೇಡ್‌ ಹಾಗೂ 14 ಕಿ.ಮೀ. ಸೌರ ವಿದ್ಯುತ್ ಬೇಲಿ ಅಳವಡಿಸಲಾಗಿದೆ.

*
ಕಾಡಾನೆಗಳು ಒಂದು ತೋಟಕ್ಕೆ ನುಗ್ಗಿದರೆ ಕನಿಷ್ಠ ₹ 50 ಸಾವಿರದಿಂದ ₹ 1 ಲಕ್ಷ ನಷ್ಟ ಉಂಟಾಗುತ್ತದೆ. ವರ್ಷದಲ್ಲಿ 3–4 ಬಾರಿ ಅದೇ ತೋಟಗಳಿಗೆ ಬಂದು ಹೋಗುತ್ತವೆ
–ದಯಾನಂದ್‌, ಹಲಸುಲಿಗೆ ಕೃಷಿಕ

*
ಸಕಲೇಶಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಕಾಫಿ ತೋಟಗಳು ಕಾಡಾನೆಗಳ ಆವಾಸ ಸ್ಥಾನ ಅಲ್ಲ. ಹಾಗಾಗಿ ಎಲ್ಲ ಕಾಡಾನೆಗಳನ್ನು ಕೂಡಲೇ ಸ್ಥಳಾಂತರಿಸಬೇಕು
–ಎಚ್‌.ಎಂ.ವಿಶ್ವನಾಥ್, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT