ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತು: ನಿಯೋಜಿತ ಸಿ.ಎಂ ಬಸವರಾಜ ಬೊಮ್ಮಾಯಿ

ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಹೇಳಿಕೆ
Last Updated 27 ಜುಲೈ 2021, 20:35 IST
ಅಕ್ಷರ ಗಾತ್ರ

ಬೆಂಗಳೂರು:‘ಪಕ್ಷದ ಸಿದ್ಧಾಂತ,ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಮತ್ತು ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತೇನೆ’ ಎಂದು ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ರಾತ್ರಿ ಪಕ್ಷದ ಕಚೇರಿಗೆ ಭೇಟಿ ನೀಡಿ, ಭಾರತಮಾತೆಯ ಭಾವಚಿತ್ರಕ್ಕೆ ಮತ್ತು ಜಗನ್ನಾಥರಾವ್‌ ಜೋಶಿ ಅವರ ಪುತ್ಥಳಿಗೆ ಪುಷ್ಪ ನಮನ ಮಾಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ನಾನು ದೆಹಲಿಗೆ ಹೋಗಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಯಡಿಯೂರಪ್ಪ ಅವರು ನನ್ನನ್ನು ಗುರುತಿಸಿ, ಈ ಜವಾಬ್ದಾರಿ ಕೊಟ್ಟಿದ್ದಾರೆ. ಇದೊಂದು ದೊಡ್ಡ ಜವಾಬ್ದಾರಿ. ಕೋವಿಡ್‌ ಮತ್ತು ಇತರ ಸಮಸ್ಯೆಗಳು ರಾಜ್ಯವನ್ನು ಕಾಡುತ್ತಿದ್ದು, ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ’ ಎಂದರು.

‘ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯದಿಂದ ಕೆಲಸ ಮಾಡುತ್ತೇನೆ. ಬಡವರು, ದಲಿತರು, ರೈತರು, ಹಿಂದುಳಿದವರು ಮತ್ತು ಮಹಿಳೆಯರ ಪರವಾಗಿ ಸರ್ಕಾರ ಕೆಲಸ ಮಾಡುತ್ತದೆ. ಯಡಿಯೂರಪ್ಪ ಮತ್ತು ಪಕ್ಷದ ಇತರ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಾಗುವುದು’ ಎಂದು ಬೊಮ್ಮಾಯಿ ಹೇಳಿದರು.

‘ರಾಜ್ಯವನ್ನು ಕಾಡುವ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ಹಿಮ್ಮೆಟಿಸುವ ಆತ್ಮವಿಶ್ವಾಸವಿದೆ. ಜನರಿಗೆ ಉತ್ತಮ ಆಡಳಿತ ನೀಡುತ್ತೇನೆ ಎಂದ ಅವರು, ನನ್ನ ತಂದೆಯವರು ತತ್ವ ಮತ್ತು ಆದರ್ಶನದ ರಾಜಕಾರಣಿಯಾಗಿದ್ದರು. ಸೋಲು–ಗೆಲುವನ್ನು ತಾತ್ವಿಕವಾಗಿ ತೆಗೆದುಕೊಳ್ಳುತ್ತಿದ್ದರು. ಅವರ ವಿಚಾರಗಳು ದಾರಿ ದೀಪ’ ಎಂದರು.

ಬೊಮ್ಮಾಯಿ ಅವರ ಜತೆ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್, ಹಿರಿಯ ಶಾಸಕರಾದ ಆರ್‌.ಅಶೋಕ, ಎಸ್‌.ಟಿ.ಸೋಮಶೇಖರ್, ಭೈರತಿ ಬಸವರಾಜು, ನಾರಾಯಣಗೌಡ ಇದ್ದರು.

ಬಳಿಕ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿ ಕೇಶವ ಕೃಪಾಗೆ ಭೇಟಿ ನೀಡಿ, ಸಂಘದ ಪ್ರಮುಖರ ಜತೆ ಚರ್ಚೆ ನಡೆಸಿದರು.

ಸಂಪುಟದಲ್ಲಿ ಕುರುಬರಿಗೆ ಪ್ರಾತಿನಿಧ್ಯಕ್ಕೆ ಆಗ್ರಹ

ಬೆಂಗಳೂರು: ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಹಿರಿತನಕ್ಕೆ ತಕ್ಕದಾದ ಸ್ಥಾನಮಾನದೊಂದಿಗೆ ಕುರುಬ ಸಮುದಾಯಕ್ಕೆ ಹೊಸ ಸಂಪುಟದಲ್ಲಿ ಪೂರ್ಣ ಪ್ರಮಾಣದ ಪ್ರಾತಿನಿಧ್ಯ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಆಗ್ರಹಿಸಿದೆ.

ಸಂಘದ ಪದಾಧಿಕಾರಿಗಳ ಜತೆ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶ ಮೂರ್ತಿ, ‘ಕೆ.ಎಸ್‌. ಈಶ್ವರಪ್ಪ ಅವರು ಆರಂಭದಿಂದಲೂ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು’ ಎಂದರು.

ಕುರುಬ ಸಮುದಾಯದ ಬೈರತಿ ಬಸವರಾಜು, ಎಂ.ಟಿ.ಬಿ. ನಾಗರಾಜ್‌, ಎಚ್‌. ವಿಶ್ವನಾಥ್‌ ಮತ್ತು ಆರ್‌. ಶಂಕರ್‌ ಪಕ್ಷವನ್ನು ತೊರೆದು ಬೆಂಬಲ ನೀಡಿದ್ದರಿಂದಾಗಿಯೇ ಬಿಜೆಪಿ ಸರ್ಕಾರ ಬಂದಿತ್ತು. ನೂತನ ಮುಖ್ಯಮಂತ್ರಿಯ ಆಯ್ಕೆಗೆ ಸಿದ್ಧತೆಗಳು ನಡೆದಿವೆ. ಈಶ್ವರಪ್ಪ ಸೇರಿದಂತೆ ಕುರುಬ ಸಮುದಾಯದ ಐವರಿಗೂ ಸಂಪುಟದಲ್ಲಿ ಸ್ಥಾನ ನೀಡಬೇಕು. ಯಾರನ್ನಾದರೂ ಕೈಬಿಟ್ಟರೆ ಕುರುಬರ ಸಂಘದ ವತಿಯಿಂದ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಪ್ರದೇಶ ಕುರುಬರ ಸಂಘದ ಹಿರಿಯ ಮುಖಂಡ ಲಿಂಗಪ್ಪ, ಖಜಾಂಚಿ ದೇವರಾಜ್‌, ಮುಖಂಡರಾದ ಪ್ರಹ್ಲಾದ್‌ ವಿ. ಹೊಸಳ್ಳಿ ಮತ್ತು ಮಲ್ಲನಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿದ್ದರು.

ಬೊಮ್ಮಾಯಿ ಆಯ್ಕೆ: ಹಲವರ ಸಂತಸ, ಕೆಲವರ ಬೇಸರ

ಬೆಂಗಳೂರು: ರಾಜಭವನ ಮತ್ತು ವಿಧಾನಸೌಧಕ್ಕೆ ಕೂಗಳತೆ ದೂರದಲ್ಲಿರುವ ಕ್ಯಾಪಿಟಲ್‌ ಹೊಟೇಲ್‌ನಲ್ಲಿ ಮಂಗಳವಾರ ರಾತ್ರಿ ಹೊಸ ಮುಖ್ಯಮಂತ್ರಿಯ ಆಯ್ಕೆ ಸುಸೂತ್ರವಾಗಿ ನಡೆದರೂ ಹಲವರ ಮುಖದಲ್ಲಿ ಸಂತಸ ಇನ್ನೂ ಕೆಲವರ ಮುಖದಲ್ಲಿ ಬೇಸರದ ಕಳೆ ಎದ್ದು ಕಾಣುತ್ತಿತ್ತು.

ಬಿ.ಎಸ್‌.ಯಡಿಯೂರಪ್ಪ ಅವರ ಉತ್ತರಾಧಿಕಾರಿ ಯಾರು ಕುತೂಹಲಕ್ಕೆ ಬಿಜೆಪಿಯ ಆಂತರಿಕ ವಲಯದಲ್ಲಿ ಸಂಜೆ ವೇಳೆಗೆ ತೆರೆ ಬಿದ್ದಿತ್ತು. ರಾತ್ರಿ ಹೊಸ ನಾಯಕನ ಆಯ್ಕೆ ಔಪಚಾರಿಕವಾಗಿಯೇ ನಡೆಯಿತು. ಶಾಸಕಾಂಗ ಪಕ್ಷದ ಸಭೆಯ ಎಲ್ಲ ಹಂತದಲ್ಲೂ ಯಡಿಯೂರಪ್ಪ ಅವರ ಛಾಯೆ ದಟ್ಟವಾಗಿತ್ತು.

ಶಾಸಕಾಂಗ ಪಕ್ಷದ ಸಭೆಗೆ ಸಂಜೆ 6 ಗಂಟೆಯಿಂದಲೇ ಶಾಸಕರು ಒಬ್ಬೊಬ್ಬರೇ ಬರಲಾರಂಭಿಸಿದರು. 7.20 ಕ್ಕೆ ಯಡಿಯೂರಪ್ಪ ಬಂದ ಬಳಿಕ 7.30 ಕ್ಕೆ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿತು. 15–20 ನಿಮಿಷಗಳಲ್ಲಿ ಆಯ್ಕೆ ಪ್ರಕ್ರಿಯೆ ಮುಗಿಯಿತು. ಯಡಿಯೂರಪ್ಪ ಅವರ ಕಡು ಟೀಕಾಕಾರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೇಗನೇ ಸಭೆಯಿಂದ ಹೊರ ನಡೆದರು. ಯಾರಿಗೂ ಪ್ರತಿಕ್ರಿಯೆ ನೀಡಲಿಲ್ಲ. ಹಿರಿಯ ಶಾಸಕ ಉಮೇಶ ಕತ್ತಿಯವರೂ ಅವರನ್ನು ಹಿಂಬಾಲಿಸಿದರು.

ಉಪಮುಖ್ಯಮಂತ್ರಿಗಳ ಬದಲಾವಣೆ ಆಗುತ್ತದೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಈ ಹಿಂದೆ ಉಪಮುಖ್ಯಮಂತ್ರಿ ಆಗಿದ್ದವರ ಮುಖ ಸಪ್ಪಗಾಗಿತ್ತು. ಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರೂ ಮಂಕಾಗಿದ್ದರು. ಮಾಧ್ಯಮಗಳ ಮುಂದೆ ಬಲವಂತದ ನೆಗೆ ಬೀರಿ, ಸದ್ದಿಲ್ಲದೆ ಜಾಗ ಖಾಲಿ ಮಾಡಿದರು. ಆದರೆ, ಮುಂದೆ ಮಂತ್ರಿ ಆಗಬೇಕು ಎಂಬ ನಿರೀಕ್ಷೆಯಲ್ಲಿರುವ ಹಲವು ಶಾಸಕರು ಯಡಿಯೂರಪ್ಪ, ಬೊಮ್ಮಾಯಿ ಮತ್ತು
ವೀಕ್ಷಕರನ್ನು ಎಡತಾಕಿದ್ದು ಕಂಡು ಬಂದಿತು.

ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಅವರ ‘ಪ್ರಭಾವಳಿ’ ಢಾಳಾಗಿಯೇ ಇತ್ತು. ಪಕ್ಷದ ಪ್ರಮುಖ ನಾಯಕರು ಒಂದೇ ಮೇಜಿನಲ್ಲಿ ಕುಳಿತು ಭೋಜನ ಸ್ವೀಕರಿಸುವ ಕಾರ್ಯಕ್ಕೆ ಭಾರಿ ಸಂಖ್ಯೆಯಲ್ಲಿ ಕ್ಯಾಮೆರಾಮನ್‌ಗಳು ಮುತ್ತಿಕೊಂಡಿದ್ದರಿಂದ ಕಡೆ ಗಳಿಗೆಯಲ್ಲಿ ಊಟ ಶಾಸ್ತ್ರ ಕೈಬಿಟ್ಟು, ರಾಜಭವನಕ್ಕೆ ತೆರಳಿದರು.

ಮದುವೆಗೆ ಭಂಗ!:ಇದೇ ಹೋಟೆಲ್‌ನಲ್ಲಿ ವಿವಾಹವೊಂದು ಏರ್ಪಾಡಾಗಿತ್ತು. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಿಂದಾಗಿ ರಾಜಕಾರಣಿಗಳ ದಂಡು ಮತ್ತು ಭಾರಿ ಸಂಖ್ಯೆಯಲ್ಲಿದ್ದ ಮಾಧ್ಯಮಗಳ ಗದ್ದಲದಿಂದಾಗಿ ಮದುವೆಯ ಸಂಭ್ರಮಕ್ಕೆ ಭಂಗ ಬಂದಿದ್ದೂ ನಡೆಯಿತು.

ಮದುವೆಗೆ ಅತಿಥಿಗಳಾಗಿ ಬಂದವರು ಒಳಗೆ ಪ್ರವೇಶಿಸಲು ಪರದಾಡಬೇಕಾಯಿತು. ಹೋಟೆಲ್ ಒಳಗೆ ಕಾರುಗಳನ್ನು ತರಲಾಗದೇ ಅತಿಥಿಗಳು ಬೇಸರ ಪಟ್ಟುಕೊಂಡಿದ್ದು ಕೇಳಿ ಬಂದಿತು. ರಾಜಕೀಯ ಸಭೆ ದಿಢೀರ್‌ ಎಂದು ಆಯೋಜನೆಗೊಂಡಿದ್ದರಿಂದ ಸಮಸ್ಯೆ ಆಯಿತು ಹೋಟೆಲ್‌ ಸಿಬ್ಬಂದಿಯೊಬ್ಬರು ಹೇಳಿದರು.

***

ದೇವರ ದಯೆಯಿಂದ ತಂದೆಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ. ರಾಜಕೀಯ ಅನುಭವದ ಮೇಲೆ ಅವರು ಒಳ್ಳೆಯ ಆಡಳಿತ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡುವ ವಿಶ್ವಾಸವಿದೆ.

-ಭರತ್‌ ಬೊಮ್ಮಾಯಿ, (ಬಸವರಾಜ ಬೊಮ್ಮಾಯಿ ಪುತ್ರ)

***

ಬಸವರಾಜ ಬೊಮ್ಮಾಯಿ ಅವರಿಗೆ ಅನುಭವ ಇದೆ. ಸರ್ವಾನುಮತದಿಂದ ಅವರ ಆಯ್ಕೆ ಆಗಿದೆ. ಅವರ ಆಯ್ಕೆಯಲ್ಲಿ ತಪ್ಪೇನೂ ಇಲ್ಲ. ನನಗೆ ಖುಷಿ ನೀಡಿದೆ.

-ಸಿ.ಪಿ. ಯೋಗೇಶ್ವರ

***

ಎಲ್ಲರ ವಿಶ್ವಾಸ ತೆಗೆದುಕೊಂಡು ಬಸವರಾಜ ಬೊಮ್ಮಾಯಿ ಅವರನ್ನು ಹೈಕಮಾಂಡ್‌ ಆಯ್ಕೆ ಮಾಡಿದೆ. ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ನಾವೆಲ್ಲ ಕೂಡಿ ಕೆಲಸ ಮಾಡುತ್ತೇವೆ. ಅವರ ಆಯ್ಕೆಗೆ ಸಹಮತಿ ಇದ್ದೇ ಇದೆ.

-ಬಸನಗೌಡ ಪಾಟೀಲ ಯತ್ನಾಳ

***

ಹೈಕಮಾಂಡ್‌ ಒಳ್ಳೆಯ ಮತ್ತು ಸೂಕ್ತ ತೀರ್ಮಾನ ತೆಗೆದುಕೊಂಡಿದೆ. ನನಗೆ ಖುಷಿ ಆಗಿದೆ. ಬಸವರಾಜ ಬೊಮ್ಮಾಯಿ ಒಳ್ಳೆಯ ವ್ಯಕ್ತಿ. ಅನುಭವಿ. ಉತ್ತಮ ಆಡಳಿತಗಾರ. ಪಕ್ಷವನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಅವರಿಗೆ ಇದೆ.

-ಅರವಿಂದ ಬೆಲ್ಲದ

***

ಬೊಮ್ಮಾಯಿ ಅವರ ಆಯ್ಕೆ ಎಲ್ಲರ ಸರ್ವಸಮ್ಮತದ ತೀರ್ಮಾನ. ಯಡಿಯೂರಪ್ಪ ಅವರೇ ಅವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ

-ನಳಿನ್‌ಕುಮಾರ್ ಕಟೀಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

***

ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಬೊಮ್ಮಾಯಿ ಅನುಭವಿ ರಾಜಕಾರಣಿ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ಆಯ್ಕೆ. ಒಳ್ಳೆಯ ತೀರ್ಮಾನ;ಇದನ್ನು ಸ್ವಾಗತಿಸುತ್ತೇನೆ

-ವಿ. ಸೋಮಣ್ಣ

***

ಬಸವರಾಜ ಬೊಮ್ಮಾಯಿ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ.

-ಬಿ.ಎಸ್‌. ಯಡಿಯೂರಪ್ಪ

***

ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಆಡಳಿತದ ಮೇಲೆ ಮರಳಿ ಗಮನಹರಿಸಲಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷ ಮತ್ತು ರಾಜ್ಯ ಭರವಸೆ ಇರಿಸಿದೆ. ಅವರಿಗೆ ಅಭಿನಂದನೆಗಳು

-ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT