ಸೋಮವಾರ, ಆಗಸ್ಟ್ 15, 2022
28 °C

ಜಾರಿ ನಿರ್ದೇಶನಾಲಯದಿಂದ ಮಂತ್ರಿ ಡೆವಲಪರ್ಸ್‌ ನಿರ್ದೇಶಕ ಸುಶೀಲ್‌ ಮಂತ್ರಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಸತಿ ಯೋಜನೆಗಳ ಹೆಸರಿನಲ್ಲಿ ಗ್ರಾಹಕರಿಂದ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪದ ಮೇಲೆ ರಿಯಲ್‌ ಎಸ್ಟೇಟ್‌ ಉದ್ಯಮಿ, ಮಂತ್ರಿ ಡೆವಲಪರ್ಸ್‌ ನಿರ್ದೇಶಕ ಸುಶೀಲ್‌ ಪಾಂಡುರಂಗ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ರಾತ್ರಿ ಬಂಧಿಸಿದೆ.

ಗ್ರಾಹಕರಿಗೆ ವಂಚನೆ, ಹಣಕಾಸು ಸಂಸ್ಥೆಗಳಿಗೆ ಮೋಸ ಹಾಗೂ ಹಣದ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸುಶೀಲ್‌ ಮಂತ್ರಿ ಅವರಿಗೆ ಇ.ಡಿ ಅಧಿಕಾರಿಗಳು ಸೂಚಿಸಿದ್ದರು. ಉದ್ಯಮಿ ವಿಚಾರಣೆಗೆ ಹಾಜರಾಗಿದ್ದರು. ಗ್ರಾಹಕರಿಗೆ ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಾಕ್ಷ್ಯ ನಾಶ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಅಥವಾ ದೇಶ ತೊರೆಯುವ ಅನುಮಾನದ ಮೇಲೆ ಸುಶೀಲ್‌ ಅವರನ್ನು ಬಂಧಿಸಲಾಗಿದೆ.

ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಎನ್‌. ಸೋಮಶೇಖರ ನೇತೃತ್ವದ ತಂಡ, ಸುಶೀಲ್‌ ಮಂತ್ರಿ ಅವರನ್ನು ಶುಕ್ರವಾರ ರಾತ್ರಿ 10.30ಕ್ಕೆ ಬಂಧಿಸಿದೆ. ವಿಚಾರಣೆ ವೇಳೆ ಹಾಜರಿದ್ದ ಮಂತ್ರಿ ಡೆವಲಪರ್ಸ್‌ ಮುಖ್ಯ ಹಣಕಾಸು ಅಧಿಕಾರಿ ಎ. ಅನಿಲ್‌ ಕುಮಾರ್‌ ಅವರಿಗೆ ರಾತ್ರಿ 10.35ಕ್ಕೆ ಲಿಖಿತವಾಗಿ ಬಂಧನದ ವಿಷಯವನ್ನು ತಿಳಿಸಲಾಗಿದೆ.‌

ಮಂತ್ರಿ ಡೆವಲಪರ್ಸ್‌ನ ವಿವಿಧ ವಸತಿ ಯೋಜನೆಗಳಲ್ಲಿ ಫ್ಲ್ಯಾಟ್‌ ನಿರ್ಮಿಸಿಕೊಡುವುದಾಗಿ ನಂಬಿಸಿ 1,200ಕ್ಕೂ ಹೆಚ್ಚು ಕುಟುಂಬಗಳಿಂದ ₹ 1,350 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ವಂಚಿಸಿರುವ ಆರೋಪದ ಮೇಲೆ ನಗರದ ಸುಬ್ರಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಸುಶೀಲ್‌ ಮಂತ್ರಿ ಮತ್ತು ಇತರರ ವಿರುದ್ಧ 2020ರ ಫೆಬ್ರುವರಿಯಲ್ಲಿ ಪ್ರಕರಣ ದಾಖಲಿಸಲಾಗಿಗಿತ್ತು. ಈ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದ ಇ.ಡಿ ಅಧಿಕಾರಿಗಳು, 2022ರ ಮಾರ್ಚ್‌ 22ರಂದು ನ್ಯಾಯಾಲಯಕ್ಕೆ ವರದಿಯೊಂದನ್ನು ಸಲ್ಲಿಸಿ ತನಿಖೆ ಆರಂಭಿಸಿದ್ದರು.

‘ಮಂತ್ರಿ ಡೆವಲಪರ್ಸ್‌ ಹೆಸರಿನಲ್ಲಿ ಆಕರ್ಷಕ ಯೋಜನೆಗಳನ್ನು ಘೋಷಿಸಿ ಸಾವಿರಾರು ಗ್ರಾಹಕರಿಂದ ಹಣ ಸಂಗ್ರಹಿಸಲಾಗಿತ್ತು. ಈ ಮೊತ್ತವನ್ನು ಅದೇ ಉದ್ದೇಶಕ್ಕೆ ಬಳಸದೇ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ, ಸ್ವಂತ ಉದ್ದೇಶಕ್ಕೆ ಬಳಸಿರುವುದು ಪತ್ತೆಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಒದಗಿಸದೇ ಸುಶೀಲ್‌ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ. ಹಣ ವರ್ಗಾವಣೆ, ಬ್ಯಾಂಕ್‌ ಖಾತೆಗಳ ವಿವರ, ಹಣದ ಬಳಕೆ ಕುರಿತು ಮಾಹಿತಿ ನೀಡಿಲ್ಲ. ಕೆಲವು ದಾಖಲೆಗಳನ್ನು ಸಲ್ಲಿಸುವಂತೆ ತನಿಖಾ ತಂಡ ನೀಡಿದ್ದ ಸೂಚನೆಯನ್ನೂ ಪಾಲಿಸಿಲ್ಲ’ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

₹ 5,000 ಕೋಟಿ ಬಾಕಿ
ರಿಯಲ್‌ ಎಸ್ಟೇಟ್‌ ಉದ್ಯಮದ ಹೆಸರಿನಲ್ಲಿ ವಿವಿಧ ಹಣಕಾಸು ಸಂಸ್ಥೆಗಳಿಂದ ಸುಮಾರು ₹ 5,000 ಕೋಟಿ ಮೊತ್ತದ ಸಾಲ ಪಡೆದಿದ್ದ ಸುಶೀಲ್‌ ಮಂತ್ರಿ, ಅದನ್ನು ಪಾವತಿ ಮಾಡಿಲ್ಲ. ಈ ಪೈಕಿ ಸುಮಾರು ₹ 1,000 ಕೋಟಿಯಷ್ಟು ಮೊತ್ತ ಅನುತ್ಪಾದಕ ಆಸ್ತಿಯ (ಎನ್‌ಪಿಎ) ಪಟ್ಟಿ ಸೇರಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು