ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್

Last Updated 26 ಮೇ 2022, 18:38 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಆರೋಪದೊಂದಿಗೆ 2019ರಲ್ಲಿ ಬಂಧನಕ್ಕೆ ಒಳಗಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ದೆಹಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರನ್ನು ದಾಖಲಿಸಿ ತನಿಖೆ ನಡೆಸಲಾಗಿತ್ತು ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಶಿವಕುಮಾರ್, ಮತ್ತಿತರರ ವಿರುದ್ಧ ತೆರಿಗೆ ವಂಚನೆ ಮತ್ತು ಹವಾಲಾ ವ್ಯವಹಾರದ ಆರೋಪದ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆಯು ಬೆಂಗಳೂರಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿ ಆಧರಿಸಿಯೇ ಇ.ಡಿ. ಅಧಿಕಾರಿಗಳು 2018ರಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.

ಶಿವಕುಮಾರ್ ಹಾಗೂ ಅವರ ಸಹಚರ ಎಸ್‌.ಕೆ. ಶರ್ಮಾ ಅವರು ಇತರ ಮೂವರು ಆರೋಪಿಗಳ ಸಹಾಯದಿಂದ ಹವಾಲಾ ಮಾರ್ಗಗಳ ಮೂಲಕ ನಿಯಮಿತವಾಗಿ ಅಪಾರ ಪ್ರಮಾಣದ ಹಣವನ್ನು ಸಾಗಿಸಿದ್ದಾರೆ ಎಂದೂ ಐ.ಟಿ ಇಲಾಖೆ ಆರೋಪಿಸಿತ್ತು.

ಈ ಆರೋಪದ ಹಿನ್ನೆಲೆಯಲ್ಲಿ 2019ರ ಸೆಪ್ಟೆಂಬರ್‌ 3ರಂದು ಇ.ಡಿ.ಯಿಂದ ಬಂಧನಕ್ಕೆ ಒಳಗಾಗಿದ್ದ ಶಿವಕುಮಾರ್, 45 ದಿನಗಳ ಕಾಲ ತಿಹಾರ್ ಕೇಂದ್ರ ಕಾರಾಗೃಹದಲ್ಲಿದ್ದರು. ಅವರಿಗೆ ದೆಹಲಿ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಡಿ.ಕೆ. ಶಿವಕುಮಾರ್ ಅವರು ಒಟ್ಟು ₹ 800 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದಾರೆ. ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ₹ 200 ಕೋಟಿಯಷ್ಟು ಹಣ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ರೂಪದಲ್ಲಿ ಪತ್ತೆಯಾಗಿದೆ. 20ಕ್ಕೂ ಅಧಿಕ ಬ್ಯಾಂಕ್‌ಗಳಲ್ಲಿ 317 ಖಾತೆಗಳು ಪತ್ತೆಯಾಗಿವೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.

ಅವರ ಪುತ್ರಿಯ ಹೆಸರಿನಲ್ಲೂ ₹ 108 ಕೋಟಿ ಮೊತ್ತದ ಅಕ್ರಮ ವ್ಯವಹಾರ ನಡೆದಿದೆ. ಪುತ್ರಿಗೆ ₹ 48 ಕೋಟಿ ಸಾಲ ಇದೆ ಎಂದು ವಿವರ ನೀಡಿದ್ದರೂ, ಸಾಲದ ಮೂಲವನ್ನು ಬಹಿರಂಗಪಡಿಸಿಲ್ಲ. ನೋಟು ರದ್ದತಿ ಸಂದರ್ಭ ದೆಹಲಿಯ ನಿವಾಸದಲ್ಲಿ ಪತ್ತೆಯಾಗಿದ್ದ ₹ 8.59 ಕೋಟಿ ಹಣಕ್ಕೆ ಲೆಕ್ಕ ನೀಡಿಲ್ಲ ಎಂದೂ ಅವರು ವಿವರಿಸಿದ್ದಾರೆ.

ಶಿವಕುಮಾರ್‌ ಹೆಸರಲ್ಲಿ 24, ಅವರ ಸೋದರ ಡಿ.ಕೆ. ಸುರೇಶ್ ಹೆಸರಲ್ಲಿ 27, ಅವರ ತಾಯಿಯ ಹೆಸರಲ್ಲಿ 38 ಆಸ್ತಿ ಸೇರಿ, ಹತ್ತಿರ ಸಂಬಂಧಿಗಳ ಬಳಿ ಒಟ್ಟು 300ಕ್ಕೂ ಅಧಿಕ ಸ್ಥಿರಾಸ್ತಿಗಳಿವೆ. ಶಿವಕುಮಾರ್‌ ಅವರು ಅಕ್ರಮ ಆಸ್ತಿ ಗಳಿಕೆ, ಹಣ ಅಕ್ರಮ ವರ್ಗಾವಣೆ ನಡೆಸಿರುವ ಕುರಿತು ಪುರಾವೆಗಳು ಲಭ್ಯವಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಂದೆ ಕೆಂಪೇಗೌಡ ಅವರಿಗೆ ಕೃಷಿಯಿಂದಲೇ ವಾರ್ಷಿಕ ₹ 25 ಲಕ್ಷ ಆದಾಯ ಇತ್ತು ಎಂದು ತಿಳಿಸಿದ್ದ ಶಿವಕುಮಾರ್‌, ಅದನ್ನು ದೃಢಪಡಿಸಲು ತಹಶೀಲ್ದಾರರ ಪ್ರಮಾಣಪತ್ರ ಸಲ್ಲಿಸಿದ್ದರು. ಕೃಷಿಯಿಂದಲೇ ಅಷ್ಟೊಂದು ಆದಾಯ ಇತ್ತು ಎಂಬುದನ್ನು ಪ್ರಮಾಣೀಕರಿಸಲು ಅಗತ್ಯವಿರುವ ಜಮೀನಿನ ವಿವರ, ಅಲ್ಲಿ ಯಾವ ಬೆಳೆ ಬೆಳೆದಿದ್ದರು ಎಂಬ ವಿವರಗಳು ತಹಶೀಲ್ದಾರ್ ನೀಡಿರುವ ಪ್ರಮಾಣಪತ್ರದಲ್ಲಿ ಇಲ್ಲ. ಯಾವುದೇ ದಿನಾಂಕ ನಮೂದಿಸದ ಆ ಪ್ರಮಾಣಪತ್ರದ ನೈಜತೆ ಬಹಿರಂಗಗೊಂಡಿಲ್ಲ. ಅಲ್ಲದೆ, ಯಾವ ದಾಖಲೆಗಳನ್ನು ಆಧರಿಸಿ ಈ ಪ್ರಮಾಣಪತ್ರ ನೀಡಲಾಗಿದೆ ಎಂಬ ಅಂಶವೂ ಇಲ್ಲ. ಈ ಸಂಬಂಧ ಸಮರ್ಪಕ ಉತ್ತರವನ್ನೂ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ದೆಹಲಿ ನಿವಾಸದಲ್ಲಿ ₹ 8.59 ಕೋಟಿ ಪತ್ತೆ ಆಗಿರುವ ಪ್ರಕರಣದಲ್ಲಿ ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಅವರ ಪಾತ್ರವೂ ಪ್ರಮುಖವಾಗಿದೆ. ಶಿವಕುಮಾರ್‌ ಬಂಧನದ ಮಾರನೇ ದಿನ ಆಂಜನೇಯ ನಿವಾಸದಲ್ಲೂ ತಪಾಸಣೆ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ರಾಜಕೀಯ ಷಡ್ಯಂತ್ರ ಪ್ರಕರಣ:ಡಿ.ಕೆ. ಶಿವಕುಮಾರ್
‘ಇದೊಂದು ರಾಜಕೀಯ ಷಡ್ಯಂತ್ರ ಪ್ರಕರಣ. ತಮ್ಮ ರಾಜಕೀಯ ಹಾದಿಗೆ ಅಡ್ಡಿಯಾಗಿರುವವರನ್ನು ನಿರ್ಮೂಲನೆ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಶರಣಾಗದವರನ್ನು ಮುಗಿಸಲು ಪ್ರಯತ್ನಿಸುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

‘ಬಿಜೆಪಿಯವರು ಅವರ ಪಕ್ಷದವರನ್ನೇ ಬಿಡುತ್ತಿಲ್ಲ, ಇನ್ನು ನನ್ನನ್ನು ಬಿಡುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಅಹ್ಮದ್ ಪಟೇಲ್ ಅವರಿಗೆ ಸಹಾಯ ಮಾಡಿದೆ ಎಂಬ ಕಾರಣಕ್ಕೆ ನನ್ನ ಹಾಗೂ ನನ್ನ ಸ್ನೇಹಿತರ ಮನೆಗಳ ಮೇಲೆ ದಾಳಿ ಮಾಡಿದ್ದರು. ಸ್ನೇಹಿತರ ಹಣವನ್ನೂ ನನ್ನ ಹಣ ಎಂದು ಆದಾಯತೆರಿಗೆ ಇಲಾಖೆಯವರು ಬರೆದಿದ್ದರು.ಐ.ಟಿಯವರು ಕಾನೂನು ವಿರುದ್ಧವಾಗಿ ಸಾಕಷ್ಟು ಸೃಷ್ಟಿ ಮಾಡಿದ್ದಾರೆ. ಈಗ ಈ ವಿಚಾರ ನನ್ನ ಹಾಗೂ ನ್ಯಾಯಾಲಯದ ಮಧ್ಯೆ ಇದೆ. ಈ ನೆಲದ ಕಾನೂನನ್ನುನಾನು ಗೌರವಿಸುತ್ತೇನೆ. ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದೇನೆ’ ಎಂದು ಹೇಳಿದರು.

ಡಿಕೆಶಿ ಆಪ್ತರ ಅರ್ಜಿ: ಆಕ್ಷೇಪಣೆಗೆ ಅವಕಾಶ
ಆದಾಯ ತೆರಿಗೆ ಇಲಾಖೆಯ ನಾಲ್ಕು ವರ್ಷಗಳ ಆದಾಯ‌ ತೆರಿಗೆ ಮೌಲ್ಯಮಾಪನ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಅವರ ಇಬ್ಬರು ಆಪ್ತರು ಸಲ್ಲಿಸಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಡಿ.ಕೆ.ಶಿವಕುಮಾರ್ ಆಪ್ತರಾದ ಸುನಿಲ್ ಕುಮಾರ್ ಶರ್ಮ‌ ಮತ್ತು ಕಂದಸ್ವಾಮಿ ರಾಜೇಂದ್ರನ್ ಸಲ್ಲಿಸಿರುವ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ ಅವರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಸಮಯ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಎರಡು ವಾರಗಳ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT