ಮಂಗಳವಾರ, ಸೆಪ್ಟೆಂಬರ್ 21, 2021
27 °C
ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ಕಲಾಪ ನಿಯಂತ್ರಣಕ್ಕೆ ನೀತಿ ನಿರೂಪಣಾ ಸಮಿತಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ವಿಧಾನಸಭೆಯ ಕಲಾಪವನ್ನು ಸುಗಮವಾಗಿ ನಡೆಸುವುದಕ್ಕೆ ಪೂರಕವಾಗಿ ನೀತಿ ನಿರೂಪಣಾ ಸಮಿತಿಯನ್ನು ರಚಿಸಲಾಗುವುದು ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೀತಿ ನಿರೂಪಣಾ ಸಮಿತಿ (ಎಥಿಕ್ಸ್‌ ಕಮಿಟಿ) ರಚನೆಗೆ ಸಂಬಂಧಿಸಿದಂತೆ ಸದನದ ನಿಯಮಾವಳಿ ಸಮಿತಿಯು ಚರ್ಚೆ ನಡೆಸಿದೆ. ಇದೇ 13ರಿಂದ ಆರಂಭವಾಗುವ ಅಧಿವೇಶನದಲ್ಲಿ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳಿಗೆ ಕೆಲವು ಸೆಕ್ಷನ್‌ಗಳನ್ನು ಸೇರಿಸಿದ ಬಳಿಕ ನೀತಿ ನಿರೂಪಣಾ ಸಮಿತಿಯನ್ನು ರಚಿಸಲಾಗುವುದು’ ಎಂದರು.

‘ಸೆಪ್ಟೆಂಬರ್‌ 13ರಿಂದ ಆರಂಭವಾಗುವ ಅಧಿವೇಶನದಲ್ಲಿ ವಿಧಾನಸಭೆಯ ಅಧ್ಯಕ್ಷರು ಸದನದಲ್ಲಿ ವರದಿಯೊಂದನ್ನು ಮಂಡಿಸಲಿದ್ದಾರೆ. ನೀತಿ ನಿರೂಪಣಾ ಸಮಿತಿಯ ಅಧಿಕಾರ ವ್ಯಾಪ್ತಿ, ಕಾರ್ಯವಿಧಾನಗಳ ಕುರಿತು ಈ ವರದಿ ಸ್ಪಷ್ಟಪಡಿಸಲಿದೆ. ಆ ಬಳಿಕ ಸಮಿತಿಯ ಸದಸ್ಯರನ್ನು ನೇಮಕ ಮಾಡಲಾಗುತ್ತದೆ’ ಎಂದು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅತ್ಯುತ್ತಮ ಶಾಸಕ ಪ್ರಶಸ್ತಿ: ವಿಧಾನಸಭೆಯ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮತ್ತು ರಚನಾತ್ಮಕ ರೀತಿಯಲ್ಲಿ ಚರ್ಚೆಯಲ್ಲಿ ಭಾಗವಹಿಸುವ ಶಾಸಕರೊಬ್ಬರಿಗೆ ‘ಅತ್ಯುತ್ತಮ ಶಾಸಕ’ ಪ್ರಶಸ್ತಿಯನ್ನು ಈ ಅಧಿವೇಶನದ ಅಂತ್ಯದಲ್ಲಿ ಪ್ರದಾನ ಮಾಡಲಾಗುವುದು ಎಂದು ಕಾಗೇರಿ ತಿಳಿಸಿದರು.

ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ರಾಜ್ಯಪಾಲರು ಸದನವನ್ನುದ್ದೇಶಿಸಿ ಮಾಡಿದ ಎರಡು ಭಾಷಣಗಳ ಮಧ್ಯದ ಅವಧಿಯ ಕಲಾಪವನ್ನು ಆಧರಿಸಿ ಅತ್ಯುತ್ತಮ ಶಾಸಕನನ್ನು ಆಯ್ಕೆ ಮಾಡಲಿದೆ ಎಂದರು.

ಕಲಾಪದ ಅವಧಿಯಲ್ಲಿ ಮುಖ್ಯಮಂತ್ರಿ ಮತ್ತು ಎಲ್ಲ ಸಚಿವರು ಹಾಜರಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಅಧಿವೇಶನದ ಅವಧಿಯಲ್ಲಿ ಯಾವುದೇ ಇತರ ಕಾರ್ಯಕ್ರಮ ನಿಗದಿಪಡಿಸಿಕೊಳ್ಳಬಾರದು. ಸಚಿವರು ರಜೆ ಅರ್ಜಿ ಸಲ್ಲಿಸಬಾರದು. ನೆಪ ಹೇಳಿ ಕಲಾಪಕ್ಕೆ ಗೈರಾಗುವಂತಿಲ್ಲ ಎಂಬ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರ ವೀಕ್ಷಣೆಗೆ ಅವಕಾಶ: ಕೋವಿಡ್‌ ಕಾರಣದಿಂದ ವಿಧಾನಸಭೆಯ ಕಲಾಪ ವೀಕ್ಷಣೆಗೆ ಸಾರ್ವಜನಿಕರು ಬರುವುದನ್ನು ನಿರ್ಬಂಧಿಸಲಾಗಿತ್ತು. ಈ ಬಾರಿ ಸಾರ್ವಜನಿಕರ ವೀಕ್ಷಣೆಗೆ ಅನುಮತಿ ನೀಡಲಾಗಿದೆ. ಆದರೆ ಶಾಲಾ ಮಕ್ಕಳಿಗೆ ಅವಕಾಶ ಇರುವುದಿಲ್ಲ ಎಂದು ಕಾಗೇರಿ ಹೇಳಿದರು.

18 ಮಸೂದೆ ಮಂಡನೆ:

ಈ ಅಧಿವೇಶನದಲ್ಲಿ 18 ಮಸೂದೆಗಳ ಕುರಿತು ಚರ್ಚೆ ನಡೆಯಲಿದೆ. 10 ಹೊಸ ಮಸೂದೆಗಳು. ನಾಲ್ಕು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಅಂಗೀಕಾರಕ್ಕೆ ಬಾಕಿ ಇವೆ. ನಾಲ್ಕು ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದು, ಅವುಗಳಿಗೆ ಪೂರಕವಾದ ಮಸೂದೆಗಳು ಮಂಡನೆಯಾಗಲಿವೆ ಎಂದು ಕಾಗೇರಿ ಮಾಹಿತಿ ನೀಡಿದರು.

ಲೋಕಸಭೆ ಸ್ಪೀಕರ್‌ ಭಾಷಣ

ಈ ಅಧಿವೇಶನದ ಕೊನೆಯ ಅರ್ಧ ದಿನ ಜಂಟಿ ಅಧಿವೇಶನ ನಡೆಯಲಿದ್ದು, ಶಾಸನಸಭೆಗಳಲ್ಲಿ ಗದ್ದಲ ನಿಯಂತ್ರಿಸುವ ಕುರಿತು ಚರ್ಚಿಸಲಾಗುವುದು. ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಈ ಸಂದರ್ಭದಲ್ಲಿ ಜಂಟಿ ಸದನವನ್ನುದ್ದೇಶಿಸಿ ಮಾತನಾಡುವರು ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು