ಶನಿವಾರ, ಜನವರಿ 23, 2021
26 °C
ರಾಜ್ಯ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿಕೆ

ಕೃಷಿ ಕಾಯ್ದೆ: ರೈತ ವಿರೋಧಿ ಅಂಶ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಕೃಷಿ ಸಂಬಂಧಿಸಿದ ಕಾಯ್ದೆಗಳ ತಿದ್ದುಪಡಿಯಲ್ಲಿ ಯಾವುದೇ ರೀತಿಯ ರೈತ ವಿರೋಧಿ ಅಂಶಗಳಿಲ್ಲ’ ಎಂದು ರಾಜ್ಯ ಬಿಜೆಪಿಯ ರೈತ ಮೋರ್ಚಾದ ಅಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಹಿಂದಿನ ಸರ್ಕಾರದಲ್ಲೇ ಕೃಷಿ ಮಸೂದೆಗಳಿಗೆ ತಿದ್ದುಪಡಿ ತರುವ ಆಲೋಚನೆಗಳಿದ್ದು, ಈ ಮಸೂದೆಗಳನ್ನು ಏಕಾಏಕಿ ತಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಯಾವುದೇ ತಪ್ಪುಗಳನ್ನು ಕಂಡುಹಿಡಿಯಲು ಸಾಧ್ಯವಾಗದ ವಿರೋಧ ಪಕ್ಷಗಳು, ರೈತರನ್ನು ಕೃಷಿ ಮಸೂದೆ ಹೆಸರಿನಲ್ಲಿ ಬಳಸಿಕೊಂಡು ಅವರ ಹೆಗಲ ಮೇಲೆ ಬಂದೂಕು ಇಡುವ ಕೆಲಸ ಮಾಡುತ್ತಿವೆ ಎಂದು ದೂರಿದರು.

‘ರೈತ ಮೋರ್ಚಾದಿಂದ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದು, ಕೊಡಗಿನಲ್ಲಿ ಕೂಡ ರೈತರೊಂದಿಗೆ ಸಂವಾದ ಮತ್ತು ಅವರ ಕಷ್ಟಗಳನ್ನು ತಿಳಿದುಕೊಂಡಿದ್ದೇನೆ. ವಿಶೇಷವಾಗಿ ಕಾಡುಪ್ರಾಣಿಗಳ ಹಾವಳಿ, ಕಾಫಿ ಬೆಳೆಗಾರರ ಸಮಸ್ಯೆ, ಭತ್ತ, ಕರಿಮೆಣಸು ಬೆಳೆಗಳ ಬೆಲೆ ಏರುಪೇರು, 10 ಎಚ್‌.ಪಿ ತನಕ ವಿದ್ಯುತ್ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಪೂರೈಕೆ ಮೊದಲಾದವುಗಳನ್ನು ಗಮನಿಸಿದ್ದೇನೆ. ಸರ್ಕಾರ ಮತ್ತು ರೈತರ ನಡುವೆ ರಾಯಭಾರಿಯಂತೆ ರೈತ ಮೋರ್ಚಾ ಕೆಲಸ ಮಾಡಲಿದ್ದು, ಸಮಸ್ಯೆಗಳ ಪರಿಹಾರ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜತೆಗೆ ನೇರ ಮಾಹಿತಿ ಕೊಡುವ ಪ್ರಯತ್ನವನ್ನು ಮಾಡುತ್ತೇನೆ’ ಎಂದು ಸ್ಪಷ್ಟನೆ ನೀಡಿದರು.

ಈಗಾಗಲೇ ಸರ್ಕಾರ 22 ಬೆಳೆಗಳಿಗೆ ಬೆಂಬಲ ಬೆಲೆಯನ್ನು ಎರಡು ಪಟ್ಟು ಹೆಚ್ಚು ವಿಧಿಸಿದ್ದು, ಆರು ಪ್ರಮುಖ ರಸಗೊಬ್ಬರ ತಯಾರಿಕಾ ಕಾರ್ಖಾನೆಗಳಿಗೆ ₹48 ಸಾವಿರ ಕೋಟಿ ಸಹಾಯಧನ ನೀಡಲಾಗಿದೆ. 22 ಕೋಟಿ ಮಣ್ಣು ಪರೀಕ್ಷಾ ಕಾರ್ಡ್‌ಗಳನ್ನು ನೀಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್, ಸೋಲಾರ್ ವಿದ್ಯುತ್ ಬಳಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಿಂದ ಕಿಸಾನ್‌ ಸಮ್ಮಾನ್ ಯೋಜನೆ ಮೊದಲಾದವುಗಳನ್ನು ಸರ್ಕಾರ ರೈತರ ಪರವಾಗಿ ಮಾಡಿದೆ ಎಂದು ಕಡಾಡಿ ಹೇಳಿದರು.

ಕೃಷಿಯನ್ನು ಮತ್ತು ಕೊಡಗಿನಲ್ಲಿ ಕಾಫಿಯನ್ನು ಉದ್ಯಮ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಒಂದಷ್ಟು ಸಮಸ್ಯೆಗಳು ಪರಿಹಾರ ಆಗದೆ ಉಳಿದಿವೆ. ಕಾಫಿ ಕೃಷಿ ಮತ್ತು ಕಾಫಿ ಮಂಡಳಿಯ ಇತ್ತೀಚಿನ ಬೆಳವಣಿಗೆ ಕುರಿತು ತನ್ನ ಗಮನಕ್ಕೆ ತಂದಿದ್ದು, ಈ ಬಗ್ಗೆ ವಾಣಿಜ್ಯ ಇಲಾಖೆ ಮತ್ತು ಕೃಷಿ ಇಲಾಖೆಯೊಂದಿಗೆ ನೇರವಾಗಿ ಸಂಪರ್ಕಿಸುವ ಮತ್ತು ಮಲೆನಾಡು ಪ್ರದೇಶಗಳಿಗೆ ಸಂಬಂಧಿಸಿದಂತೆ ಅಲ್ಲಿಗೆ ಕೃಷಿ ಮತ್ತು ಸಮಸ್ಯೆಗಳ ಕುರಿತು ಪ್ರತ್ಯೇಕ ಸಭೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಲೋಕೇಶ್‌ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಹೊನ್ನಳಿ, ಶಿವಪ್ರಕಾಶ್, ರಾಜ್ಯ ಕಾರ್ಯದರ್ಶಿ ಡಾ.ಬಿ.ಸಿ.ನವೀನ್ ಕುಮಾರ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಾಲ್ಪಡಿ, ಕೃಷಿ ಮೋರ್ಚಾದ ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷೆ ಯಮುನಾ ಚಂಗಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು