ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನಿಂದ ಎಚ್ಚೆತ್ತು ಕೃಷಿ ಕಾಯ್ದೆ ವಾಪಸ್: ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ
Last Updated 3 ಡಿಸೆಂಬರ್ 2021, 15:34 IST
ಅಕ್ಷರ ಗಾತ್ರ

ಬೀದರ್: ‘ಉಪ ಚುನಾವಣೆ ಸೋಲಿನಿಂದ ಎಚ್ಚೆತ್ತು ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಇಲ್ಲಿಯ ಕೇಂದ್ರ ಬಸ್ ನಿಲ್ದಾಣ ಸಮೀಪದ ಝೀರಾ ಫಂಕ್ಷನ್ ಹಾಲ್‍ನಲ್ಲಿ ಶುಕ್ರವಾರ ನಡೆದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಮೊದಲು ಯಾರ ಮಾತನ್ನೂ ಕೇಳದೆ, ಚರ್ಚೆಗೂ ಅವಕಾಶ ನೀಡದೆ ಕಾಯ್ದೆಗಳನ್ನು ಅಂಗೀಕರಿಸಿದ್ದರು. ಈಚೆಗೆ ನಡೆದ ಉಪ ಚುನಾವಣೆಯಲ್ಲಿ ದೇಶದ ಅನೇಕ ಕಡೆಗಳಲ್ಲಿ ಬಿಜೆಪಿ ಸೋಲು ಅನುಭವಿಸಿದ ನಂತರ ಯಾರಿಗೂ ಹೇಳದೆ, ಕೇಳದೆ ಕಾಯ್ದೆಗಳನ್ನು ಹಿಂತೆಗೆದುಕೊಂಡಿದ್ದಾರೆ. ಕಾರ್ಮಿಕರಿಗೆ ಸಂಬಂಧಿಸಿದ ಮೂರು ಕಾಯ್ದೆಗಳು ಕೂಡ ಕೆಟ್ಟ ಕಾಯ್ದೆಗಳಾಗಿವೆ ಎಂದು ಆರೋಪಿಸಿದರು.

ಕೃಷಿ ಕಾಯ್ದೆ ಚರ್ಚೆ ವೇಳೆ ಪ್ರಶ್ನೆ ಕೇಳಿದ್ದಕ್ಕೆ ಕಾಂಗ್ರೆಸ್‍ನ 8 ಸಂಸದರನ್ನು ಅಮಾನತು ಮಾಡಲಾಗಿತ್ತು. ವಾಪಸ್ ಪಡೆಯುವಾಗ 12 ಸಂಸದರನ್ನು ಅಮಾನತುಗೊಳಿಸಲಾಯಿತು. ಬಿಜೆಪಿ ಸರ್ಕಾರ ಸತ್ಯ ಹೇಳುವವರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ ಎಂದರು.

ಮೋದಿ ಹಾಗೂ ತಮ್ಮ ನಡುವೆ ಇರುವುದು ತಾತ್ವಿಕ ಸಂಘರ್ಷವೇ ಹೊರತು ವೈಯಕ್ತಿಕ ಜಗಳವಲ್ಲ. ಮತದಾರರು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‍ ಗೆಲ್ಲಿಸಿದರೆ ಬಿಜೆಪಿ ಇನ್ನಷ್ಟು ಮಾರಕ ಕಾಯ್ದೆಗಳನ್ನು ಹಿಂಪಡೆಯಲಿದೆ ಎಂದು ಹೇಳಿದರು.

ಇಡೀ ದೇಶದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ ಚಲಾಯಿಸುವ ಹಕ್ಕು ಇರುವುದು ಕರ್ನಾಟಕದಲ್ಲಿ ಮಾತ್ರ. ಇದಕ್ಕೆ ಕಾರಣವಾದದ್ದು ಕಾಂಗ್ರೆಸ್. ಹೀಗಾಗಿ ಯಾರು ಅವಕಾಶ ಕೊಟ್ಟಿದ್ದಾರೋ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬೀದರ್ ಕ್ಷೇತ್ರದ ವೀಕ್ಷಕ ಶಿವರಾಮೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಶಾಸಕರಾದ ರಾಜಶೇಖರ ಪಾಟೀಲ, ರಹೀಂಖಾನ್, ಮಾಜಿ ಶಾಸಕ ಅಶೋಕ ಖೇಣಿ, ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ ಹುಮನಾಬಾದ್ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಮುಖಂಡರಾದ ಬಸವರಾಜ ಬುಳ್ಳಾ, ಕೆ. ಪುಂಡಲೀಕರಾವ್, ಮುರಳಿಧರ ಎಕಲಾರಕರ್, ದತ್ತಾತ್ರಿ ಮೂಲಗೆ, ವಿಜಯಕುಮಾರ ಕೌಡ್ಯಾಳ, ಮಾಲಾ ಬಿ. ನಾರಾಯಣರಾವ್, ಗೀತಾ ಚಿದ್ರಿ, ಚಂದ್ರಾಸಿಂಗ್, ಮೀನಾಕ್ಷಿ ಸಂಗ್ರಾಮ, ಚಂದ್ರಕಾಂತ ಹಿಪ್ಪಳಗಾಂವ್, ಶಂಕರ ರೆಡ್ಡಿ ಚಿಟ್ಟಾ, ಅಜ್ಮತ್ ಪಟೇಲ್, ಸಂಜಯ್ ಜಾಗೀರದಾರ್ ಮೊದಲಾದವರು ಇದ್ದರು.

ರಾಜಶೇಖರ ಪಾಟೀಲ ಅಷ್ಟೂರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT