ಬಾಗಲಕೋಟೆ: 'ನಮ್ಮ ಅಹವಾಲು ಕೇಳಿ ಮುಂದಕ್ಕೆ ತೆರಳಿ' ಎಂದು ಆಗ್ರಹಿಸಿ ಮುಧೋಳ ಸಮೀಪದ ಚಿಚಖಂಡಿ ಗ್ರಾಮದ ರೈತರು, ಸೋಮವಾರ ಪ್ರವಾಹ ಹಾನಿ ಅಧ್ಯಯನಕ್ಕೆ ಬಂದಿದ್ದಕೇಂದ್ರದ ತಂಡದ ವಾಹನಕ್ಕೆ ಅಡ್ಡ ಹಾಕಿದರು. ಮನವೊಲಿಸಲು ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರೊಂದಿಗೆ ವಾಗ್ವಾದ ನಡೆಸಿದರು.
‘ನೀವು (ಕೇಂದ್ರ ತಂಡ) ಬರುತ್ತೀರಿ. ನೋಡಿಹೋಗುತ್ತೀರಿ. ಬಂದು ಹೋಗುವ ನಿಮ್ಮ ಖರ್ಚಿನಷ್ಟು ಮೊತ್ತದ ಪರಿಹಾರವೂ ನಮಗೆ ಸಿಗುವುದಿಲ್ಲ. 2019ರಲ್ಲಿ ಘಟಪ್ರಭಾ ನದಿ ಪ್ರವಾಹದಿಂದ ಆಗಿದ್ದ ಹಾನಿಗೆ ಇನ್ನೂ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ನೀವು ಬಂದು ಹೋದರೂ ಏನು ಉಪಯೋಗವಿಲ್ಲ’ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಎಂಜಿನಿಯರ್ ಗುರುಪ್ರಸಾದ್, ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ಮಹೇಶ ಕುಮಾರ, ಕಂದಾಯ ಇಲಾಖೆ ಅಧಿಕಾರಿ ಶ್ರೀನಿವಾಸ ರೆಡ್ಡಿ ನೇತೃತ್ವದ ಅಧ್ಯಯನ ತಂಡಚಿಚಖಂಡಿಗೆ ಬಂದಿತ್ತು.
ಅಲ್ಲಿನ ಘಟಪ್ರಭಾ ನದಿ ಸೇತುವೆ ಆಸುಪಾಸಿನಲ್ಲಿ ಪ್ರವಾಹದಿಂದ ಕಬ್ಬಿನ ಗದ್ದೆಗಳಿಗೆ ಆದ ಹಾನಿ ವೀಕ್ಷಿಸಿ ತಂಡ ಹೊರಟಾಗ ಎದುರಾದ ರೈತರ ಗುಂಪು ತಮ್ಮ ಅಹವಾಲು ಆಲಿಸಿ ಎಂದು ಒತ್ತಾಯಿಸಿತು. ಮಧ್ಯಪ್ರವೇಶಿಸಿದ ಸ್ಥಳೀಯ ಅಧಿಕಾರಿಗಳು, ‘ಕೇಂದ್ರ ತಂಡದವರಿಗೆ ಕನ್ನಡ ಬರುವುದಿಲ್ಲ. ನೀವು ಹೇಳುವುದುಅವರಿಗೆ ಅರ್ಥವಾಗುವುದಿಲ್ಲ. ಬರೀ ಹಾನಿ ಪ್ರಮಾಣ ವೀಕ್ಷಣೆ ಮಾತ್ರ ಅವರು ಬಂದಿದ್ದಾರೆ. ನಿಮ್ಮ ಅಹವಾಲು ನಮಗೆ ಸಲ್ಲಿಸಿ. ಅದನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ’ ಎಂದರು.
ಇದರಿಂದ ಕೆರಳಿದ ರೈತರು ಚಿಂಚಖಂಡಿಯ ರೈತ ದಿವಾಕರ ಹೊಸಮಠ ಅಧಿಕಾರಿಗಳ ತಂಡ ಇದ್ದ ಕಾರಿಗೆ ಅಡ್ಡ ಕುಳಿತು ಪ್ರತಿಭಟಿಸಿದರು. ಉಳಿದವರು ಬೆಂಬಲಿಸಿದರು. ದಿವಾಕರ ಅವರನ್ನು ಸ್ಥಳದಿಂದ ಎಬ್ಬಿಸಲು ಜಿಲ್ಲಾಧಿಕಾರಿ ಮುಂದಾದಾಗ ವಾಗ್ಯುದ್ದಕ್ಕೆ ದಾರಿಯಾಯಿತು.
ಇದಕ್ಕೂ ಮುನ್ನ ದಿವಾಕರ ಹೊಸಮಠ, ತಮ್ಮ ಜಮೀನಿನಲ್ಲಿ ಕೊಳೆತ ಕಬ್ಬು ಕತ್ತರಿಸಿ ಕೇಂದ್ರ ತಂಡಕ್ಕೆ ತೋರಿಸಿದ್ದರು. 10 ಎಕರೆಯಲ್ಲಿ ಬೆಳೆದ ಕಬ್ಬು ಸತತ ಮೂರು ವರ್ಷಗಳಿಂದಲೂ ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಸಾಲ ಆಗಿದೆ ಎಂದು ಅಲವತ್ತುಕೊಂಡಿದ್ದರು.
ಕಾರಿನ ಎದುರು ಕುಳಿತಿದ್ದ ಹೊಸಮಠ ಅವರ ಕೈಯಲ್ಲಿ ಕುಡುಗೋಲು ಗಾಬರಿಯಾದ ಪೊಲೀಸರು ಅದನ್ನು ಕಿತ್ತುಕೊಂಡರು. ಅಲ್ಲಿದ್ದವರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಈ ವೇಳೆ ಕಾರಿನಿಂದ ಕೆಳಗಿಳಿದ ಕೇಂದ್ರ ತಂಡದ ಸದಸ್ಯರು ರೈತರ ಅಹವಾಲು ಆಲಿಸಿದರು.
ಶಾಶ್ವತ ಪರಿಹಾರ ಕಲ್ಪಿಸಿ:
'ನೀವು ಕೊಡುವ ಪರಿಹಾರದಲ್ಲಿ ಕೂಲಿ ಹಣವೂ ಗಿಟ್ಟುವುದಿಲ್ಲ. ಪ್ರತಿ ವರ್ಷ ಪ್ರವಾಹಕ್ಕೆ ಸಿಲುಕಿ ಬೆಳೆ ಕೈಗೆ ಸಿಗುತ್ತಿಲ್ಲ. ಶಾಶ್ವತ ಪರಿಹಾರ ಕಲ್ಪಿಸಿ' ಎಂದು ರೈತರು ಆಗ್ರಹಿಸಿದರು. ಅಹವಾಲನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದ ಅಧ್ಯಯನ ತಂಡ ನಿರ್ಗಮಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.