ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆಗೆ ತಡೆ: ರೈಲ್ವೆ ಕಂಬಿ ಮುರಿದ ಜಾಗಕ್ಕೆ ಮರದ ದಿಮ್ಮಿಯಿಂದ ಬೇಲಿ ನಿರ್ಮಾಣ

ಕಾಡಾನೆ ತಡೆ ಹಾವಳಿ ತಡೆಗೆ ಕ್ರಮ
Last Updated 25 ಸೆಪ್ಟೆಂಬರ್ 2020, 20:15 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕಾಡಾನೆಗಳು ಕಾಫಿ ತೋಟಕ್ಕೆ ಬಾರದಂತೆ ನಿರ್ಮಿಸಿದ್ದ ರೈಲ್ವೆ ಕಂಬಿಗಳು ಮುರಿದು ಹೋದ ಜಾಗಕ್ಕೆ ಅರಣ್ಯ ಇಲಾಖೆ ಈಗ ಮರದ ದಿಮ್ಮಿಯಿಂದ ಬೇಲಿಕಟ್ಟುವ ಕೆಲಸಕ್ಕೆ ಮುಂದಾಗಿದೆ.

ತಿತಿಮತಿ, ನೊಕ್ಯದ ಅರಣ್ಯದಂಚಿನಲ್ಲಿ ನಿರ್ಮಿಸಿದ್ದ ಭಾರಿ ಗಾತ್ರದ ರೈಲ್ವೆ ಕಂಬಿಗಳನ್ನು ಮುರಿದು ನಾಗರಹೊಳೆ ಅರಣ್ಯದ ಆನೆಗಳು ತಿತಿಮತಿ, ನೊಕ್ಯದ ಕಾಫಿ ತೋಟಕ್ಕೆ ನುಗ್ಗುತ್ತಿದ್ದವು. ಇದರಿಂದ ಅರಣ್ಯ ಇಲಾಖೆ ಈಗ ರೈಲ್ವೆ ಕಂಬಿಗಳನ್ನು ಮರು ನಿರ್ಮಾಣ ಮಾಡುವುದರ ಬದಲು ಮಳೆಯಲ್ಲಿ ನೆಂದು, ಗೆದ್ದಲು ಹಿಡಿದಿರುವ ಹಳೆಯ ಮರದ ದಿಮ್ಮಿಗಳನ್ನು ಸಾಕಾನೆ ಮೂಲಕ ಎಳೆಸಿ ಬೇಲಿ ಹೆಣೆಯುವ ಕೆಲಸಕ್ಕೆ ಮುಂದಾಗಿದೆ.

ಬಲವಾದ ರೈಲ್ವೆ ಕಂಬಿಗಳನ್ನೇ ಬಿಡದ ಕಾಡಾನೆಗಳು ಮರದ ದಿಮ್ಮಿಗಳನ್ನು ನೋಡಿ ಹೆದುರುತ್ತವೇ?ಇದು ನಿಜಕ್ಕೂ ಹಾಸ್ಯಾಸ್ಪದ. ಅರಣ್ಯ ಇಲಾಖೆಯ ಈ ಕೆಲಸ ಕಾಫಿ ಬೆಳೆಗಾರರ ಕಣ್ಣೊರೆಸುವ ತಂತ್ರವಾಗಿದೆ ಎಂದು ನೊಕ್ಯದ ಕಾಫಿ ಬೆಳೆಗಾರ ಹಾಗೂ ಜಿಲ್ಲಾ ರೈತ ಸಂಘದ ಪದಾಧಿಕಾರಿ ಚೆಪ್ಪುಡೀರ ಕಾರ್ಯಪ್ಪ ಆರೋಪಿಸಿದ್ದಾರೆ.

2 ವರ್ಷದ ಹಿಂದೆ ಆರಂಭಿಸಿದ್ದ ರೈಲ್ವೆ ಕಂಬಿ ನಿರ್ಮಾಣ ಅತ್ಯಂತ ಕಳಪೆ ಕಾಮಗಾರಿಯಾಗಿತ್ತು. ಇದರ ಬಗ್ಗೆ ಅಂದು ಅರಣ್ಯ ಇಲಾಖೆಯ ಉನ್ನತ ಆಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಅಂದಿನ ಅಧಿಕಾರಿಗಳು ಕೇವಲ ತನಿಖೆ ನಡೆಸುವ ನಾಟಕವಾಡಿ ಕೆಲಸ ಮಾಡಿ ಮುಗಿಸಿದರು. ಅದರ ಪರಿಣಾಮದಿಂದ ಕೇವಲ ಎರಡು ವರ್ಷದಲ್ಲಿ ಕೋಟ್ಯಂತರ ರೂಪಾಯಿ ಅನುದಾನದ ಕಾಮಗಾರಿ ಹಳ್ಳ ಹಿಡಿದಿದೆ. ರೈಲ್ವೆ ಕಂಬಿಗಳು ಮುರಿದು ಬಿದ್ದು ಆನೆಗಳು ಸುಲಭವಾಗಿ ಕಾಡಿನಿಂದ ನಾಡಿಗೆ ಬರುತ್ತಿವೆ ಎಂದು ದೂರಿದರು.

ತಿತಿಮತಿ ಅರಣ್ಯ ಇಲಾಖೆಯ ಅತಿಥಿ ಗೃಹದ ಬಳಿಯೂ ರೈಲ್ವೆ ಕಂಬಿಗಳ ನಿರ್ಮಾಣ ಕಾರ್ಯ ಇದೀಗ ನಡೆಯುತ್ತಿದೆ. ಸ್ಥಳೀಯ ಕಾರ್ಮಿಕರನ್ನು ಕಡಿಮೆ ಕೂಲಿಗೆ ಬಳಸಿಕೊಂಡು ನಾಮಕಾವಸ್ತೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT