ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವೆಡೆ ಡಿಎಪಿ, ಯೂರಿಯಾ ಕೊರತೆ: ಸಮಸ್ಯೆ ಅಲ್ಲಗಳೆಯುತ್ತಿರುವ ಸರ್ಕಾರ

ಸಮಸ್ಯೆ ಅಲ್ಲಗಳೆಯುತ್ತಿರುವ ಕೇಂದ್ರ, ರಾಜ್ಯ ಸರ್ಕಾರ
Last Updated 31 ಅಕ್ಟೋಬರ್ 2021, 22:15 IST
ಅಕ್ಷರ ಗಾತ್ರ

ಬೆಂಗಳೂರು: ಹಿಂಗಾರು ಹಂಗಾಮಿನ ಬಿತ್ತನೆ ಚುರುಕಾಗುತ್ತಿರುವ ಸಮಯದಲ್ಲೇ ರಾಜ್ಯದ ಹಲವೆಡೆ ಡಿಎಪಿ, ಯೂರಿಯಾ ರಸಗೊಬ್ಬರಗಳ ಕೊರತೆ ಸೃಷ್ಟಿಯಾಗಿದೆ. ದಿನದಿಂದ ದಿನಕ್ಕೆ ರಸಗೊಬ್ಬರ ಸಮಸ್ಯೆ ಹೆಚ್ಚುತ್ತಿದ್ದು, ರೈತರು ದಿನವಿಡೀ ಅಂಗಡಿಗಳ ಎದುರು ಕಾದು ನಿಲ್ಲಬೇಕಾದ ಸ್ಥಿತಿ ಕೆಲವು ಜಿಲ್ಲೆಗಳಲ್ಲಿ ಇದೆ.

ಬಾಗಲಕೋಟೆ, ಉತ್ತರ ಕನ್ನಡ, ಚಿಕ್ಕಮಗಳೂರು, ರಾಮನಗರ, ರಾಯಚೂರು, ಚಾಮರಾಜನಗರ, ಮಂಡ್ಯ, ಕಲಬುರಗಿ, ಯಾದಗಿರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ರಸಗೊಬ್ಬರದ ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಕೆಲವೆಡೆ ಡಿಎಪಿ ರಸಗೊಬ್ಬರದ ಕೊರತೆ ತೀವ್ರವಾಗಿದ್ದು, ಪರ್ಯಾಯವಾಗಿ ಕಾಂಪ್ಲೆಕ್ಸ್‌ ರಸಗೊಬ್ಬರ ಬಳಸುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ರೈತರ ಮನವೊಲಿಕೆಗೆ ಕಸರತ್ತು ಮಾಡುತ್ತಿದ್ದಾರೆ.

‘ರಾಜ್ಯದಲ್ಲಿ ರಸಗೊಬ್ಬರದ ಕೊರತೆಯೇ ಇಲ್ಲ. ಬೇಡಿಕೆಗಿಂತ ಹೆಚ್ಚು ದಾಸ್ತಾನು ಇದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದ್ದರು. ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ ಇದನ್ನು ಪುನರುಚ್ಛರಿಸಿದ್ದರು.

ಕೇಂದ್ರ ಸರ್ಕಾರದ ರಸಗೊಬ್ಬರ ಇಲಾಖೆಯ ವೆಬ್‌ಸೈಟ್‌ನಲ್ಲಿರುವ ಮಾಹಿತಿಯೂ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ದಾಸ್ತಾನು ಇದೆ ಎಂದೇ ಹೇಳುತ್ತಿದೆ. ಆದರೆ, ಸ್ಥಳೀಯವಾಗಿ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ದೊರೆಯುತ್ತಿಲ್ಲ. ಕೆಲವು ಭಾಗಗಳಲ್ಲಿ ಯೂರಿಯಾ ಕೊರತೆ ಇದ್ದರೆ, ಇನ್ನು ಕೆಲವೆಡೆ ಡಿಎಪಿ ಕೊರತೆ ತಲೆದೋರಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ಡಿಎಪಿ ಕೊರತೆ ತೀವ್ರವಾಗಿದ್ದು, ರೈತರು ಇಡೀ ದಿನ ಅಂಗಡಿಗಳ ಮುಂದೆ ಕಾದು ನಿಂತಿರುವ ದೃಶ್ಯ ಕಂಡುಬರುತ್ತಿದೆ. ಗದಗ ಜಿಲ್ಲೆಯ ರೋಣ ತಾಲ್ಲೂಕಿನಲ್ಲೂ ಅದೇ ಪರಿಸ್ಥಿತಿ ಇದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನಲ್ಲೂ ಕೊರತೆ ಎದುರಾಗಿದ್ದು, ರಸಗೊಬ್ಬರ ಅಂಗಡಿಗಳ ಮುಂದೆ ಉದ್ದನೆಯ ಸಾಲು ನಿತ್ಯವೂ ಕಾಣುತ್ತಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ರಸಗೊಬ್ಬರದ ಕೊರತೆ ಹೆಚ್ಚಾಗಿದ್ದು, ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ದೂರುಗಳಿವೆ. ಯೂರಿಯಾ ಬೇಡಿಕೆ ಹೆಚ್ಚಿದ್ದು, ಇತರ ಗೊಬ್ಬರ ಖರೀದಿಸಿದವರಿಗೆ ಮಾತ್ರ ಯೂರಿಯಾ ನೀಡಲಾಗುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಮಾಡಿರುವ ರೈತರು ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಪೊಟ್ಯಾಷ್‌ ಮತ್ತು ಡಿಎಪಿಗೆ 15 ದಿನಗಳಲ್ಲಿ ಬೇಡಿಕೆ ಹೆಚ್ಚಲಿದೆ. ಆದರೆ, ಎರಡೂ ರಸಗೊಬ್ಬರ ದಾಸ್ತಾನು ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಳೆದ ತಿಂಗಳು ರಸಗೊಬ್ಬರದ ತೀವ್ರ ಅಭಾವ ಎದುರಾಗಿತ್ತು. ಕೆಲವು ಸಹಕಾರ ಸಂಸ್ಥೆಗಳ ಎದುರು ರೈತರು ಗಲಾಟೆ ಮಾಡಿದ್ದ ಪ್ರಕರಣಗಳೂ ನಡೆದಿದ್ದವು. ಈ ತಿಂಗಳು ಹೆಚ್ಚುವರಿ ರಸಗೊಬ್ಬರ ಪೂರೈಕೆ ಮಾಡಿರುವುದರಿಂದ ಪರಿಸ್ಥಿತಿ ತುಸು ಸುಧಾರಿಸಿದೆ. ಆದರೆ, ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಮತ್ತೆ ಸಮಸ್ಯೆ ಎದುರಾಗಬಹುದು ಎಂಬ ಆತಂಕವಿದೆ.

ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಗಾರರಿಗೆ ಬೇಡಿಕೆಗೆ ತಕ್ಕಷ್ಟು ಡಿಎಪಿ ಮತ್ತು ಪೊಟ್ಯಾಷ್‌ ಗೊಬ್ಬರ ಲಭ್ಯವಾಗುತ್ತಿಲ್ಲ. ರಾಮನಗರ ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ನಿರಂತರವಾಗಿ ಮುಂದುವರಿದಿದೆ. ಗೊಬ್ಬರದ ಅಂಗಡಿಗಳ ಎದುರು ರೈತರ ಸಾಲು ಕಡಿಮೆಯಾಗುತ್ತಿಲ್ಲ.

ಈ ಕುರಿತು ಕೃಷಿ ಸಚಿವರು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಯಾರೂ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT