ಶುಕ್ರವಾರ, ಅಕ್ಟೋಬರ್ 23, 2020
21 °C
ಸಭೆ–ಸಮಾರಂಭದಲ್ಲಿ 50ಕ್ಕಿಂತ ಹೆಚ್ಚು ಜನ‌ ಸೇರಿದರೆ ಆಯೋಜಕರ‌ ವಿರುದ್ಧ ಕ್ರಮ– ಕೆ. ಸುಧಾಕರ್

ಮಾಸ್ಕ್‌ ಧರಿಸದಿದ್ದರೆ ₹ 1,000 ದಂಡ: ಕೆ. ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಾಸ್ಕ್‌ ಧರಿಸದವರಿಗೆ ದಂಡ ಪ್ರಮಾಣವನ್ನು ನಗರ ಪ್ರದೇಶದಲ್ಲಿ ₹ 1,000 ಹಾಗೂ ಗ್ರಾಮೀಣ ಪ್ರದೇಶದಲ್ಲಿ ₹ 500ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಉನ್ನತಮಟ್ಟದ ಸಭೆಯ ಬಳಿಕ ಮಾತನಾಡಿದ ಅವರು, ‘ಹಿರಿಯ ಅಧಿಕಾರಿಗಳ ಶಿಫಾರಸಿನ‌ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು, ಮುಖ್ಯಮಂತ್ರಿ ಜತೆ ಚರ್ಚಿಸಿ ಗುರುವಾರ ಅಧಿಕೃತ ಆದೇಶ ಹೊರಡಿಸಲಾಗುವುದು’ ಎಂದರು.

‘ಪೂರ್ತಿ ಮಾಸ್ಕ್ ಧರಿಸದವರಿಗೂ ದಂಡ ವಿಧಿಸಲಾಗುವುದು. ನಿರ್ಲಕ್ಷ್ಯ ತೋರುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ದಂಡ ಮೊತ್ತ ಹೆಚ್ಚಿಸಲಾಗಿದೆ. ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಗೆ ಗುರಿ ನಿಗದಿ ಮಾಡಲಾಗುವುದು’ ಎಂದು ಹೇಳಿದರು.

‘ಕೊರೊನಾ ಜಾಗೃತಿ ವಿಶೇಷ ಕಾರ್ಯಯೋಜನೆ ರಚಿಸಲಾಗಿದೆ. ರಾಜಕಾರಣಿಗಳು, ಕ್ರೀಡಾ, ಸಿನಿಮಾ ತಾರೆಯರು, ಧಾರ್ಮಿಕ ಗುರುಗಳ ಮೂಲಕ ಮಾಸ್ಕ್‌ ಧರಿಸುವ ಬಗ್ಗೆ, ಕೊರೊನಾ ನಿಯಂತ್ರಣ ಕುರಿತು ವಿಡಿಯೊ ತುಣುಕು ಮಾಡಿ ಪ್ರಚಾರಕ್ಕೆ ಬಳಸಲಾಗುವುದು’ ಎಂದರು.

ರಾಜ್ಯದ 15 ಜಿಲ್ಲೆಗಳಲ್ಲಿ ಶೇ 10ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲಾಗುತ್ತಿದೆ. ಈ ಪೈಕಿ, ಮೈಸೂರು, ಹಾಸನ, ದಕ್ಷಿಣ ಕನ್ನಡ, ತುಮಕೂರು ಶಿವಮೊಗ್ಗ ಮತ್ತು ಕೊಪ್ಪಳ ಜಿಲ್ಲಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ಬುಧವಾರ ವಿಡಿಯೊ ಸಂವಾದ ನಡೆಸಿ ಪಾಸಿಟಿವ್ ಪ್ರಮಾಣ ಕಡಿಮೆ‌ ಮಾಡಲು ತೆಗೆದುಕೊಳ್ಳಬೇಕಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಉಳಿದ‌ ಜಿಲ್ಲೆಗಳ ಜೊತೆ‌ಗೂ ಸಭೆ ನಡೆಸಲಾಗುವುದು ಎಂದರು.

ಶೇ 17ರಷ್ಟು ಪಾಸಿಟಿವ್ ಪ್ರಮಾಣ ಮೈಸೂರಿನಲ್ಲಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ.

‘ಸಾರಿಗೆ ಬಸ್‌ಗಳಲ್ಲಿ ಶೇ 50ರಷ್ಟು ಪ್ರಯಾಣಿಕರಿಗೆ ಅವಕಾಶವಿದೆ. ಮಾಸ್ಕ್‌ ಇಲ್ಲದವರನ್ನು ಬಸ್‌ ಒಳಗೆ ಬಿಡದಂತೆ ನಿರ್ವಾಹಕರಿಗೆ ಸೂಚಿಸಲಾಗುವುದು. ಎಲ್ಲ ಸರ್ಕಾರಿ ಕಚೇರಿಗಳ ನೌಕರರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಇಲ್ಲವಾದರೆ ಕಚೇರಿ ಪ್ರವೇಶ ನಿರಾಕರಿಸಲಾಗುವುದು’ ಎಂದೂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು