ಭಾನುವಾರ, ಏಪ್ರಿಲ್ 18, 2021
24 °C
ಕಮಿಷನರ್ ಕಚೇರಿಯಿಂದ ಕಬ್ಬನ್ ಪಾರ್ಕ್ ಠಾಣೆಗೆ ದೂರುದಾರ

ಸಿ.ಡಿ. ದೃಶ್ಯಗಳ ಸಹಿತ ದೂರು; ಸಂತ್ರಸ್ತೆ ಹೇಳಿಕೆ ನಂತರವೇ ಎಫ್‌ಐಆರ್ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಚಿವ ರಮೇಶ ಜಾರಕಿಹೊಳಿ ಮೇಲೆ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಸಂತ್ರಸ್ತೆ ಹೇಳಿಕೆ ಪಡೆದ ಬಳಿಕವೇ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. 

‘ಪ್ರಕರಣದಲ್ಲಿ ಮೂರನೇ ವ್ಯಕ್ತಿ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ಹೇಳಿಕೆಯೇ ಮಹತ್ವ ಪಡೆದುಕೊಳ್ಳುತ್ತದೆ. ಹೀಗಾಗಿ, ಹೇಳಿಕೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಹೇಳಿಕೆ ದಾಖಲಾದ ನಂತರವೇ ಮುಂದಿನ ಕಾನೂನು ಕ್ರಮ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರ ಕರ್ನಾಟಕದ ಯುವತಿ, ಬೆಂಗಳೂರಿನಲ್ಲಿ ವಾಸವಿದ್ದರು. ಸಿ.ಡಿ ಬಗ್ಗೆ ದೂರು ಸ್ವೀಕರಿಸಿರುವ ಪೊಲೀಸರು, ಇದೀಗ ಯುವತಿ ಹಾಗೂ ಆಕೆಯ ಕುಟುಂಬದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ’.

‘ಸಂತ್ರಸ್ತೆ ಪರವಾಗಿ ದೂರು ನೀಡಿರುವ ದಿನೇಶ್, ‘ಸಚಿವ ರಮೇಶ ಜಾರಕಿಹೊಳಿ ಆರೋಪಿ’ ಎಂದು ಹೇಳಿದ್ದಾರೆ. ಆದರೆ, ಪ್ರಕರಣದ ಸಂತ್ರಸ್ತೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಹೀಗಾಗಿ ಅವರ ಹಾಗೂ ಕುಟುಂಬದವರ ಹೇಳಿಕೆ ಪಡೆಯಬೇಕು. ಹೇಳಿಕೆ ಪಡೆದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಪ್ರಕರಣದ ಮಾಹಿತಿ ಕಲೆ ಹಾಕಲೆಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ಈಗಾಗಲೇ ವಿಶೇಷ ತಂಡವೊಂದನ್ನು ರಚಿಸಿದ್ದಾರೆ.

‘ಸಂತ್ರಸ್ತೆ ಸಂಬಂಧಿ ನೀಡಿದ ಮಾಹಿತಿ ಆಧರಿಸಿ ದೂರು’

‘ಪ್ರಭಾವಿ ಸಚಿವರಿಂದ ಯುವತಿಗೆ ಆದ ಅನ್ಯಾಯದ ಬಗ್ಗೆ ಕುಟುಂಬದ ಸದಸ್ಯರೊಬ್ಬರು ಮಾಹಿತಿ ನೀಡಿದ್ದರು. ಅದರನ್ವಯ ವಕೀಲರ ಸಲಹೆ ಪಡೆದು ಠಾಣೆಗೆ ದೂರು ನೀಡಿದ್ದೇನೆ’ ಎಂದು ನಾಗರಿಕ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ ತಿಳಿಸಿದರು.

ಕಬ್ಬನ್ ಪಾರ್ಕ್ ಠಾಣೆಗೆ ಮಂಗಳವಾರ ರಾತ್ರಿ ದೂರು ನೀಡಿ ಹೊರಬಂದ ದಿನೇಶ್, ‘ನೊಂದ ಯುವತಿಗೆ ನ್ಯಾಯ ಕೊಡಿಸಲು ಹೋರಾಟ ಆರಂಭಿಸಿದ್ದೇನೆ. ಪೊಲೀಸರು ಹಾಗೂ ನ್ಯಾಯಾಂಗದ ಮೇಲೆ ವಿಶ್ವಾಸವಿದೆ’ ಎಂದರು.

‘ಯುವತಿ ಹಾಗೂ ಆಕೆಯ ಕುಟುಂಬದವರಿಗೆ ಸಚಿವರಿಂದ ಬೆದರಿಕೆ ಇದೆ. ಸಂತ್ರಸ್ತೆ ಹಾಗೂ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗವಾಗಿ ಹೇಳಲು ಆಗದು’ ಎಂದೂ ಹೇಳಿದರು.

‘ದೂರು ನೀಡುವ ವೇಳೆ ಪೊಲೀಸರು ಹಲವು ಮಾಹಿತಿ ಕೇಳಿದ್ದಾರೆ. ತನಿಖೆಗೆ ಅಗತ್ಯವಾದ ಎಲ್ಲ ಮಾಹಿತಿ ನೀಡಿದ್ದೇನೆ. ಮುಂದೆಯೂ ನೀಡುತ್ತೇನೆ’ ಎಂದರು.

ಸೋಮವಾರ ಸಿ.ಡಿ ಸಿಕ್ಕಿತ್ತು: ‘ಸಚಿವರು ಯುವತಿ ಜೊತೆಗಿದ್ದ ಹಾಗೂ ಸಂಭಾಷಣೆ ನಡೆಸಿದ್ದ ದೃಶ್ಯಗಳ ಸಿ.ಡಿ, ಸೋಮವಾರ ಬೆಳಿಗ್ಗೆ ಸಿಕ್ಕಿತ್ತು. ವಕೀಲರಿಂದ
ಕಾನೂನು ಸಲಹೆ ಪಡೆದು, ಎಲ್ಲ ಮಾಹಿತಿ ಕಲೆ ಹಾಕಿ ದೂರು ನೀಡಿದ್ದೇನೆ’ ಎಂದೂ ದಿನೇಶ್
ಹೇಳಿದರು.

ಕಮಿಷನರ್ ಕಚೇರಿಗೆ ಹೋಗಿದ್ದರು: ‘ಪ್ರಭಾವಿ ಸಚಿವರೊಬ್ಬರ ಸಿ.ಡಿ ಬಗ್ಗೆ ಕಮಿಷನರ್ ಕಮಲ್ ಪಂತ್ ಅವರಿಗೆ ದೂರು ನೀಡುತ್ತೇನೆ’ ಎಂದು ಮಂಗಳವಾರ ಮಧ್ಯಾಹ್ನವೇ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದ ದಿನೇಶ್, ಇನ್ಫೆಂಟ್ರಿ ರಸ್ತೆಯಲ್ಲಿರುವ ಕಮಿಷನರ್ ಕಚೇರಿಗೆ ಸಂಜೆ ಬಂದಿದ್ದರು.

ದೂರನ್ನು ಪರಿಶೀಲಿಸಿದ ಕಮಿಷನರ್, ಕಬ್ಬನ್ ಪಾರ್ಕ್ ಠಾಣೆಗೆ ಹೋಗುವಂತೆ ತಿಳಿಸಿದ್ದರು. ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ ನಂತರ ಬಿಗಿ ಭದ್ರತೆಯಲ್ಲಿ ದಿನೇಶ್ ಸ್ಥಳದಿಂದ ತೆರಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು