ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ, ಎಸ್‌ಟಿ ನಿಧಿ ದುರ್ಬಳಕೆಯಾದರೆ ಎಫ್‌ಐಆರ್‌: ಪಿ. ಮಣಿವಣ್ಣನ್

ಎಸ್‌ಸಿಎಸ್‌ಪಿ– ಟಿಎಸ್‌ಪಿ ಅನುದಾನ ಬಳಸದಿದ್ದರೆ ಶಿಸ್ತುಕ್ರಮ: ಎಚ್ಚರಿಕೆ
Last Updated 13 ಡಿಸೆಂಬರ್ 2022, 1:50 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌ಟಿ) ಜನರ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಉದ್ದೇಶಪೂರ್ವಕವಾಗಿ ಬಳಸದ ಅಧಿಕಾರಿಗಳ ಮೇಲೆ ಚಾಟಿ ಬೀಸಲು ಮುಂದಾಗಿರುವ ರಾಜ್ಯ ಸರ್ಕಾರ, ಕರ್ತವ್ಯ ನಿರ್ಲಕ್ಷ್ಯದ ತೀವ್ರತೆ‌ ಪರಿಗಣಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದೆ.

ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ‘ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ’ (ಎಸ್‌ಸಿಎಸ್‌ಪಿ– ಟಿಎಸ್‌ಪಿ) ಅಡಿಯಲ್ಲಿ ಪ್ರತಿವರ್ಷ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ. ‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಕಾಯ್ದೆ 2014ರ ಏಪ್ರಿಲ್‌ 1ರಿಂದ ಜಾರಿಗೆ ಬಂದಿದ್ದು, ಅನುದಾನ ವೆಚ್ಚ ಮಾಡದ ಅಧಿಕಾರಿಗಳಿಗೆ ಆರು ತಿಂಗಳಿಗೆ ಕಡಿಮೆ ಇಲ್ಲದಂತೆ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಆದರೆ, ಕಾಯ್ದೆ ಜಾರಿಗೆ ಬಂದ ಬಳಿಕ ಅನುದಾನ ವೆಚ್ಚವಾಗದ ಪ್ರಕರಣಗಳು ಪ್ರತಿವರ್ಷ ಸುದ್ದಿಯಾಗುತ್ತಿದ್ದರೂ ಒಬ್ಬನೇ ಒಬ್ಬ ಅಧಿಕಾರಿ‌ ಮೇಲೆ ಕ್ರಮ ತೆಗೆದುಕೊಂಡ ನಿದರ್ಶನ ಇಲ್ಲ. ಇದೀಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಯೋಜನೆಯಡಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಲಕ್ಷ್ಯ ತೋರಿದ ಅಥವಾ ಅನುದಾನ ದುರ್ಬಳಕೆ ಮಾಡಿದ ದೂರುಗಳ ವಿಚಾರಣೆ ನಡೆಸಿ ಶಿಸ್ತು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.

ಎಸ್‌ಸಿಎಸ್‌ಪಿ– ಟಿಎಸ್‌ಪಿ ಅಡಿ ಮೀಸಲಿಟ್ಟ ಅನುದಾನದಲ್ಲಿ ವಿವಿಧ ಇಲಾಖೆಗಳ ಮೂಲಕ ಕಾರ್ಯಕ್ರಮಗಳು, ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು ₹29,165.81 ಕೋಟಿ ಮೀಸಲಿಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಈ ಅನುದಾನವನ್ನು ಪರಿಶಿಷ್ಟರ ಅಭಿವೃದ್ಧಿಗೆ ಬಳಸದೆ ಸಾಮಾನ್ಯ ವರ್ಗದವರಿಗೆ ಬಳಸಿರುವ ದೂರುಗಳಿವೆ. ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಸಮಾಜ ಕಲ್ಯಾಣ ಇಲಾಖೆಯಡಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಕೋಶ ಆರಂಭಿಸಲಾಗಿದ್ದು, ದೂರುಗಳ ಬಗ್ಗೆ ಈ ಕೋಶ ಕ್ರಮವಹಿಸಲಿದೆ.

‘ಸಚಿವರ 3 ಮಂತ್ರಗಳ ಭಾಗ ಈ ಸುತ್ತೋಲೆ’

‘ಪಾರದರ್ಶಕತೆ ಕಾಯ್ದುಕೊಳ್ಳಬೇಕು, ಯಾರಾದರೂ ತಪ್ಪು ಮಾಡಿದರೆ ಅಂಥವರ ಮೇಲೆ ಕ್ರಮ ತೆಗೆದುಕೊಳ್ಳ
ಬೇಕು, ಪ್ರಕ್ರಿಯೆಗಳನ್ನು ಸರಳೀಕರಿಸಬೇಕು ಎಂಬ ಮೂರು ಮಂತ್ರಗಳನ್ನು ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ. ಆ ಮಂತ್ರಗಳ ಭಾಗವಾಗಿ ಹಾಗೂ ಅನುದಾನವನ್ನು ಯಾರಾದರೂ ದುರ್ಬಳಕೆ ಮಾಡಿದರೆ ಅಥವಾ ನಿರ್ಲಕ್ಷ್ಯ ತೋರಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚಿರುವುದರಿಂದ ಈ ಸುತ್ತೋಲೆ ಹೊರಡಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT