ಭಾನುವಾರ, ಮೇ 22, 2022
25 °C
ಗ್ರಾಮಸ್ಥರ ಮನೆ ಬಾಗಿಲಿಗೆ ಸೇವೆ

12 ಜಿಲ್ಲೆಗಳಲ್ಲಿ ‘ಗ್ರಾಮ ಒನ್‌’, ಮಾರ್ಚ್ ಅಂತ್ಯದೊಳಗೆ ರಾಜ್ಯದಾದ್ಯಂತ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬೆಂಗಳೂರು ಒನ್‌’, ‘ಕರ್ನಾಟಕ ಒನ್‌’ ಮಾದರಿಯಲ್ಲೇ ಸರ್ಕಾರಿ ಸೇವೆಗಳನ್ನು ಗ್ರಾಮಸ್ಥರಿಗೆ ತಲುಪಿಸುವ ‘ಗ್ರಾಮ ಒನ್‌’ ಯೋಜನೆ ಮೊದಲ ಹಂತದಲ್ಲಿ 12 ಜಿಲ್ಲೆಗಳ 3,026 ಗ್ರಾಮ ಪಂಚಾಯಿತಿಗಳಲ್ಲಿ ಆರಂಭಗೊಂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಈ ಯೋಜನೆಗೆ ವರ್ಚುವಲ್‌ ಮೂಲಕ ಚಾಲನೆ ನೀಡಿದರು. ‘ಮಾರ್ಚ್ ಅಂತ್ಯದೊಳಗೆ ಈ ಯೋಜನೆಯನ್ನು ಉಳಿದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದು ಅವರು ಹೇಳಿದರು.

‘ಕಂದಾಯ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಧಾರ್, ರೇಷನ್ ಕಾರ್ಡ್ ಮತ್ತಿತರ ಸೇವೆಗಳನ್ನು ಗ್ರಾಮಮಟ್ಟದಲ್ಲಿಯೇ ಲಭ್ಯವಾಗಿಸುವ ಚಿಂತನೆಯಿಂದ ಈ ಯೋಜನೆ ಆರಂಭಿಸಲಾಗಿದೆ. ತಾಲ್ಲೂಕು ಕಚೇರಿಗಳಲ್ಲಿ ಉಂಟಾಗುತ್ತಿರುವ ಜನಸಂದಣಿ ತಪ್ಪಿಸಲು ಹಾಗೂ ಸೇವೆಗಳ ಪೂರೈಕೆಯನ್ನು ವಿಕೇಂದ್ರೀಕರಿಸುವ ಉದ್ದೇಶದಿಂದ ಈ ಎಲ್ಲ ಸೇವೆಗಳನ್ನು ಗ್ರಾಮಮಟ್ಟದಲ್ಲಿ ಒದಗಿಸಲಾಗುವುದು. ಗ್ರಾಮಸ್ಥರು ಗ್ರಾಮ ಪಂಚಾಯತಿ ಕಚೇರಿಗೆ ತೆರಳಿ ‘ಗ್ರಾಮ ಒನ್‌’ ಸೇವಾ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆದುಕೊಳ್ಳಬಹುದು. ಆ ಮೂಲಕ, ಜನರು ಸಮಯ ಹಾಗೂ ಹಣ ವ್ಯಯ ಮಾಡುವುದು ತಪ್ಪಲಿದೆ’ ಎಂದರು.

ಇದನ್ನೂ ಓದಿ: 

‘ಈ ಹಿಂದೆ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಆರಂಭಿಸಿ ಅನುಷ್ಠಾನದಲ್ಲಿನ ಎಲ್ಲ ತೊಡಕುಗಳನ್ನು ನಿವಾರಿಸಲಾಗಿದೆ. ಉತ್ತಮ ಸಲಕರಣೆಗಳು, ಸಮರ್ಥ ಹಾಗೂ ಸದೃಢ ತಂತ್ರಜ್ಞಾನದಿಂದ ಯಾವುದೇ ಅಡಚಣೆಗಳಿಲ್ಲದೆಸೇವೆ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಜನರಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ಕ್ರಾಂತಿಕಾರಿ ಬದಲಾವಣೆ ಇದು. ಸರ್ಕಾರದ ಸೇವೆಗಳನ್ನು ತಳಮಟ್ಟದಲ್ಲಿ ಸಮರ್ಪಕವಾಗಿ ಮತ್ತು ಸುಲಭವಾಗಿ ತಲುಪಿಸಲಾಗುವುದು. ಈ ವ್ಯವಸ್ಥೆಯ ಮೂಲಕ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಜನರ ವಿಶ್ವಾಸ ಗಳಿಸುವ ಚಿಂತನೆ ಇದೆ’ ಎಂದು ತಿಳಿಸಿದರು.

‘ಸಚಿವರು, ಶಾಸಕರು, ಜನಪ್ರತಿನಿಧಿಗಳು ಗ್ರಾಮ ಒನ್ ವ್ಯವಸ್ಥೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜೊತೆಗೆ, ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಇದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಬೇಕು’ ಎಂದೂ ಮುಖ್ಯಮಂತ್ರಿ ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳಿಗೆ ಹೊಣೆಗಾರಿಕೆ: ‘ಈ ಯೋಜನೆಯಡಿ ಪ್ರಾಯೋಗಿಕ ಹಂತದಲ್ಲಿಯೇ ಆರು ಲಕ್ಕಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ಸೇವೆಗಳನ್ನು ಪೂರೈಸಲಾಗಿದೆ. ತಹಶೀಲ್ದಾರರು, ಉಪ ಆಯುಕ್ತರ ಸಹಕಾರ ಬಹಳ ಮುಖ್ಯ. ಆನ್‌ಲೈನ್‌ನಲ್ಲಿ ಸ್ವೀಕೃತವಾಗುವ ಅರ್ಜಿಗಳಿಗೆ ಶೀಘ್ರ ಮಂಜೂರಾತಿ ನೀಡಿದಾಗ ಮಾತ್ರ ಸಂಬಂಧಪಟ್ಟ ಪ್ರಮಾಣಪತ್ರಗಳನ್ನು ಜನರಿಗೆ ಲಭ್ಯವಾಗಿಸಲು ಸಾಧ್ಯ. ಜನರಿಗೆ ಸೇವೆ ಒದಗಿಸುವ ಎಲ್ಲ ಹಂತದ ವ್ಯವಸ್ಥೆಯನ್ನು ತಾಲ್ಲೂಕು ಕಚೇರಿಯಲ್ಲಿ ಕಲ್ಪಿಸಿ, ಆನ್‌ಲೈನ್‌ನಲ್ಲಿಯೇ ಪರಿಹಾರ ಒದಗಿಸಬೇಕು. ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಹೊಣೆಯನ್ನು ಆಯಾ ಜಿಲ್ಲಾಧಿಕಾರಿಗಳು ವಹಿಸಬೇಕು’ ಎಂದು ಮುಖ್ಯಮಂತ್ರಿ ಸೂಚಿಸಿದರು.

ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಅರ್ಜಿ ಸ್ವೀಕರಿಸಿ ಆಯುಷ್ಮಾನ್ ಭಾರತ, ಆರ್‌ಟಿಸಿ, ಸಂಧ್ಯಾ ಸುರಕ್ಷಾ ಕಾರ್ಡ್‌, ರಹವಾಸಿ ಪ್ರಮಾಣಪತ್ರ ಮುಂತಾದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ತಕ್ಷಣವೇ ಪ್ರಮಾಣಪತ್ರ ವಿತರಿಸಲು ವ್ಯವಸ್ಥೆ ಮಾಡಿಕೊಂಡಿದ್ದ ಇ–ಆಡಳಿತ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ಮುಖ್ಯಮಂತ್ರಿ ಶ್ಲಾಘಿಸಿದರು.

ಯಾವ ಸೇವೆಗಳು ಲಭ್ಯ:

ಮನೆ, ಹೊಲದ ಹಕ್ಕುಪತ್ರ, ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ–ಹೀಗೆ ಹಲವು ಸೇವೆಗಳನ್ನು ‘ಗ್ರಾಮ ಒನ್’ ಯೋಜನೆಯ ಮೂಲಕ ಜನರು ಪಡೆದುಕೊಳ್ಳಬಹುದು. ಸೇವಾ ಸಿಂಧು ಕಾರ್ಯಕ್ರಮದ
ಎಲ್ಲಾ 750 ಕ್ಕೂ ಹೆಚ್ಚು ಸೇವೆಗಳು, ಸಕಾಲ ಸೇವೆಗಳು, ಸಿಎಂಆರ್‌ಎಫ್‌ ಸೇವೆಗಳು,
ಮೈಕ್ರೊ ಬ್ಯಾಂಕಿಂಗ್‌ ಸೇವೆಗಳು, ಆಧಾರ್‌ ತಿದ್ದುಪಡಿ.

ಯಾವ ಜಿಲ್ಲೆಗಳಲ್ಲಿ ಆರಂಭ

ಬೀದರ್‌, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ, ಕೊಡಗು

* 3,026 ಗ್ರಾಮ ಒನ್‌ ಸೇವಾ ಕೇಂದ್ರಗಳು

*ಈ ಕೇಂದ್ರಗಳು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸುತ್ತವೆ.

***

ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ಸುಲಭವಾಗಿ ಲಭ್ಯವಾಗಿಸಿ ಗ್ರಾಮೀಣ ಜನರ ಜೀವನ ಗುಣಮಟ್ಟ ಉನ್ನತೀಕರಿಸಲು ಗ್ರಾಮ ಒನ್ ಯೋಜನೆ ಸಹಕಾರಿ ಆಗಲಿದೆ 

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು