ಶುಕ್ರವಾರ, ಜೂನ್ 18, 2021
20 °C
ಬಳ್ಳಾರಿ ನಾಲಾ ಪ್ರವಾಹದಿಂದ ಹಾನಿ

ಕೊಳೆಯುತ್ತಿದೆ ’ಬೆಳಗಾವಿ ಬಾಸುಮತಿ’ ಬೆಳೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ತಾಲ್ಲೂಕಿನ ವಿಶೇಷವೆಂದೇ ಹೆಸರು ಗಳಿಸಿರುವ ಹಾಗೂ ಪ್ರಸ್ತುತ ಸಾವಿರಾರು ಎಕರೆಯಲ್ಲಿ ಬೆಳೆದಿರುವ ‘ಬೆಳಗಾವಿ ಬಾಸುಮತಿ’ ತಳಿಯ ಭತ್ತದ ಗದ್ದೆಗಳು ನಿರಂತರ ಮಳೆ ಮತ್ತು ಬಳ್ಳಾರಿ ನಾಲಾ ಪ್ರವಾಹದಿಂದಾಗಿ ಮುಳುಗಡೆಯಾಗಿದೆ.

ಹೋದ ವರ್ಷವೂ ಈ ಬೆಳೆ ನಾಶವಾಗಿತ್ತು. ಈ ಹಂಗಾಮಿನಲ್ಲೂ ಬೆಳೆಗಾರರಿಗೆ ನಷ್ಟದ ಭೀತಿ ಎದುರಾಗಿದೆ. ಎರಡು ವಾರಗಳಿಂದಲೂ ಜಲಾವೃತ ಆ‌ಗಿರುವುದರಿಂದ ವಿಶಿಷ್ಟ ಸುವಾಸನೆಯಿಂದ ಗಮನಸೆಳೆಯುತ್ತಿದ್ದ ಬೆಳೆಗಳು ಕೊಳೆಯುವ ಹಂತ ತಲುಪಿವೆ. ಸದ್ಯಕ್ಕೆ ನೀರಿನ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇಲ್ಲದಿರುವುದು ರೈತರನ್ನು ಚಿಂತೆಗೆ ದೂಡಿವೆ. ಅಲ್ಲದೇ, ಮಳೆ ಹೆಚ್ಚುತ್ತಿರುವುದರಿಂದಾಗಿ ಮತ್ತಷ್ಟು ಗದ್ದೆಗಳಿಗೆ ನೀರು ವ್ಯಾಪಿಸುವ ಆತಂಕವೂ ಎದುರಾಗಿದೆ.

ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯ ಪ್ರದೇಶ, ಬಳ್ಳಾರಿ ನಾಲಾ ಸುತ್ತಲಿನ ಯಳ್ಳೂರು, ಧಾಮಣೆ, ಹಲಗಾ, ಉಚಗಾವಿ, ಅಲಾರವಾಡ, ಸುಳಗಾ, ದೇಸೂರು, ಸಾಂಬ್ರಾ, ಬಸವನಕುಡಚಿ, ಮುಚ್ಚಂಡಿ, ಅಷ್ಟೆ, ಚಂದಗಡ, ಮುತಗಾ, ಸಾಂಬ್ರಾ, ಮೋದಗಾ, ಸುಳೇಭಾವಿ ಮೊದಲಾದ ಕಡೆಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಈ ತಳಿಯ ಭತ್ತ ಬೆಳೆಯಲಾಗುತ್ತದೆ. ತಾಲ್ಲೂಕಿನಾದ್ಯಂತ 25ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಭತ್ತ ಹಾಕಲಾಗಿದೆ. ಇದರಲ್ಲಿ ಬಳ್ಳಾರಿ ನಾಲಾ ಹಾಗೂ ಮಾರ್ಕಂಡೇಯ ನದಿ ಪ್ರವಾಹದಿಂದ ಸಾವಿರಾರು ಎಕರೆ ಭತ್ತದ ಗದ್ದೆಗಳು ಮುಳುಗಿವೆ. ಈ ಪೈಕಿ ಬೆಳಗಾವಿ ಬಾಸುಮತಿ ಬೆಳೆ 2,600ಸಾವಿರ ಹೆಕ್ಟೇರ್‌ಗೂ ಜಾಸ್ತಿ ಇದೆ ಎಂದು ಅಂದಾಜಿಸಲಾಗಿದೆ.

ಈ ಭಾಗದೊಂದಿಗೆ ಗೋವಾ, ಮಹಾರಾಷ್ಟ್ರದಲ್ಲೂ ಬೆಳಗಾವಿ ಬಾಸುಮತಿ ಅಕ್ಕಿ ಹೆಸರುವಾಸಿಯಾಗಿದೆ.

‘ಕಳೆದ ವರ್ಷವೂ ನೆರೆಯಿಂದ ಅಪಾರ ಹಾನಿ ಅನುಭವಿಸಿದ್ದೆವು. ಈ ಬಾರಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೆವು. ಆದರೆ, ಅತಿವೃಷ್ಟಿ ಹಾಗೂ ಪ್ರವಾಹದಿಂದ ಬೆಳೆಗಳು ಸಂಪೂರ್ಣ ಮುಳುಗಿವೆ. ಹಲವು ದಿನಗಳಿಂದಲೂ ಭತ್ತದ ಗದ್ದೆಗಳಲ್ಲಿರುವ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ‍ಪರಿಣಾಮ ಬೆಳೆಯು ಕೊಳೆಯುವ ಹಂತ ತಲುಪಿದೆ’ ಎಂದು ಸಾಂಬ್ರಾದ ರೈತ ದಿಲೀಪ ಪಾಟೀಲ ಅಳಲು ತೋಡಿಕೊಂಡರು.

‘ಕೃಷಿ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ನಡೆಸಿ ‍ರೈತರಿಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು