ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅರ್ಥಿಕ ಪ್ರಗತಿಗೆ ದೂರ ದೃಷ್ಟಿಯ ಬಜೆಟ್‌: ಸಿ.ಟಿ. ರವಿ

Last Updated 1 ಫೆಬ್ರುವರಿ 2022, 13:40 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ ಭಾರತದ ಅಭಿವೃದ್ಧಿಗೆ ಪೂರಕವಾಗಿದ್ದು ಜನ ಸಾಮಾನ್ಯರಿಗೆ, ರೈತರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಆಶಾದಾಯಕವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಅಭಿವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನ ಮಾಡಿರುವುದು ದೂರ ದೃಷ್ಟಿಯ ಬಜೆಟ್‌ಗೆ ಹಿಡಿದ ಕೈಗನ್ನಡಿಯಂತಿದೆ. 60 ಲಕ್ಷ ಉದ್ಯೋಗಗಳ ಸೃಷ್ಟಿಸುವ ಜೊತೆಗೆ ಆರ್ಥಿಕತೆಯನ್ನು ಉನ್ನತಿಗೆ ಕೊಂಡೊಯ್ಯವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿರುವುದು ದೇಶದ ಅಭಿವೃದ್ಧಿಯ ದಿಕ್ಸೂಚಿಯಂತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿರುವುದಕ್ಕೆ ‘ವನ್ ಕ್ಲಾಸ್ ವನ್ ಟಿವಿ’ ಆರಂಭಿಸಿರುವುದು ಶಾಘನೀಯ. ಪ್ರಧಾನಿ ‘ಇ-ವಿದ್ಯಾ’ ಯೋಜನೆ ಅಡಿಯಲ್ಲಿ 200 ಚಾನೆಲ್ಗಳು ಅಸ್ತಿತ್ವಕ್ಕೆ ಬರಲಿದ್ದು ಶಿಕ್ಷಣಕ್ಕೆ ಪೂರಕವಾದ ಯೋಜನೆ ಆಗಿದೆ. ‘ಕೆನ್ ಬೆಟ್ವಾ’ ಯೋಜನೆಯ ಅನುಷ್ಠಾನದ ಮೂಲದ ಅಂದಾಜು ವೆಚ್ಚ ₹44,605 ಕೋಟಿಯಲ್ಲಿ 9 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಪ್ರಯೋಜನಗಳು, 62 ಲಕ್ಷ ಜನರಿಗೆ ಕುಡಿಯುವ ನೀರು, 103 ಮೆಗಾವಾಟ್ ಜಲವಿದ್ಯುತ್, 27 ಮೆಗಾವಾಟ್‌ ಸೌರ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದ್ದು, ಭಾರತವು ವಿದ್ಯುತ್‌ ಉತ್ಪಾದನೆಯ ಸ್ವಾವಲಂಬಿಯಾಗಲು ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ.

ಕಾವೇರಿ–ಪೆನ್ನಾರ್ ಸೇರಿ ದೇಶದ 5 ನದಿಗಳ ಜೋಡಣೆಗೆ ಅನುಮೋದನೆ ನೀಡಿರುವುದು ಕರ್ನಾಟದ ಅಭಿವೃದ್ಧಿಗೆ ದೊಡ್ಡ ಕೊಡುಗೆ ಎಂದರೆ ತಪ್ಪಲ್ಲ. ಗೋದಾವರಿ–ಕೃಷ್ಣ, ಕೃಷ್ಣಾ–ಪೆನ್ನಾರ್, ನರ್ಮದಾ–ಗೋದಾವರಿ ನದಿಗಳ ಜೋಡಣೆಗೆ ಒಪ್ಪಿಗೆ ನೀಡಿರುವುದು ಸಮಗ್ರ ಅಭಿವೃದ್ಧಿಗೆ ಉತ್ತಮವಾದ ಯೋಜನೆಯಾಗಿದೆ. ಇದಕ್ಕಾಗಿ ಈ ಬಜೆಟ್‌ನಲ್ಲಿ 44ಸಾವಿರ ಕೋಟಿ ಹಣ ಮೀಸಲಿಡಲಾಗಿದ್ದು, ಇದು ರೈತರ ಪಾಲಿಗೆ ಆಶಾದಾಯಕವಾದ ಯೋಜನೆ ಎಂದು ರವಿ ಹೇಳಿದ್ದಾರೆ.

2022-23ನೇ ಸಾಲಿನಲ್ಲಿ ಗ್ರಾಮೀಣ ಮತ್ತುನಗರ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲು ರೂ 48,000 ಕೋಟಿ ಮಂಜೂರು ಮಾಡಿರುವುದು ಅದ್ಭುತವಾದ ಯೋಜನೆಯಾಗಿದೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸಲು ದೇಶಾದ್ಯಂತ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿರುವುದು ಶ್ಲಾಘನಾರ್ಹ ಎಂದು ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಿಜಿಟಲ್ ಬ್ಯಾಂಕಿಂಗ್ ತನ್ನ ಪ್ರಯೋಜನಗಳನ್ನು ಗ್ರಾಹಕ ಸ್ನೇಹಿಯಾಗಿ ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲಿದ್ದು ಆರ್ಥಿಕಾಭಿವೃದ್ಧಿಗೆ ಪೂರಕವಾಗಲಿವೆ. 400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸುತ್ತಿರುವುದು ಸಾರ್ವಜನಿಕರ ಒಳಿತಿಗಾಗಿ ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮವಾಗಿದೆ. ಪ್ರಸಕ್ತ ಸಾಲಿನಲ್ಲಿ ದೇಶದ ಆರ್ಥಿಕ ಬೆಳವಣಿಗೆ ಅಂದಾಜು ಶೇ.9.2ರಷ್ಟಿರುವುದು ದೇಶದ ಪ್ರಗತಿಯ ಸಂಕೇತ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT