ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರೆ: ‘ಕುಶ’ ಬಂಧಮುಕ್ತಕ್ಕೆ ಸಚಿವರ ಆದೇಶ

ಸಂಗಾತಿ ಸೇರುವ ಉತ್ಸಾಹದಲ್ಲಿ ‘ಕುಶ’ ಆನೆ
Last Updated 28 ಏಪ್ರಿಲ್ 2021, 13:10 IST
ಅಕ್ಷರ ಗಾತ್ರ

ಕುಶಾಲನಗರ (ಕೊಡಗು ಜಿಲ್ಲೆ): ದುಬಾರೆ ಶಿಬಿರದ ಕ್ರಾಲ್‌ನಲ್ಲಿ ಬಂಧಿಸಿದ್ದ ‘ಕುಶ’ ಆನೆಯನ್ನು ಮತ್ತೆ ಕಾಡಿಗೇ ಬಿಡುವಂತೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆದೇಶಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ, ಹಿರಿಯ ಅರಣ್ಯಾಧಿಕಾರಿಗಳ ಸಭೆ ನಡೆಸಿದ ಸಚಿವರು ಈ ಸೂಚನೆ ನೀಡಿದ್ದಾರೆ.

ದುಬಾರೆ ಸಾಕಾನೆ ಶಿಬಿರದಿಂದ ಕಾಡಿಗೆ ತೆರಳಿದ್ದ ‘ಕುಶ’ ಆನೆಯನ್ನು ಸೆರೆ ಹಿಡಿದು ಕ್ರಾಲ್‌ನಲ್ಲಿ ಬಂಧಿಸಿ, ಚಿತ್ರ ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿ ಪ್ರಿಯರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಸಂಸದೆಯೂ ಆದ ಪರಿಸರವಾದಿ ಮನೇಕಾ ಗಾಂಧಿ ಅವರೂ ‘ಕುಶ’ನ ಬಿಡುಗಡೆಗೆ ಒತ್ತಾಯಿಸಿದ್ದರು. ಪೀಪಲ್ಸ್ ಫಾರ್ ಅನಿಮಲ್ ಸಂಸ್ಥೆಯ ಮುಖಸ್ಥರಾದ ಸವಿತಾ ನಾಗಭೂಷಣ್, ಪಶು ವೈದ್ಯ ಅಮರ್ ದೀಪ್ ಸಿಂಗ್ ನೇತೃತ್ವದ ತಂಡವು ಈಚೆಗೆ ದುಬಾರೆಗೆ ಭೇಟಿ ನೀಡಿ ಆನೆಯ ಸ್ಥಿತಿಗತಿ ಪರಿಶೀಲನೆ ನಡೆಸಿ ಹೋಗಿತ್ತು.

ಪ್ರಾಣಿ ಪ್ರಿಯರ ಆಕ್ರೋಶ ಹೆಚ್ಚಾದ ಬೆನ್ನಲೇ ಸಚಿವರು ಸಭೆ ನಡೆಸಿ ‘ಕುಶ’ನನ್ನು ಬಂಧಮುಕ್ತಗೊಳಿಸಲು ಸೂಚಿಸಿದ್ದಾರೆ. ಆನೆಗೆ ಹಿಂಸೆ ನೀಡಿಲ್ಲ‌. ಅದು ಆರೋಗ್ಯವಾಗಿದೆ. ಅದರ ವರ್ತನೆಯಲ್ಲಿ ಬದಲಾವಣೆಯಾಗಿದ್ದ ಕಾರಣಕ್ಕೆ ಕ್ರಾಲ್‌ನಲ್ಲಿ ಹಾಕಿ ಪಳಗಿಸಲಾಗುತ್ತಿತ್ತು ಎಂದು ಸಭೆಯಲ್ಲಿ ಅರಣ್ಯಾಧಿಕಾರಿಗಳು ಹೇಳಿದರು.

ಕೊನೆಗೆ ಸಚಿವರು, ‘ಕುಶ’ನಿಗೆ ರೇಡಿಯೊ ಕಾಲರ್ ಅಳವಡಿಸಿ ಬಿಡುಗಡೆ ಮಾಡಬೇಕು. ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ದುಬಾರೆ ಸಮೀಪದಲ್ಲಿ ಆನೆ ತಜ್ಞೆ ಪ್ರಜ್ಞಾ ಚೌಟ ಎಂಬುವರು ಆನೆಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡು ಪೋಷಿಸುತ್ತಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು, ಸಚಿವರ ಗಮನಕ್ಕೆ ತಂದರು. ಅವರ ಸುಪರ್ದಿಯಲ್ಲಿರುವ ಆನೆಗಳನ್ನು ಇಲಾಖೆಯ ವಶಕ್ಕೆ ಪಡೆಯುವ ಕುರಿತೂ ಚರ್ಚೆ ನಡೆಯಿತು.

ವರ್ಷದ ಹಿಂದೆ ಮದವೇರಿದ ‘ಕುಶ’ ಆನೆ ದುಬಾರೆ ಸಾಕಾನೆ ಶಿಬಿರದಿಂದ ತಪ್ಪಿಸಿಕೊಂಡು ಕಾಡು ಸೇರಿತ್ತು. ಆಗ, ಸಂಗಾತಿ ಆನೆ (ಹೆಣ್ಣು ಆನೆ ಪರಿಚಯ) ಜೊತೆ ಸೇರಿ ಕಾಡಾನೆಗಳ ಗುಂಪು ಸೇರಿತು. ದುಬಾರೆ ಸಾಕಾನೆಗಳು ಮದವೇರಿದ ವೇಳೆ ಕಾಡಿಗೆ ಹೋಗಿ ಹೆಣ್ಣಾನೆ ಸಂಗ ಮಾಡಿ ವಾಪಾಸ್ಸಾಗುತ್ತಿದ್ದವು. ಆದರೆ, ಕಾಡಿಗೆ ಹೋಗಿದ್ದ ‘ಕುಶ’ ಮಾತ್ರ ಶಿಬಿರದ ಕಡೆಗೆ ತಿರುಗಿಯೂ ನೋಡಿರಲಿಲ್ಲ. ಆನೆಯು ಶಿಬಿರಕ್ಕೆ ಮರಳಿ ಬರುತ್ತದೆ ಎಂಬ ಅರಣ್ಯ ಅಧಿಕಾರಿಗಳ ನಿರೀಕ್ಷೆ ಫಲ ನೀಡಿರಲಿಲ್ಲ. ಕುಶ ಸಂಗಾತಿಯೊಂದಿಗೆ ಕಾಡಾನೆಗಳ ಗುಂಪು ಸೇರಿಕೊಂಡು ಸಂತೋಷವಾಗಿತ್ತು. ಮೀನುಕೊಲ್ಲಿ ಅರಣ್ಯ ಪ್ರದೇಶದಲ್ಲಿ ಮಾವುತರ ಕಣ್ಣಿಗೆ ಬಿದ್ದ ‘ಕುಶ’ನನ್ನು ಮಾರ್ಚ್ ಅಂತ್ಯದಲ್ಲಿ ಸೆರೆ ಹಿಡಿದು ಶಿಬಿರದ ಕ್ರಾಲ್‌ನಲ್ಲಿ ಬಂಧಿಸಲಾಗಿತ್ತು. ಸಂಗಾತಿಯಿಂದ ದೂರವಾದ ವೇದನೆ ಸಹ ಅನುಭವಿಸುತ್ತಿತ್ತು. ಅದರ ಕಾಲಿಗೆ ಸರಪಳಿ ಹಾಕಿದ್ದರಿಂದ ಗಾಯವಾಗಿತ್ತು.

ಸಭೆಯಲ್ಲಿ ಅರಣ್ಯ ಪಡೆ ಮುಖ್ಯಸ್ಥ ಸಂಜಯ್ ಮೋಹನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ವಿಜಯಕುಮಾರ್ ಗೋಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT