ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಮಾಜಿ ಸಚಿವ ಆರ್‌. ಎಲ್‌ ಜಾಲಪ್ಪ ವಿಧಿವಶ

Last Updated 17 ಡಿಸೆಂಬರ್ 2021, 15:08 IST
ಅಕ್ಷರ ಗಾತ್ರ

ಕೋಲಾರ: ನಗರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ (97) ಅವರು ಶುಕ್ರವಾರ ಕೊನೆಯುಸಿರೆಳೆದರು.

ವಯೋಸಹಜ ಆರೋಗ್ಯ ಸಮಸ್ಯೆಯ ಜತೆಗೆ ಮೂತ್ರಪಿಂಡ ವೈಫಲ್ಯ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.9ರಂದು ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ದಿನದಿಂದ ದಿನಕ್ಕೆ ಅವರ ದೇಹಸ್ಥಿತಿ ಗಂಭೀರವಾಗಿ ರಾತ್ರಿ 7.30ಕ್ಕೆ ನಿಧನರಾದರು.

ಫೆಬ್ರುವರಿ ತಿಂಗಳಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದ ಜಾಲಪ್ಪ ಅವರಿಗೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ ಅವರಿಗೆ 2 ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ನಂತರ ಚೇತರಿಸಿಕೊಂಡಿದ್ದರು. ಹಿಂದಿನ ವರ್ಷ ಕೋವಿಡ್‌ 2ನೇ ಅಲೆಯಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಬೆಂಗಳೂರು ಉತ್ತರ ತಾಲ್ಲೂಕಿನ ರಾಜಾನುಕುಂಟೆ ಗ್ರಾಮದ ಲಕ್ಷ್ಮೀನಾರಾಯಣಪ್ಪ ಮತ್ತು ನರಸಮ್ಮ ದಂಪತಿಯ ಮಗನಾಗಿ 1925ರ ಅ.19ರಂದು ಜನಿಸಿದ ಜಾಲಪ್ಪ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹಳ್ಳಿಯಲ್ಲೇ ಮುಗಿಸಿದರು. ಬಳಿಕ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪೂರೈಸಿದರು. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಮಹಾರಾಜ ಕಾಲೇಜಿನಲ್ಲಿ ಇವರ ಒಡನಾಡಿಯಾಗಿದ್ದರು.

ಜಾಲಪ್ಪ ಅವರಿಗೆ ಆಂಜಿನಮ್ಮ ಮತ್ತು ವಿಜಯಲಕ್ಷ್ಮೀ ಪತ್ನಿಯರು. ಅವರಿಗೆ ಜೆ.ನರಸಿಂಹಸ್ವಾಮಿ, ಜೆ.ನಾಗೇಂದ್ರಸ್ವಾಮಿ, ಜೆ.ರಾಜೇಂದ್ರ ಎಂಬ ಮೂವರು ಪುತ್ರರು ಹಾಗೂ ಪಾರ್ವತಮ್ಮ, ಉಮಾದೇವಿ, ಲಕ್ಷ್ಮೀ, ಸರಸ್ವತಿ ಎಂಬ ಪುತ್ರಿಯರು ಇದ್ದಾರೆ. ಜಾಲಪ್ಪರ ಹಿರಿಯ ಪುತ್ರ ನರಸಿಂಹಸ್ವಾಮಿ ಅವರು ದೊಡ್ಡಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕರು.

‘ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯಲ್ಲಿ ಮೃತರ ಪಾರ್ಥಿವ ಶರೀರವನ್ನು ಶನಿವಾರ (ಡಿ.18) ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ದೊಡ್ಡಬಳ್ಳಾಪುರದ ಆರ್‌.ಎಲ್‌.ಜಾಲಪ್ಪ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಂಜೆ 4.20ಕ್ಕೆ ಅಂತ್ಯಕ್ರಿಯೆ ನಡೆಸಲಾಗುತ್ತದೆ’ ಎಂದು ನರಸಿಂಹಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT