ಆರ್‌ಎಸ್‌ಎಸ್, ಬಿಜೆಪಿಯಿಂದ ದೇಶ ಮುಕ್ತಗೊಳಿಸಿ: ಸಿಐಟಿಯು ಅಖಿಲ ಭಾರತ ಸಮ್ಮೇಳನ

ಬೆಂಗಳೂರು: ಜನಪರವಾದ ನೀತಿಗಳು ರಚನೆಯಾಗಲು ದುಡಿಯುವ ವರ್ಗವೆಲ್ಲ ಒಗ್ಗಟ್ಟಾಗಿ ಹೋರಾಡಬೇಕು ಮತ್ತು ದೇಶವನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿಯಿಂದ ಮುಕ್ತಗೊಳಿಸಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್‌ನ (ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನದಲ್ಲಿ ಮುಖಂಡರು ಕರೆ ನೀಡಿದರು.
ನಗರದ ಅರಮನೆ ಮೈದಾನದಲ್ಲಿ ಬುಧವಾರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖಂಡರು, ‘ವಿಭಜನಕಾರಿ ನೀತಿ ಗಳಿಂದ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಹಾಗೂ ದೇಶಕ್ಕೆ ಮಾರಕ ವಾಗಿರುವ ಕೇಂದ್ರ ಸರ್ಕಾರವನ್ನು ರೈತ–ಕಾರ್ಮಿಕ ಚಳವಳಿಗಳಿಂದ ಕಿತ್ತು ಹಾಕಬೇಕು’ ಎಂದರು.
ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಕೆ. ಸುಬ್ಬರಾವ್ ಮಾತನಾಡಿ, ‘ದೇಶ ಇಂದು ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಂಘರ್ಷ ವನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಸಮಾಜ ದಲ್ಲಿ ಅಸಮಾನತೆ ಉಂಟು ಮಾಡುತ್ತಿವೆ. ಮೂಲಭೂತವಾದಿಗಳು ದುಡಿಯುವ ವರ್ಗವನ್ನು ವಿಭಜಿಸುತ್ತಿವೆ’ ಎಂದು ಹೇಳಿದರು.
ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಮಾತನಾಡಿ, ‘ಪ‍್ರಜಾಸತ್ತಾತ್ಮಕ ಹಕ್ಕು ಮತ್ತು ಸಾಮಾಜಿಕ ಸಾಮರಸ್ಯವನ್ನು ಸಾಧಿಸಲು ಮಾರಕವಾಗಿರುವ ನೀತಿಗಳ ವಿರುದ್ಧ ದೇಶದಾದ್ಯಂತ ಎಲ್ಲರೂ ಒಂದು ಗೂಡಿ ಹೋರಾಡಬೇಕಿದೆ’ ಎಂದರು.
ಸಿಐಟಿಯು ಮುಖಂಡರಾದ ಕೆ.ಹೇಮಲತಾ ಮಾತನಾಡಿ, ‘ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ಈ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಎಲ್ಲ ಅಂಶಗಳನ್ನು ಒಟ್ಟುಗೂಡಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಮಾಡಲಾಗುತ್ತದೆ’ ಎಂದರು.
‘ದುಡಿಯುವ ವರ್ಗಕ್ಕೆ ಮಾರಕ ವಾಗಿರುವ ನೀತಿಗಳನ್ನು ಜಾರಿಗೆ ತಂದಿರುವ ಈ ಕೇಂದ್ರ ಸರ್ಕಾರ ತೊಲಗಬೇಕು. ನಮ್ಮ ದೇಶವನ್ನು ರಕ್ಷಿಸಬೇಕಾದರೆ, ದೇಶವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಕ್ತವಾಗಿಸಬೇಕು’ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ಹೇಳಿದರು.
ಕೋಲಾರದಿಂದ ಹುತಾತ್ಮರ ಜ್ಯೋತಿ
ಕೋಲಾರ ಚಿನ್ನದ ಗಣಿಯ ಹುತಾತ್ಮಕರ ಸ್ಮರಣಾರ್ಥ ಕೋಲಾರವೆಲ್ಲ ಸುತ್ತಿ ಸಮ್ಮೇಳನಕ್ಕೆ ಬಂದ ‘ಕೆಜಿಎಫ್ ಹುತಾತ್ಮರ ಜ್ಯೋತಿಗೆ’ ಸಿಐಟಿಯು ಮುಖಂಡರಾದ ಕೆ. ಹೇಮಲತಾ ಗೌರವ ಸಲ್ಲಿಸಿದರು. ಸಿಐಟಿಯು ಧ್ವಜಾರೋಹಣ ಮಾಡಿದ ಹೇಮಲತಾ ಅವರಿಗೆ ‘ಕೆಂಪು ಸ್ವಯಂಸೇವಕರು’ ಗೌರವವಂದನೆ ನೀಡಿದರು. 25 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ 1,500 ಪ್ರತಿನಿಧಿಗಳು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.