ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲರ್ಕ್‌ ಹುದ್ದೆಯಿಂದ ಮಂತ್ರಿ ಸ್ಥಾನಕ್ಕೇರಿದ್ದ ಜಿ. ರಾಮಕೃಷ್ಣ

ಹೋರಾಟದ ನೆರಳಲ್ಲೇ ಬದುಕಿ, ಬೆಳೆದ ನಾಯಕ ಜಿ.ರಾಮಕೃಷ್ಣ
Last Updated 10 ಆಗಸ್ಟ್ 2020, 5:09 IST
ಅಕ್ಷರ ಗಾತ್ರ

ಕಲಬುರ್ಗಿ: ಕೆಇಬಿ ಕಚೇರಿಯಲ್ಲಿ ಕ್ಲರ್ಕ್‌ ಕೆಲಸದಿಂದ ಆರಂಭಿಸಿ, ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನದವರೆಗೆ ಬೆಳೆದ ಜಿ.ರಾಮಕೃಷ್ಣ ಅವರ ಬದುಕೇ ಒಂದು ಹೋರಾಟದ ಹಾದಿ. ಆಗಿನ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಮುಂಚೂಣಿ ನಾಯಕರಲ್ಲಿ ಗುರುತಿಸಿಕೊಂಡ ಅವರು, ಈಗ ಬದುಕಿನ ಪಯಣ ಮುಗಿಸಿದ್ದಾರೆ.

1936ರ ನವೆಂಬರ್‌ 10ರಂದು ಜನಿಸಿದ ಜಿ.ರಾಮಕೃಷ್ಣ ಅವರು, ಬಹುಕಾಲ ಇಲ್ಲಿನ ಪ್ರಶಾಂತನಗರದ ತಮ್ಮ ಮನೆಯಲ್ಲೇ ಜೀವನ ಕಳೆದಿದ್ದಾರೆ. ಬಿ.ಎ, ಎಲ್‌ಎಲ್‌ಬಿ ಪಾಸಾಗಿದ್ದರೂ ವಕೀಲಿ ವೃತ್ತಿಯತ್ತ ಹೊರಳಲಿಲ್ಲ. ಬಡ ಕುಟುಂಬದಲ್ಲಿ ಜನಿಸಿದ ಅವರು ಬೆಳೆದು ಬಂದಿದ್ದು, ರಾಜಕೀಯವಾಗಿ ದೊಡ್ಡ ಸ್ಥಾನ ಪಡೆದಿದ್ದು, ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದು ಎಲ್ಲವೂ ಹೋರಾಟದ ಹೆಜ್ಜೆಗಳೇ ಆಗಿವೆ. ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಅವರಲ್ಲಿ ಹೋರಾಟದ ಮನೋಭಾವ ಬೆಳೆದಿತ್ತು. ಇದನ್ನು ಗಮನಿಸಿದ, ವೀರೇಂದ್ರ ಪಾಟೀಲ ಅವರು ಇವರನ್ನು ರಾಜಕೀಯ ಕಣಕ್ಕೆ ಕರೆತಂದರು.

ರಾಜಕೀಯದ ಮೆಟ್ಟಿಲುಗಳು: ಉತ್ತಮ ಶಿಕ್ಷಣ, ಗಟ್ಟಿ ಧ್ವನಿ, ಎತ್ತರದ ನಿಲುವು ಹೊಂದಿದ್ದ ರಾಮಕೃಷ್ಣ ಅವರು ನಿರೀಕ್ಷೆಗಿಂತ ವೇಗವಾಗಿ ರಾಜ ಕೀಯದಲ್ಲಿ ಪಳಗಿದರು. ಆರಂಭದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು ಜನರ ವಿಶ್ವಾಸ ಗಳಿಸಿದರು. ಬಳಿಕ ಕೆಲ ವರ್ಷ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು.

1982ರಲ್ಲಿ ಗುಲಬರ್ಗಾ ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆ ಆಗುವ ಮೂಲಕ ಆಡಳಿತ ಚುಕ್ಕಾಣಿ ಹಿಡಿದರು. ಅವರ ರಾಜಕೀಯ ಪ್ರಭಾವಳಿ ಮತ್ತು ಜನಬೆಂಬಲ ಕಂಡು 1985ರಲ್ಲಿ ಕಾಂಗ್ರೆಸ್‌ ಪಕ್ಷವು ವಿಧಾನಸಭೆಗೆ ಟಿಕೆಟ್‌ ನೀಡಿತು. ಆಗಿನ ಕಮಲಾಪುರ ಮೀಸಲು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆ ಆದರು. ನಂತರ 1989ರಲ್ಲಿ ನಡೆದ ಚುನಾವಣೆಯಲ್ಲಿಯೂ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆಗ ಮುಖ್ಯಂತ್ರಿ ಆಗಿದ್ದ ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ, 1992ರಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದರು.

ನಂತರ ಬಂದ ನಾಲ್ಕು ಚುನಾವಣೆಗಳಲ್ಲಿಯೂ ಅವರಿಗೆ ಗೆಲುವು ಒಲಿಯಲಿಲ್ಲ. 2013ರಲ್ಲಿ ಕಲಬುರ್ಗಿ ಗ್ರಾಮೀಣ ಮೀಸಲು ಕ್ಷೇತ್ರದಿಂದ ಮತ್ತೆ ಆಯ್ಕೆಯಾದರು. ಎರಡು ದಶಕಗಳ ಸೋಲಿನ ನಂತರ ಅವರಿಗೆ ಈ ಗೆಲವು ಒಲಿದುಬಂದಿತು. 2018ರವರೆಗೂ ಅವರು ಶಾಸಕರಾಗಿ ಜನಸೇವೆ ಮಾಡಿದರು.‌‌ ನಂತರ ಆರೋಗ್ಯದಲ್ಲಿ ಏರುಪೇರಾದ ಕಾರಣ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.

ಶೈಕ್ಷಣಿಕ ಸೇವೆ: 1992ರಲ್ಲಿ ಕೀರ್ತಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರು. ಇದರಡಿ ಕೀರ್ತಿ ನರ್ಸಿಂಗ್‌ ಕಾಲೇಜು, ಜಿಎನ್‌ಎಂ ನರ್ಸಿಂಗ್‌ ಕೋರ್ಸ್‌, ಬಿಎಸ್‌ಸಿ ನರ್ಸಿಂಗ್‌ ಕೋರ್ಸ್‌, ಎಂಎಸ್‌ಸಿ ನರ್ಸಿಂಗ್‌, ಲ್ಯಾಬ್‌ ಟೆಕ್ನಾಲಜಿ ಸೇರಿದಂತೆ ವೃತ್ತಿಪರವಾದ ಹಲವಾರು ಕೋರ್ಸ್‌ಗಳನ್ನು ಈ ಭಾಗಕ್ಕೆ ತಂದರು.‌ ಮುಂದೆ 2005ರಲ್ಲಿ ಕೀರ್ತಿ ಬಿ.ಇಡಿ ಕಾಲೇಜು, ಕೀರ್ತಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಪದವಿ ಕಾಲೇಜು, ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನೂ ತೆರೆದರು.‌

ಹಿಂದುಳಿದ ಜನರ ಏಳ್ಗೆಗಾಗಿ ಆದಿ ಜಾಂಬವ ಕಲ್ಯಾಣ ಸಂಘ ಸ್ಥಾಪನೆ ಮಾಡಿದ್ದು ಕೂಡ ಅವರ ಸಾಧನೆ. ಕಲಬುರ್ಗಿ ತಾಲ್ಲೂಕಿನ ನಂದಿಕೂರಿನಲ್ಲಿ ಸೋಮವಾ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT