ಮಂಗಳವಾರ, ಅಕ್ಟೋಬರ್ 26, 2021
20 °C
4 ಲಕ್ಷ ಕಾರ್ಮಿಕರಿಗೆ ಸಿಗದ ಸೌಲಭ್ಯ * ಕೋರ್ಟ್ ಆದೇಶಕ್ಕೂ ಬಗ್ಗದ ಸರ್ಕಾರ

ಗಾರ್ಮೆಂಟ್ಸ್‌: ತುಟ್ಟಿಭತ್ಯೆಗೂ ಕುತ್ತು

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನಿಷ್ಠ ವೇತನಕ್ಕೆ ದುಡಿಯುತ್ತಿರುವ ಗಾರ್ಮೆಂಟ್ಸ್‌ ಕಾರ್ಖಾನೆಗಳ ಕಾರ್ಮಿಕರಿಗೆ ಹೆಚ್ಚಳವಾಗಬೇಕಿದ್ದ ತುಟ್ಟಿಭತ್ಯೆಯನ್ನು ಕೋವಿಡ್ ನುಂಗಿ ಹಾಕಿದೆ. ಒಂದೂವರೆ ವರ್ಷದಿಂದ ಕಾಯುತ್ತಿರುವ ಕಾರ್ಮಿಕರಿಗೆ ತುಟ್ಟಿಭತ್ಯೆ ಹೆಚ್ಚಳ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.

2020–21ರ ಗ್ರಾಹಕ ಸೂಚ್ಯಂಕ ದರ (ಸಿಪಿಐ) ಪರಿಷ್ಕರಣೆ ಪ್ರಕಾರ, ಗಾರ್ಮೆಂಟ್ಸ್ ಕಾರ್ಖಾನೆ ಕಾರ್ಮಿಕರ ತುಟ್ಟಿಭತ್ಯೆ(ಡಿ.ಎ) 2020ರ ಏಪ್ರಿಲ್‌ನಿಂದಲೇ ದಿನಕ್ಕೆ ₹16.06ರಂತೆ ಏರಿಕೆಯಾಗಬೇಕಿತ್ತು. ಕೋವಿಡ್ ಲಾಕ್‌ಡೌನ್ ಕಾರಣ ನೀಡಿ ತುಟ್ಟಿಭತ್ಯೆ ಏರಿಕೆ ಮುಂದೂಡುವಂತೆ ಕಾರ್ಖಾನೆಗಳ ಮಾಲೀಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ, 2020ರ ಜುಲೈ 7ರಂದು ಆದೇಶ ಹೊರಡಿಸಿದ ಸರ್ಕಾರ, 2021ರ ಮಾ.31ರವರೆಗೆ ತುಟ್ಟಿಭತ್ಯೆ ಏರಿಕೆ ಮುಂದೂಡಿತ್ತು.

ಇದನ್ನು ಪ್ರಶ್ನಿಸಿ ಕಾರ್ಮಿಕ ಸಂಘಟನೆಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು. ರಿಟ್ ಅರ್ಜಿ ಪರಿಗಣಿಸಿದ ನ್ಯಾಯಾಲಯ, ಸರ್ಕಾರದ ಆದೇಶಕ್ಕೆ 2020ರ ಸೆ.11ರಂದು ತಡೆಯಾಜ್ಞೆ ನೀಡಿತು. ಆದೇಶ ವಾಪಸ್ ಪಡೆದು ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿತ್ತು.

‘ಆದರೂ, ಈವರೆಗೆ ಹೆಚ್ಚುವರಿ ತುಟ್ಟಿಭತ್ಯೆ ಪಾವತಿಯಾಗಿಲ್ಲ. ಈ ಭತ್ಯೆಯು ಕಾರ್ಮಿಕರ ಕನಿಷ್ಠ ವೇತನದ ಭಾಗವಾಗಿದ್ದು, ಅದನ್ನು ಪಾವತಿಸದಿರುವುದು ಕನಿಷ್ಠ ವೇತನ ಕಾಯ್ದೆಯ ಉಲ್ಲಂಘನೆ’ ಎಂದು ಗಾರ್ಮೆಂಟ್ಸ್‌ ಆ್ಯಂಡ್ ಟೆಕ್ಸ್‌ಟೈಲ್‌ ವರ್ಕರ್ಸ್ ಯೂನಿಯನ್ ಆರೋಪಿಸಿದೆ.

‘ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ಬರುವ ಬಹುತೇಕ ಕಾರ್ಮಿಕರು ಕನಿಷ್ಠ ವೇತನಕ್ಕಿಂತ ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. ಹೀಗಾಗಿ, ತುಟ್ಟಿಭತ್ಯೆ ಹೆಚ್ಚಳ ಆದೇಶ ಮುಂದೂಡಿ ಹೊರಡಿಸಿರುವ ಆದೇಶ ಅವರ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಆದರೆ, ಗಾರ್ಮೆಂಟ್ಸ್ ಉದ್ಯಮದ ಕಾರ್ಮಿಕರಿಗೆ ಕನಿಷ್ಠ ವೇತನವಷ್ಟೇ ಪಾವತಿಯಾಗುತ್ತಿದೆ. ತುಟ್ಟಿಭತ್ಯೆ ಮುಂದೂಡಿದ್ದರಿಂದ ಕಾರ್ಮಿಕರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಹೈಕೋರ್ಟ್‌ ಪದೇ ಪದೇ ಹೇಳುತ್ತಿದ್ದರೂ, ಸರ್ಕಾರ ಜಾಣಗುರುಡು ಪ್ರದರ್ಶಿಸುತ್ತಿದೆ’ ಎಂದು ಯೂನಿಯನ್‌ನ ಸಲಹೆಗಾರ ಕೆ.ಆರ್‌. ಜಯರಾಂ ಎಂದು ಹೇಳಿದರು.

‘ಕನಿಷ್ಠ ವೇತನದಲ್ಲಿ  ದಿನದೂಡುತ್ತಿರುವ ಗಾರ್ಮೆಂಟ್ಸ್ ಕಾರ್ಖಾನೆ ಕಾರ್ಮಿಕರಿಗೆ ತುಟ್ಟಿಭತ್ಯೆ ದೊಡ್ಡ ಮೊತ್ತವಾಗಿದೆ. ತಿಂಗಳಿಗೆ ₹417.56 ಸಿಗಲಿದ್ದು, ಅದರಂತೆ ಪ್ರತಿ ಕಾರ್ಮಿಕರಿಗೆ ₹7,098 ಹಿಂಬಾಕಿ ಉಳಿದಿದೆ. 4 ಲಕ್ಷ ಕಾರ್ಮಿಕರಿಗೆ ₹283 ಕೋಟಿಗೂ ಅಧಿಕ ಹಣವನ್ನು ಕಾರ್ಖಾನೆಗಳು ಉಳಿಸಿಕೊಂಡಿವೆ’ ಎಂದು ವಿವರಿಸಿದರು.

‘ಅದನ್ನು ವಾಪಸ್ ಕೊಡಿಸಬೇಕಾದ ಸರ್ಕಾರ ನ್ಯಾಯಾಲಯದ ಆದೇಶವನ್ನೂ ಪಾಲಿಸದೆ ಮೌನ ವಹಿಸಿದೆ. ತುಟ್ಟಿಭತ್ಯೆ ಮೊತ್ತ ಮುಂದೂಡಿದ್ದ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು. ಹಿಂಬಾಕಿ ಪಾವತಿಸಲು ಆದೇಶಿಸಬೇಕು’ ಎಂದು ಅವರು ಒತ್ತಾಯಿಸಿದರು.

***

ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನ

ಕಾರ್ಮಿಕರ ವರ್ಗ; ವೇತನ (ದಿನಕ್ಕೆ ₹ಗಳಲ್ಲಿ)

ಅತ್ಯುನ್ನತ ಕೌಶಲ; 413.41

ಕೌಶಲ; 401.59

ಅರೆ ಕೌಶಲ; 391.80

ಕೌಶಲ ರಹಿತ; 381.99

***

ಗಾರ್ಮೆಂಟ್ಸ್ ಕಾರ್ಖಾನೆ ಕಾರ್ಮಿಕರ ತುಟ್ಟಿ ಭತ್ಯೆ ಹೆಚ್ಚಳದ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು

-ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು