ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು| ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಸಾವು: ಸಿಬ್ಬಂದಿ ನಿರ್ಲಕ್ಷ್ಯದ ಆರೋಪ

Last Updated 20 ಮಾರ್ಚ್ 2023, 19:48 IST
ಅಕ್ಷರ ಗಾತ್ರ

ಗೌರಿಬಿದನೂರು (ಚಿಕ್ಕಬಳ್ಳಾಪುರ): ಇಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆ ತಂದಿದ್ದ ಮೂರು ವರ್ಷದ ಗಂಡು ಮಗು ಸೋಮವಾರ ಮೃತಪಟ್ಟಿದೆ. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.

ಮಂಚೇನಹಳ್ಳಿ ತಾಲ್ಲೂಕಿನ ಆರ್ಕುಂದ ಗ್ರಾಮದ ನರಸಿಂಹಮೂರ್ತಿ ಮತ್ತು ರೂಪಾ ದಂಪತಿಯ ಮೂರು ವರ್ಷದ ಮಗು ಚರಣ್ ಮೃತಪಟ್ಟಿದೆ. ಅನಾರೋಗ್ಯದ ಕಾರಣ ದಂಪತಿ ಭಾನುವಾರ ಸಂಜೆ ಮಗುವನ್ನು ಆಸ್ಪತ್ರೆಗೆ ಕರೆ ತಂದಿದ್ದರು.

ಅರ್ಕುಂದ ಗ್ರಾಮ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ.

‘ಭಾನುವಾರ ಸಂಜೆ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದೆವು. ಕೌಂಟರ್‌ನಲ್ಲಿ ವೈದ್ಯರ ಚೀಟಿ ಪಡೆದಿದ್ದೆವು. ವೈದ್ಯರು ಸಿಗುವುದು ತಡವಾಗುತ್ತದೆ. ನಾಳೆ ಬನ್ನಿ, ತುರ್ತು ಇದ್ದಲ್ಲಿ ಬೇರೆ ಆಸ್ಪತ್ರೆಗೆ ಹೋಗಿ ಎಂದು ಸಿಬ್ಬಂದಿ ತಿಳಿಸಿದರು. ‌ಸುಮಾರು 30 ನಿಮಿಷ ಆಸ್ಪತ್ರೆ ಆವರಣದಲ್ಲಿ ವೈದ್ಯರಿಗಾಗಿ ಕಾದೆವು. ವೈದ್ಯರು ಸಿಗದ ಕಾರಣ ಗ್ರಾಮಕ್ಕೆ ಬಂದೆವು’ ಎಂದು ಮಗುವಿನ ದೊಡ್ಡಪ್ಪ ಬಾಲಪ್ಪ ತಿಳಿಸಿದರು.

‘ಸೋಮವಾರ ಬೆಳಗಿನ ಜಾವ ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಯಿತು. ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ಬಂದೆವು. ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದರು. ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರೆ ಮಗು ಸಾಯು
ತ್ತಿರಲಿಲ್ಲ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ದಿಂದ ಮಗುವನ್ನು ಕಳೆದುಕೊಂಡೆವು. ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಅವರು ಕಣ್ಣೀರಾದರು.

ತಾಲ್ಲೂಕು ಆಸ್ಪತ್ರೆಯಲ್ಲಿ ಭಾನುವಾರ ಕರ್ತವ್ಯನಿರತ ವೈದ್ಯರು ಇದ್ದರು. ಆದರೆ, ಮಗುವನ್ನು ಚಿಕಿತ್ಸೆಗೆ ಕರೆ ತಂದಾಗ ಅವರು ಆಸ್ಪತ್ರೆಯಲ್ಲಿ ಇರಲಿಲ್ಲ ಎನ್ನಲಾಗಿದೆ.

ಕ್ರಮಕ್ಕೆ ಶಿಫಾರಸು

‘ಆಸ್ಪತ್ರೆ ಸಿಬ್ಬಂದಿ ನೀಡಿರುವ ಅಸ್ಪಷ್ಟ ಮಾಹಿತಿಯಿಂದ ಪೋಷಕರು ಗೊಂದಲಕ್ಕೀಡಾಗಿ ಮಗುವಿಗೆ ಚಿಕಿತ್ಸೆ ಕೊಡಿಸದೇ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಕೌಂಟರ್‌ನಲ್ಲಿದ್ದ ಸಿಬ್ಬಂದಿ ನಿರ್ಲಕ್ಷ್ಯ ‌ಹಾಗೂ ಅಸಮರ್ಪಕ ಮಾಹಿತಿಯಿಂದ ಈ ದುರ್ಘಟನೆ ನಡೆದಿದೆ’ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ್ ಒಪ್ಪಿಕೊಂಡಿದ್ದಾರೆ.

‘ಸೋಮವಾರ ‌ಬೆಳಿಗ್ಗೆ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ವೈದ್ಯರು ಮಗುವಿಗೆ ಯಾವುದೇ ಚಿಕಿತ್ಸೆ ನೀಡಿಲ್ಲ. ಅದಾಗಲೇ ಮಗು ಮೃತಪಟ್ಟಿತ್ತು. ಮಗುವಿನ ಸಾವಿಗೆ ಕಾರಣವಾಗಿರುವ ‘ಡಿ’ ಗ್ರೂಪ್ ನೌಕರರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

***

ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಂಬಂಧಪಟ್ಟ ವೈದ್ಯರು ಸಹ ಯಾವುದೇ ವಿಷಯ ತಿಳಿಸಿಲ್ಲ. ಮಾಹಿತಿ ಸಂಗ್ರಹಿಸಲಾಗುವುದು

- ಡಾ. ಓ.ರತ್ನಮ್ಮ, ತಾಲ್ಲೂಕು ಆರೋಗ್ಯಾಧಿಕಾರಿ, ಗೌರಿಬಿದನೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT