ಭಾನುವಾರ, ಮೇ 9, 2021
25 °C
ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರಿಗೆ ಗೀತ ಗೌರವ

‘ಸುಗಮ ಸಂಗೀತ ಕ್ಷೇತ್ರಕ್ಕೆ ಸೀಮಿತಗೊಳಿಸದಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಾಹಿತ್ಯ ಲೋಕಕ್ಕೂ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಬಹಳ ಕೊಡುಗೆ ನೀಡಿದ್ದಾರೆ. ಕೇವಲ ಸುಗಮ ಸಂಗೀತ ಕ್ಷೇತ್ರಕ್ಕೆ ಅವರನ್ನು ಸೀಮಿತಗೊಳಿಸಬಾರದು’ ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಅಭಿಪ್ರಾಯಪಟ್ಟರು.

ಸಂಗೀತ ಧಾಮ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಭಾವಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರಿಗೆ ‘ಗೀತ ಗೌರವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲಕ್ಷ್ಮೀನಾರಾಯಣ ಭಟ್ಟರು ಹಲವು ಪ್ರಮುಖ ಸಾಹಿತ್ಯಗಳ ಭಾಷಾಂತರದಲ್ಲೂ ಮೇಲುಗೈ ಸಾಧಿಸಿದ್ದರು. ಇದು, ಅವರಲ್ಲಿದ್ದ ಕಾವ್ಯ ಕುತೂಹಲ ಮತ್ತು ಭಾಷಾಂತರ ಪ್ರತಿಭೆಗಳಿಗೆ ನಿದರ್ಶನ. ಭಟ್ಟರ ಅನುವಾದದಿಂದ ಕನ್ನಡ ಕಾವ್ಯ ಸಮೃದ್ಧಗೊಂಡಿದೆ’ ಎಂದರು.

‘ಇಂತಹ ವ್ಯಕ್ತಿಯನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ಸೀಮಿತಗೊಳಿಸದೆ, ಸಾಹಿತ್ಯ ಲೋಕದಲ್ಲಿನ ಅವರ ಪಾತ್ರವನ್ನೂ ಪರಿಚಯಿಸುವ ಕೆಲಸವನ್ನು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಮಾಡಬೇಕು’ ಎಂದು ಒತ್ತಾಯಿಸಿದರು.

ಗಾಯಕ ವೈ.ಕೆ.ಮುದ್ದುಕೃಷ್ಣ, ‘‌ಭಟ್ಟರು ಸುಗಮ ಸಂಗೀತಕ್ಕೆ ದೊಡ್ಡ ಪರಿಕಲ್ಪನೆ ಸೃಷ್ಟಿಸಿದವರು. ಇಲ್ಲದಿದ್ದರೆ, ಅನೇಕರಿಗೆ ಹಾಡುವ ಅವಕಾಶಗಳು ಸಿಗುತ್ತಿರಲಿಲ್ಲ. ಭಟ್ಟರಿಗೆ ಸೌಂದರ್ಯ ಪ್ರಜ್ಞೆಯೂ ಹೆಚ್ಚಾಗಿತ್ತು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ, `ವಾಷ್ ರೂಂ ಎಲ್ಲಿದೆ' ಎಂದು ಕೇಳಿಕೊಂಡು ಹೋಗಿ, ತಲೆಬಾಚಿಕೊಂಡು, ಮುಖಕ್ಕೆ ಪೌಡರ್ ಹಚ್ಚಿಕೊಂಡು ಅಚ್ಚುಕಟ್ಟಾಗಿ ತಯಾರಾಗಿ ಬರುತ್ತಿದ್ದರು' ಎಂದು ಅವರಲ್ಲಿನ ಸೌಂದರ್ಯ ಪ್ರಜ್ಞೆಯನ್ನು ನೆನಪಿಸಿದರು.

ಗೀತ ಗಾಯನದಲ್ಲಿ ಕೆ.ಎಸ್.ಸುರೇಖಾ, ಮೃತ್ಯುಂಜಯ ದೊಡ್ಡವಾಡ, ಸುಪ್ರಿಯಾ ರಘುನಂದನ್, ಸೃಷ್ಟಿ ನಾಡಿಗ್, ಇಂಚರ ಪ್ರವೀಣ್‍ಕುಮಾರ್ ಸೇರಿದಂತೆ ಹಲವು ಗಾಯಕರು ಹಾಗೂ ಸಂಗೀತ ಧಾಮದ ವಿದ್ಯಾರ್ಥಿಗಳು ಲಕ್ಷ್ಮೀನಾರಾಯಣ ಭಟ್ಟರ ರಚನೆಯ ಗೀತೆಗಳನ್ನು ಹಾಡಿದರು. ವಿಮರ್ಶಕ ಎಚ್.ಎಸ್.ಸತ್ಯನಾರಾಯಣ ನುಡಿನಮನ ಸಲ್ಲಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು