ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ಗೋಕರ್ಣ ದೇವಸ್ಥಾನದ ನಿರ್ವಹಣೆ‌ ಹೊಣೆ

Last Updated 19 ಏಪ್ರಿಲ್ 2021, 15:48 IST
ಅಕ್ಷರ ಗಾತ್ರ

ನವದೆಹಲಿ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣೆಯನ್ನು ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದ ಸಮಿತಿಗೆ ಒಪ್ಪಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರ್ಧರಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಮೂವರು ಸದಸ್ಯ ಪೀಠವು ಈ ಮಧ್ಯಂತರ ಆದೇಶ ಪ್ರಕಟಿಸಿದೆ.

ದೇಗುಲದ ನಿರ್ವಹಣೆಯನ್ನು ರಾಮಚಂದ್ರಾಪುರ ಮಠಕ್ಕೆ ಒಪ್ಪಿಸಿದ್ದ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಿ 2018ರ ಆಗಸ್ಟ್‌ 10ರಂದು ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿದ್ದ ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿ
ಸಿದ ಪೀಠವು ಏಪ್ರಿಲ್‌ 7ರಂದು ಆದೇಶ ಕಾಯ್ದಿರಿಸಿತ್ತು.

ಪೀಠವು, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿರುವ ಶ್ರೀಕೃಷ್ಣ ಅವರಿಗೆ ದೇಗುಲ ನಿರ್ವಹಣಾ ಸಮಿತಿಯ ನೇತೃತ್ವ ವಹಿಸಿದೆ. ಸಮಿತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಕುಮಟಾದ ಸಹಾಯಕ ಆಯುಕ್ತರು, ಇಬ್ಬರು ತಜ್ಞರು ಹಾಗೂ ರಾಜ್ಯ ಸರ್ಕಾರ ನೇಮಿಸುವ ಇಬ್ಬರು ಉಪಾಧಿವಂತರು ಇರಲಿದ್ದಾರೆ.
15 ದಿನಗಳ ಒಳಗೆ ದೇವಸ್ಥಾನದ ವ್ಯವಹಾರಗಳ ಉಸ್ತುವಾರಿಯನ್ನು ಮೇಲ್ವಿಚಾರಣಾ ಸಮಿತಿಯ ಕಾರ್ಯದರ್ಶಿಯೂ ಆಗಿರುವ ಸಹಾಯಕ ಆಯುಕ್ತರಿಗೆ ಹಸ್ತಾಂತರಿಸುವಂತೆ ಪೀಠವು ರಾಮಚಂದ್ರಾಪುರ ಮಠಕ್ಕೆ ಸೂಚಿಸಿದೆ.

‘8ನೇ ಶತಮಾನದಲ್ಲಿ ಗೋಕರ್ಣದಲ್ಲಿ ಐತಿಹಾಸಿಕ ಮಠವನ್ನು ಸ್ಥಾಪಿಸಿದ್ದ ಆದಿ ಶಂಕರಾಚಾರ್ಯರು, ಮಹಾಬಲೇಶ್ವರ ದೇವಸ್ಥಾನದ ವ್ಯವಹಾರಗಳನ್ನು ನೋಡಿಕೊಳ್ಳುವಂತೆ ಮಠದವರಿಗೆ ಆದೇಶಿಸಿದ್ದರು’ ಎಂದು ಅರ್ಜಿದಾರ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಾದ ಮಂಡಿಸಿದ್ದರು.

‘ದೇವಸ್ಥಾನವು ಮಠಕ್ಕೆ ಸೇರಿದ್ದು ಎಂಬುದನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್‌ ಅವರನ್ನೂ ಒಳಗೊಂಡಿರುವ ಪೀಠ ಹೇಳಿತು.

‘ಈ ಪ್ರಕರಣದಲ್ಲಿ ಅಂತಿಮ ತೀರ್ಮಾನ ಪ್ರಕಟಿಸುವುದು ಬಾಕಿ ಇದ್ದು, ಅಲ್ಲಿಯವರೆಗೆ ದೇವಾಲಯ ಮತ್ತು ಭಕ್ತರ ಹಿತದೃಷ್ಟಿಯಿಂದ ಸ್ವತಂತ್ರ ಸಮಿತಿಗೆ ದೇವಾಲಯದ ಆಡಳಿತ ನಿರ್ವಹಣೆಯ ಹೊಣೆ ವಹಿಸುವುದು ಸೂಕ್ತವಾಗಿದೆ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ದಕ್ಷಿಣ ಕಾಶಿ’ ಎಂದೇ ಹೆಸರಾಗಿರುವ ಮಹಾಬಲೇಶ್ವರ ದೇವಸ್ಥಾನದ ಹೊಣೆಯನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು 2008ರ ಆಗಸ್ಟ್‌ನಲ್ಲಿ ರಾಮಚಂದ್ರಾಪುರ ಮಠಕ್ಕೆ ವಹಿಸಿತ್ತು.

‘ಸತ್ಯಕ್ಕೆ ಸಂದ ಜಯ’

ಕಾರವಾರ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ಅರ್ಜಿದಾರರಾದ ಮೂಲ ಉಪಾಧಿವಂತರು ಸೋಮವಾರ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು.

‘ಮಹಾಬಲೇಶ್ವರ ದೇವಸ್ಥಾನ ಮೊದಲಿನಿಂದಲೂ ಸ್ವತಂತ್ರವಾಗಿತ್ತು. ಅದೇ ರೀತಿ, ಸಾರ್ವಜನಿಕವಾಗಿಯೇ ಇರಬೇಕೆಂಬುದು ನಮ್ಮ ಅಭಿಪ್ರಾಯವಾಗಿತ್ತು. ನ್ಯಾಯಾಲಯವು ಇದನ್ನು ಮಾನ್ಯ ಮಾಡಿದ್ದು ತುಂಬಾ ಸಂತಸ ಉಂಟುಮಾಡಿದೆ’ ಎಂದು ಶ್ರೀಕ್ಷೇತ್ರ ಗೋಕರ್ಣ ರಕ್ಷಣಾ ಸಮಿತಿ ಅಧ್ಯಕ್ಷ ಗಣಪತಿ ಗಜಾನನ ಹಿರೇ ಪ್ರತಿಕ್ರಿಯಿಸಿದರು.

‘ರಾಮಚಂದ್ರಾಪುರ ಮಠವು ಸುಳ್ಳು ದಾಖಲೆ ಸೃಷ್ಟಿಸಿ ದೇವಸ್ಥಾನವನ್ನು ಹಸ್ತಾಂತರಿಸಿಕೊಂಡಿತ್ತು. ಆದರೆ, ಹಸ್ತಾಂತರ ಆದೇಶವನ್ನು ಸುಪ್ರೀಂಕೋರ್ಟ್ ಪುರಸ್ಕರಿಸದಿರುವುದು ಸತ್ಯಕ್ಕೆ ಸಂದ ಜಯವಾಗಿದೆ’ ಎಂದು ಅರ್ಜಿದಾರ ಬಾಲಚಂದ್ರ ದೀಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದರು.

***
ಗೋಕರ್ಣದ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರತಿ ಇನ್ನೂ ನಮ್ಮ ಕೈಸೇರಿಲ್ಲ. ತೀರ್ಪನ್ನು ನಮ್ಮ ಅಧಿಕಾರಿಗಳು ಮತ್ತು ಕಾನೂನು ತಜ್ಞರು ಅಧ್ಯಯನ ಮಾಡುತ್ತಾರೆ. ಆ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ದೇವಸ್ಥಾನದ ಆಡಳಿತ ನಿರ್ವಹಣೆಗೆ ಸಮಿತಿ ನೇಮಕ ಸೇರಿದಂತೆ ನ್ಯಾಯಾಲಯ ಏನೆಲ್ಲಾ ಹೇಳಿದೆ ಎಂಬುದರ ಪೂರ್ಣ ಮಾಹಿತಿ ಇನ್ನೂ ತಮಗೆ ತಿಳಿದಿಲ್ಲ

ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

***

ಸುಪ್ರೀಂಕೋರ್ಟ್‌ನ ಮಧ್ಯಂತರ ತೀರ್ಪನ್ನು ನಾವು ಗೌರವಿಸುತ್ತೇವೆ. ಗೋಕರ್ಣದ ಮಹಾಬಲೇಶ್ವರ ದೇವಾಲಯದಿಂದ ಹಣ, ಅಧಿಕಾರ, ಪ್ರತಿಷ್ಠೆ ಇಂಥ ಯಾವ ಪ್ರತಿಫಲಾಪೇಕ್ಷೆಯೂ ನಮಗೆ ಇರಲಿಲ್ಲ. ಇದನ್ನು ಕೇವಲ ಸೇವೆಯ ಸಾಧನವಾಗಿ ನಾವು ಪರಿಗಣಿಸಿದ್ದೆವು. ಪರಂಪರೆಯ ಸಂಬಂಧ ಇರುವುದರಿಂದ ಮತ್ತು ಸಮಾಜದ ಹಿತಕ್ಕಾಗಿ ಮಠವು ಗೋಕರ್ಣ ದೇವಾಲಯದ ವಿಷಯದಲ್ಲಿ ಕಾನೂನು ಹೋರಾಟ ಕೈಗೆತ್ತಿಕೊಂಡಿತ್ತು. ಇದನ್ನು ಮುಂದುವರಿಸಲಿದೆ

ರಾಘವೇಶ್ವರಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT