ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವಾಹನ ಚಾಲಕರಿಗೆ ಶೀಘ್ರ ನಿವೇಶನ

ವಾಹನ ಚಾಲಕ ಸಮಾವೇಶದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಭರವಸೆ
Last Updated 17 ಜನವರಿ 2021, 13:43 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಜ್ಯ ಸರ್ಕಾರಿ ವಾಹನ ಚಾಲಕರಿಗೂ ನಿವೇಶನ ಮಂಜೂರು ಮಾಡುವ ಕುರಿತು ರಾಜ್ಯ ಸರ್ಕಾರ ಈಗಾಗಲೇ ಸಿದ್ಧತೆಗಳನ್ನು ನಡೆಸಿದೆ. ಅಧಿಕಾರಿಗಳ ಮೇಲೆ ಒತ್ತಡ ತಂದು ಈ ಕೆಲವನ್ನೂ ಆದಷ್ಟು ಶೀಘ್ರ ಜಾರಿ ಮಾಡಿಸುತ್ತೇನೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಾಹನ ಚಾಲಕರ ಜಿಲ್ಲಾ ಮಟ್ಟದ ಸಮಾವೇಶ, ಕೊರೊನಾ ಸೇನಾನಿಗಳು ಹಾಗೂ ನಿವೃತ್ತರ ಸನ್ಮಾನ, ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ವಾಹನ ಚಾಲಕರ ಸಂಘ ಕೂಡ ರಾಜ್ಯದೆಲ್ಲೆಡೆ ಇನ್ನಷ್ಟು ಸಂಘಟನೆಯಾಗುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರ ಸಂಘವು ಎಲ್ಲ ರೀತಿಯ ಸಹಕಾರ ನೀಡಲಿದೆ. ಈ ಬಗ್ಗೆ ರಾಜ್ಯ ಸರ್ಕಾರದಲ್ಲಿ ಆಗಬೇಕಾದ ಕೆಲಸಗಳನ್ನೂ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಲಬುರ್ಗಿಯಲ್ಲಿ ಸರ್ಕಾರಿ ನೌಕರರ ಭವ್ಯವಾದ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ₹ 2 ಕೋಟಿ ನೆರವು ನೀಡುವುದಾಗಿ’ ಹೇಳಿದರು.

‘ಅನಾರೋಗ್ಯಕ್ಕೆ ಈಡಾದ ಚಾಲಕರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಪದ್ಧತಿ ಇದೆ. ಇನ್ನೆ ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರವೇ ನೇರವಾಗಿ ಆರೋಗ್ಯ ಸೇವೆಯ ವೆಚ್ಚ ಭರಸಲಿದೆ. 2022ರ ವೇಳೆಗೆ ಎಲ್ಲ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಸರ್ಕಾರಿ ನೌಕರರ ಸರಿಸಮಾನವಾದ ಸೌಲಭ್ಯಗಳು ಸಿಗುವ ಸಾಧ್ಯತೆ ಇದೆ’ ಎಂದೂ ಷಡಕ್ಷರಿ ಹರ್ಷ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ‍ಪಾಟೀಲ ರೇವೂರ ಸಮಾವೇಶ ಉದ್ಘಾಟಿಸಿದರು. ಶ್ರೀಶೈಲಂ, ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಹಾಜೀ ಪೀರಾ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ಜಗನ್ನಾಥ ಹಾಲಂಗೆ, ಅಧೀಕ್ಷಕ ಎಂಜಿನಿಯರ್‌ ಶಶಿಕಾಂತ ಮಳ್ಳಿ, ಸಣ್ಣ ನೀರಾವರಿ ವೃತ್ತ ಕಚೇರಿ ಅಧೀಕ್ಷಕ ಎಂಜಿನಿಯರ್‌ ಸುರೇಶ ಶರ್ಮಾ, ಬೃಹತ್‌ ನೀರಾವರಿ ಯೋಜನೆ ವಲಯದ ಮುಖ್ಯ ಎಂಜಿನಿಯರ್‌ ವೆಂಕಟೇಶ ಆರ್‌.ಎಲ್‌, ಪಂಚಾಯತ್‌ ರಾಜ್‌ ಇಲಾಖೆ ಅಧೀಕ್ಷಕ ಎಂಜಿನಿಯರ್‌ ರಾಜು ಡಾಂಗೆ, ಪ್ರಾದೇಶಿಕ ಸಾರಿಗೆ ಉಪಸಹಾಯಕ ಆಯುಕ್ತ ದಾಮೋದರ್‌, ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಶ್ರೀನಿವಾಸ ವೇದಿಕೆ ಮೇಲಿದ್ದರು.

ಇದೇ ವೇಳೆ ಸಂಘದ ವತಿಯಿಂದ ಹಲವು ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ನಿವೃತ್ತ ನೌಕರರು, ಕ್ರಿಯಾಶೀಲ ವಾಹನ ಚಾಲಕರು, ಸಂಘದ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು, ಹಲವಾರು ಕೊರೊನಾ ಸೇನಾನಿಗಳನ್ನೂ ಸನ್ಮಾನಿಸಲಾಯಿತು. ಸಂಘದಿಂದ ಹೊರತಂದ ಕ್ಯಾಲೆಂಡರ್‌ ಅನ್ನು ಗಣ್ಯರು ಲೋಕಾರ್ಪಣೆ ಮಾಡಿದರು.

ಕೆಕೆಆರ್‌ಡಿಬಿಯಿಂದ ₹ 1 ಕೋಟಿ

ಕಲಬುರ್ಗಿ: ‘ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರಿ ನೌಕರರ ಭವಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ₹ 1 ಕೋಟಿ ಅನುದಾನ ನೀಡಲಾಗುವುದು’ ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಸರ್ಕಾರಿ ವಾಹನ ಚಾಲಕರ ಸಂಘದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಈ ಭಾಗದ ಸರ್ಕಾರಿ ನೌಕರರಿಗೂ ಹಲವು ಸಮಸ್ಯೆಗಳಿವೆ ಎಂಬುದು ಗಮನಕ್ಕೆ ಬಂದಿದೆ. 371–ಜೆ ಅಡಿಯಲ್ಲಿ ನೇಮಕಾತಿ, ಬಡ್ತಿ, ಮೀಸಲಾತಿ ಮುಂತಾದ ವಿಚಾರಗಳಲ್ಲಿಯೂ ಆಗಾಗ ಸಮಸ್ಯೆಗಳು ಕೇಳಿಬರುತ್ತಿವೆ. ಹೀಗಾಗಿ, ಕೆಕೆಆರ್‌ಡಿಬಿಯಿಂದ ಈ ಬಗ್ಗೆ ಒಂದು ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT