ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಹಬ್ಬ ದಸರಾ: ಮೈಸೂರು ಬಿಟ್ಟು ಉಳಿದ ಕಡೆ 400ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ

ಸರ್ಕಾರದಿಂದ ಮಾರ್ಗಸೂಚಿ
Last Updated 5 ಅಕ್ಟೋಬರ್ 2021, 21:37 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಇದೇ 7ರಿಂದ 15ರವರೆಗೆ ನಡೆಯಲಿರುವ ನಾಡಹಬ್ಬ ದಸರಾ, ದುರ್ಗಾ ಪೂಜೆ ಆಚರಣೆ ವೇಳೆ ಮೈಸೂರು ಬಿಟ್ಟು ಉಳಿದ ಕಡೆಗಳಲ್ಲಿ 400ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ವ್ಯಕ್ತಿಗತ ಅಂತರ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದೆ.

ಅಲ್ಲದೆ, ದಸರಾ ಆಚರಣೆಯಲ್ಲಿ ವ್ಯಕ್ತಿಗತ ಅಂತರ ಇಲ್ಲದೆ ನಡೆಯುವ ಕಾರ್ಯಕ್ರಮಗಳಿಗೂ ನಿಷೇಧ ಹೇರಲಾಗಿದೆ. ಕೋವಿಡ್ ಸೋಂಕು ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವರ್ಷ ಕೂಡಾ ದಸರಾವನ್ನು ಅತ್ಯಂತ ಸರಳವಾಗಿ ಆಚರಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರು ಮಂಗಳವಾರ ಮಾರ್ಗಸೂಚಿ ಹೊರಡಿಸಿದ್ದಾರೆ.

ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ: ಮೈಸೂರು ದಸರಾ ಹಬ್ಬದ ಆಚರಣೆಯನ್ನು ದೃಶ್ಯ ಸಂವಹನ (ವರ್ಚುವಲ್‌) ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಿರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

7ರಂದು ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಮತ್ತು ಗಣ್ಯರಿಂದ ಮೈಸೂರು ದಸರಾ ಉದ್ಘಾಟನೆ ನಡೆಯಲಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು, ಸಿಬ್ಬಂದಿ, ಕಲಾವಿದರು, ಮಾಧ್ಯಮದವರು ಸೇರಿ 100 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. 15ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂ ಸವಾರಿಯಲ್ಲಿ 500 ಜನರಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗಿದೆ.

7ರಿಂದ 15ರವರೆಗೆ ಅರಮನೆ ಆವರಣದಲ್ಲಿ ಸಂಜೆ ನಡೆಯಲಿರುವ 2 ಗಂಟೆ ಅವಧಿಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗರಿಷ್ಠ 500 ಜನರಿಗೆ ಅನುಮತಿ ನೀಡಲಾಗಿದೆ.

ಆಚರಣೆಯಲ್ಲಿ ಭಾಗವಹಿಸುವವರು ಅ. 4ರ ನಂತರ ಕೋವಿಡ್‌ ತಪಾಸಣೆ (ಆರ್‌ಟಿಪಿಸಿಆರ್‌) ನಡೆಸಿ ಸೋಂಕು ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ ಪಡೆಯಲೇಬೇಕು. ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದಿರಬೇಕು.

ಮಾಸ್ಕ್‌ ಧರಿಸದವರ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು. ಈ ಷರತ್ತುಗಳಲ್ಲದೆ, ಹಬ್ಬದ ಆಚರಣೆಗೆ ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ಜಿಲ್ಲಾಡಳಿತ ವಹಿಸಬೇಕು ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT