ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದಿಂದ ಮುಸ್ಲಿಮರಿಗೆ ಅನ್ಯಾಯ: ಅನ್ವರ್‌ ಮಾಣಿಪ್ಪಾಡಿ

ಬಿಜೆಪಿ ವಕ್ತಾರ ಅನ್ವರ್‌ ಮಾಣಿಪ್ಪಾಡಿ ಆರೋಪ– ಪ್ರಧಾನಿ ನಿರ್ಲಕ್ಷ್ಯಕ್ಕೆ ಆಕ್ಷೇಪ
Last Updated 6 ಡಿಸೆಂಬರ್ 2021, 22:36 IST
ಅಕ್ಷರ ಗಾತ್ರ

ಬೆಂಗಳೂರು:‘ ರಾಜ್ಯ ಸರ್ಕಾರ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌’ ಎಂಬ ಮಾತಿಗೆ ವಿರುದ್ಧವಾಗಿ ಮುಸ್ಲಿಮರಿಗೆ ಅವಕಾಶ ನಿರಾಕರಿಸುತ್ತಿದೆ’ ಎಂದು ಬಿಜೆಪಿ ವಕ್ತಾರ, ಫಜ್ರ್‌ ಕ್ಲಬ್‌ ಆಫ್‌ ಇಂಡಿಯಾ ಸಂಚಾಲಕ ಅನ್ವರ್‌ ಮಾಣಿಪ್ಪಾಡಿ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕೀಯ ಪ್ರಾತಿನಿಧ್ಯ, ಸವಲತ್ತುಗಳನ್ನು ನೀಡುವುದು, ಸ್ಮಶಾನಕ್ಕೆ ಜಮೀನು ಒದಗಿಸುವುದು ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರವೇ ನಮ್ಮ ಸಮುದಾಯವನ್ನು ವಂಚಿಸುತ್ತಿದೆ. ಈ ಕುರಿತು ಪ್ರಧಾನಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸಂಘ ಪರಿವಾರದ ಮುಖಂಡರಿಗೆ ದೂರು ನೀಡಿದ್ದೇನೆ. ಯಾವುದೇ ಕ್ರಮವೂ ಆಗಿಲ್ಲ’ ಎಂದರು.

ರಾಜ್ಯದಲ್ಲಿ ₹ 2 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿಗಳ ಕಬಳಿಕೆ ಕುರಿತು ತಾವು ಸಲ್ಲಿಸಿದ್ದ ವರದಿ ಆಧಾರದಲ್ಲಿ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತ ದೂರಿನ ಬಗ್ಗೆಯೂ ತನಿಖೆ ನಡೆಸಿಲ್ಲ. ಈ ಕುರಿತ ದೂರು, ಪತ್ರಗಳಿಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಸ್ಮಶಾನಕ್ಕೂ ಅಡ್ಡಿ: ಮುಸ್ಲಿಮರಿಗೆ ಪ್ರತ್ಯೇಕ ಸ್ಮಶಾನ ಜಮೀನು ಪಡೆಯಲು ಅಡ್ಡಿಪಡಿಸಲಾಗುತ್ತಿದೆ. ನ್ಯಾಯಾಲಯದ ಆದೇಶದಂತೆ ಬೆಂಗಳೂರಿನ ದೊಡ್ಡ ನಾಗಮಂಗಲದಲ್ಲಿ 2005 ರಲ್ಲಿ 2 ಎಕರೆ ಜಮೀನನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಲಾಗಿತ್ತು. ಆದರೆ, ಈವರೆಗೂ ಅದನ್ನು ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಕೋವಿಡ್‌ನಿಂದ ಮೃತಪಟ್ಟ ಮುಸ್ಲಿಮರ ಶವ ಸಂಸ್ಕಾರಕ್ಕೆ ₹ 50,000 ವ್ಯಯಿಸಬೇಕಾದ ದುಃಸ್ಥಿತಿ ಇದೆ ಎಂದು ಮಾಣಿಪ್ಪಾಡಿ ಹೇಳಿದರು.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಗೂನಡ್ಕದಲ್ಲಿ ಮಸೀದಿಯ ಬಳಿ ಸ್ಮಶಾನಕ್ಕಾಗಿ ಮಂಜೂರಾದ 20 ಸೆಂಟ್ಸ್ ಜಮೀನನ್ನು ಅರಣ್ಯದ ಹೆಸರಿನಲ್ಲಿ ಕಿತ್ತುಕೊಳ್ಳುವ ಯತ್ನ ನಡೆಯುತ್ತಿದೆ. ಬೆಂಗಳೂರಿನ ಸಂಜೀವಿನಿ ನಗರದಲ್ಲಿ ಬಿಬಿಎಂಪಿಯಿಂದ ಮಂಜೂರಾತಿ ಪಡೆದು ನಿರ್ಮಿಸಿದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅಡ್ಡಿಪಡಿಸಲಾಯಿತು. ಪೊಲೀಸರೇ ಮಸೀದಿ ಮೇಲೆ ದಾಳಿ ಮಾಡಿದರು. ಯಾವ ಪ್ರಕರಣದಲ್ಲೂ ಸಮುದಾಯಕ್ಕೆ ನ್ಯಾಯ ದೊರಕಿಲ್ಲ ಎಂದು ದೂರಿದರು.

‘ನಾನು ಈಗಲೂ ಬಿಜೆಪಿ ವಕ್ತಾರ. ಪಕ್ಷದ ಒಳಗಿದ್ದುಕೊಂಡೇ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇನೆ. ನಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT