ಸೋಮವಾರ, ಮೇ 17, 2021
21 °C

ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ: ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಹೆಚ್ಚಳಕ್ಕಾಗಿ ಸರ್ಕಾರಿ, ಖಾಸಗಿ ಪದವಿ, ಎಂಜಿನಿಯರಿಂಗ್‌ ಮತ್ತು ಡಿ‍ಪ್ಲೊಮಾ ಕಾಲೇಜುಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ರಾಜ್ಯ ಸರ್ಕಾರ ಶುಕ್ರವಾರ ಆಯೋಜಿಸಿದ್ದ ‘ಉತ್ತಮ ಆಡಳಿತ ದಿನ’ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲ ಅಧಿಕಾರವನ್ನೂ ನಮ್ಮ ಬಳಿಯೇ ಇರಿಸಿಕೊಳ್ಳಬೇಕೆಂಬ ಉದ್ದೇಶ ನಮಗೆ ಇಲ್ಲ. ವಿಕೇಂದ್ರೀಕರಣದ ಮೂಲಕ ಅಧಿಕಾರ ಹಂಚಿಕೆ ಮಾಡುವ ಉದ್ದೇಶವಿದೆ. ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವ ಮೂಲಕ ಸ್ಥಳೀಯವಾಗಿಯೇ ನಿರ್ಧಾರ ಕೈಗೊಳ್ಳಲು ಅವಕಾಶ ಕಲ್ಪಿಸುವ ಯೋಚನೆ ಇದೆ. ಶಿಕ್ಷಣ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿನ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆ ಎದುರಿಸಲು ಇದು ನೆರವಾಗಲಿದೆ’ ಎಂದು ಅವರು ಪ್ರತಿಪಾದಿಸಿದರು.

ವಾಜಪೇಯಿ ಅವರು ಅಧಿಕಾರ ವಿಕೇಂದ್ರೀಕರಣ ಮತ್ತು ವಿವಿಧ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವ ಮೂಲಕ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಿದ್ದರು. ಆ ಮಾದರಿಯನ್ನು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ಯೋಚನೆ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚು ಸ್ವಾಯತ್ತಗೊಳಿಸುವ ಮತ್ತು ವಿಕೇಂದ್ರೀಕರಣದ ಆಶಯಗಳನ್ನು ಹೊಂದಿದೆ ಎಂದು ಹೇಳಿದರು.

ಕೌಶಲ ವೃದ್ಧಿಗೆ ಕ್ರಮ: ‘ನಮ್ಮ ಎಲ್ಲ ಸಮಸ್ಯೆಗಳಿಗೂ ಶಿಕ್ಷಣದಲ್ಲೇ ಪರಿಹಾರವಿದೆ. ದೇಶದ ಒಳಗೆ ಮತ್ತು ಅಂತರರಾಷ್ಟ್ರೀಯ ಮಟ್ಟದ ಉದ್ಯೋಗ ಲಭ್ಯತೆಗೆ ಪೂರಕವಾಗಿ ಯುವಜನರಲ್ಲಿ ಕೌಶಲ ವೃದ್ಧಿ ಆಗಬೇಕಿದೆ. ಅದಕ್ಕೆ ಪೂರಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲು ಸರ್ಕಾರ ಹೆಜ್ಜೆ ಇಟ್ಟಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಉನ್ನತ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಇಲಾಖೆಗಳಲ್ಲಿ
ಆಗಿರುವ ಪ್ರಗತಿ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ವಿಧಾನ ಪರಿಷತ್‌ ಸದಸ್ಯರಾದ ಅ.ದೇವೇಗೌಡ, ಚಿದಾನಂದ ಗೌಡ, ಮಾಹಿತಿ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ. ಕುಮಾರ್ ನಾಯ್ಕ್, ನವೋದ್ಯಮ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು