ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸಿಗೆ ಲಭ್ಯತೆ ಕುರಿತು ನಿತ್ಯ ಬುಲೆಟಿನ್‌: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 5 ಮೇ 2021, 16:21 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯೂ ಸೇರಿದಂತೆ ರಾಜ್ಯದಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಲಭ್ಯವಿರುವ ಹಾಸಿಗೆಗಳ (ಬೆಡ್‌) ಸಂಖ್ಯೆ ಕುರಿತು ನಿತ್ಯವೂ ಬುಲೆಟಿನ್‌ನಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಂದಾಯ ಸಚಿವ ಆರ್‌. ಅಶೋಕ ಮತ್ತು ಕೋವಿಡ್‌ ವಾರ್‌ ರೂಂ ಮುಖ್ಯಸ್ಥರೂ ಆಗಿರುವ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರೊಂದಿಗೆ ಆರೋಗ್ಯ ಸೌಧದಲ್ಲಿರುವ ಕೋವಿಡ್‌ ವಾರ್‌ ರೂಂಗೆ ಬುಧವಾರ ಭೇಟಿ ನೀಡಿ, ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಪ್ರತಿದಿನವೂ ರಾಜ್ಯದಲ್ಲಿ ಎಷ್ಟು ಹಾಸಿಗೆಗಳು ಭರ್ತಿಯಾಗಿವೆ? ಖಾಲಿ ಇವೆ? ಯಾವ ವಿಧದ ಹಾಸಿಗೆಗಳು, ಯಾವ ಪ್ರದೇಶದಲ್ಲಿ ಖಾಲಿ ಇವೆ ಎಂಬ ಮಾಹಿತಿಯನ್ನೂ ಪ್ರಕಟಿಸಲಾಗುವುದು. ಎರಡರಿಂದ ಮೂರು ದಿನಗಳೊಳಗೆ ಹಾಸಿಗೆ ಲಭ್ಯತೆ ಕುರಿತ ಬುಲೆಟಿನ್‌ ಪ್ರಕಟಣೆ ಆರಂಭವಾಗಲಿದೆ’ ಎಂದರು.

ವೈದ್ಯರಿಂದಲೇ ನಿರ್ಧಾರ:ಆರ್‌. ಅಶೋಕ ಮಾತನಾಡಿ, ’ಕೋವಿಡ್‌ ರೋಗಿ ತನಗೆ ಇಂತಹದ್ದೇ ಆಸ್ಪತ್ರೆಯಲ್ಲಿ ಹಾಸಿಗೆ ನೀಡಬೇಕು ಎಂದು ಬೇಡಿಕೆ ಇಡುವಂತಿಲ್ಲ. ಇನ್ನು ಮುಂದೆ ಕೋವಿಡ್‌ ಕೇಂದ್ರಗಳ ವೈದ್ಯರೇ ರೋಗಿ ಯಾವ ಆಸ್ಪತ್ರೆಗೆ ದಾಖಲಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ’ ಎಂದು ಹೇಳಿದರು.

ಅಗತ್ಯವಿರುವ ಹಾಸಿಗೆಗಳ ಸಂಖ್ಯೆ, ಲಭ್ಯವಿರುವ ಹಾಸಿಗೆಗಳ ಸಂಖ್ಯೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಹೆಚ್ಚಿನ ಹಾಸಿಗೆಗಳನ್ನು ಪಡೆಯುವುದು ಮತ್ತು ವ್ಯವಸ್ಥೆ ಮಾಡುವ ಸಂಬಂಧ ಗುರುವಾರ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಹಾಸಿಗೆ ಒದಗಿಸುವುದು, ಊಟದ ವ್ಯವಸ್ಥೆ ಸೇರಿದಂತೆ ಕೋವಿಡ್‌ ಚಿಕಿತ್ಸೆಯಲ್ಲಿ ಸುಧಾರಣೆ ತರುವ ಕುರಿತು ಚರ್ಚಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT