ಶುಕ್ರವಾರ, ಫೆಬ್ರವರಿ 26, 2021
19 °C
ಪೂರ್ಣಗೊಳ್ಳದ ಎಣಿಕೆ ಕಾರ್ಯ, ಇಂದು ಎಲ್ಲ ಸ್ಥಾನಗಳ ಫಲಿತಾಂಶ

ಗ್ರಾ.ಪಂ. ಚುನಾವಣೆ: ಬಿಜೆಪಿ ಮೇಲುಗೈ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ‘ಪಕ್ಷರಹಿತ’ ಎಂದು ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಬಹುತೇಕ ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ ಎಂದು ಘೋಷಿಸಿಕೊಂಡಿವೆ.

ಪ್ರಾಥಮಿಕ ಮಾಹಿತಿ ಪ್ರಕಾರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಂದಾಜು 12,795, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು 9,545, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು 4,301 ಸ್ಥಾನಗಳು, ಇತರರು 3,777 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಯಾವುದೇ ಸಂಖ್ಯೆಗಳನ್ನು ಬಿಡುಗಡೆ ಮಾಡಿಲ್ಲ.

ಡಿ. 22 ಮತ್ತು 27ರಂದು ಎರಡು ಹಂತಗಳಲ್ಲಿ 226 ತಾಲ್ಲೂಕುಗಳ 5,728 ಗ್ರಾಮ ಪಂಚಾಯಿತಿಗಳ 91,339 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ರಾತ್ರಿ 8 ಗಂಟೆವರೆಗೆ 54,041 ಸ್ಥಾನಗಳ ಫಲಿತಾಂಶ ಪ್ರಕಟಿಸಲಾಗಿದೆ. ಉಳಿದ ಸ್ಥಾನಗಳ ಫಲಿತಾಂಶ ಗುರುವಾರ ಪ್ರಕಟವಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬುಧವಾರ ಬೆಳಿಗ್ಗೆ 7 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದ್ದು, ಮತದಾನಕ್ಕೆ ಮತಪತ್ರ ಬಳಸಿರುವುದರಿಂದ (ಬೀದರ್‌ ಹೊರತುಪಡಿಸಿ) ಫಲಿತಾಂಶ ವಿಳಂಬವಾಗಿದೆ. ಹಲವು ಕ್ಷೇತ್ರಗಳಲ್ಲಿ ಫಲಿತಾಂಶ ‘ಡ್ರಾ’ ಆಗಿದ್ದು, ಹಲವು ಕಡೆ ಒಂದು ಮತಗಳ ಅಂತರದಿಂದ ನಿರ್ಧಾರವಾಗಿದೆ. ಕೆಲವು ಕಡೆ ಪಂಚಾಯಿತಿ ಅಧ್ಯಕ್ಷರಾಗಿದ್ದವರು ಸೋಲು ಕಂಡಿದ್ದಾರೆ. ಡ್ರಾ ಆಗಿರುವ ಕಡೆಗಳಲ್ಲಿ ಲಾಟರಿ ಮೂಲಕ ವಿಜೇತರನ್ನು ಘೋಷಿಸಲಾಯಿತು. ಕೆಲವರಿಗೆ ಮರು ಎಣಿಕೆಯಲ್ಲಿ ಅದೃಷ್ಟ ಖುಲಾಯಿಸಿದೆ.

ಕೊಲೆ ಆರೋಪದಲ್ಲಿ ಜೈಲು ಸೇರಿದ ಅಭ್ಯರ್ಥಿಯನ್ನು ಜನ ಆಯ್ಕೆ ಮಾಡಿದ್ದಾರೆ. ಅದೃಷ್ಟ ಪರೀಕ್ಷೆಗಿಳಿದ  ನಾಲ್ವರು ಮಂಗಳಮುಖಿಯರೂ ಗೆಲುವಿನ ನಗೆ ಬೀರಿದ್ದಾರೆ. ಬಾಣಂತಿ ಕಾರಣಕ್ಕೆ ಪ್ರಚಾರವನ್ನೇ ಮಾಡದ ಅಭ್ಯರ್ಥಿಯನ್ನೂ ಮತದಾರರು ಆರಿಸಿದ್ದಾರೆ. ಅಣ್ಣ ತನ್ನ ತಮ್ಮನ ಮಗನಿಗೆ ಸೋಲುಣಿಸಿದರೆ, ಕಣಕ್ಕಿಳಿದ ಅತ್ತೆ– ಸೊಸೆ ಜಯ ಕಂಡಿದ್ದಾರೆ. ಸೊಸೆಯನ್ನು ಅತ್ತೆ, ತಾಯಿಯನ್ನು ಮಗಳು, ತಂಗಿಯನ್ನು ಅಕ್ಕ ಸೋಲಿಸಿದ ಪ್ರಸಂಗಗಳೂ ನಡೆದಿವೆ. ಚುನಾವಣೆ ನಡೆದ ಕೆಲವೇ ದಿನಗಳಲ್ಲಿ ನಿಧನರಾಗಿದ್ದ ಒಬ್ಬ ಅಭ್ಯರ್ಥಿಯೂ ಗೆಲುವು ಸಾಧಿಸಿದ್ದಾರೆ, ಇನ್ನೊಬ್ಬರು ಸೋತಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ತವರು ಬೂಕನಕೆರೆ ಸೇರಿದಂತೆ ಮಂಡ್ಯ, ತಿಪಟೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು ಸೇರಿದಂತೆ ಹಲವೆಡೆ ಡ್ರಾ ಫಲಿತಾಂಶ ಬಂದಿದೆ. ಬೂಕನಕೆರೆಯಲ್ಲಿ ಲಾಟರಿ ತೆಗೆದಾಗ ತಮ್ಮ ಬೆಂಬಲಿತ ಅಭ್ಯರ್ಥಿಗೆ ಅದೃಷ್ಟ ಒಲಿದಿದೆ ಎಂದು ಜೆಡಿಎಸ್‌ ಹೇಳಿಕೊಂಡಿದೆ.

ಹಾವೇರಿ ತಾಲ್ಲೂಕಿನ ಹೊಸರಿತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಕ್ಕೂರು ಗ್ರಾಮದ ಎರಡನೇ ವಾರ್ಡಿನಲ್ಲಿ ನೇತ್ರಾವತಿ ಮರಿಗೌಡರ ಪ್ರಚಾರ ನಡೆಸದೆ ಗೆಲುವು ಸಾಧಿಸಿದ್ದಾರೆ. ನೇತ್ರಾವತಿ ಅವರು ಡಿ. 6ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಸೂಚಕರ ಮುಖಾಂತರ ನಾಮಪತ್ರ ಸಲ್ಲಿಸಿದ್ದ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಮತ ಯಾಚಿಸಿದ್ದರು.

ಕೊಲೆ ಆರೋಪದ ಮೇಲೆ ಜೈಲು ಸೇರಿರುವ ಗೌರಿ ಬಿದನೂರಿನ ತಾಲ್ಲೂಕಿನ ವೆಂಕಟೇಶ ಮತ್ತು ಜಾತಿ ನಿಂದನೆ ಮೇಲೆ ನ್ಯಾಯಾಂಗ ಬಂಧನಕ್ಕೆ ಒಳಗಾದ ವಿರಾಜಪೇಟೆ ತಾಲ್ಲೂಕಿನ ಪುಲಿಯಂಡ ಬೋಪಣ್ಣ ಗೆದ್ದಿದ್ದಾರೆ.

ನಮ್ಮದೇ ಮೇಲುಗೈ– ಬಿಜೆಪಿ: ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್‌, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯಲ್ಲಿ ಘೋಷಿತ ಸ್ಥಾನಗಳ ಪೈಕಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಐದು ಜಿಲ್ಲೆಗಳ ಒಟ್ಟು 14,574 ಗ್ರಾಮ ಪಂಚಾಯಿತಿ ಸ್ಥಾನಗಳ ಪೈಕಿ, ರಾತ್ರಿ 7ರ ವೇಳೆಗೆ 10,331 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಬೆಂಬಲಿತರು 4,381, ಕಾಂಗ್ರೆಸ್‌ ಬೆಂಬಲಿತರು 3,606, ಜೆಡಿಎಸ್‌ ಬೆಂಬಲಿತರು 1,043 ಹಾಗೂ ಪಕ್ಷೇತರರು 1,301 ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಹೇಳಿದೆ.

ಪಕ್ಷವಾರು ಪ್ರಚಾರ: ಆಯೋಗ ಆಕ್ಷೇಪ: ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷರಹಿತವಾಗಿ ನಡೆಯುತ್ತಿದೆ. ಆದರೂ ರಾಜಕೀಯ ಪಕ್ಷಗಳು ಯಾವುದೇ ಆಧಾರ ಇಲ್ಲದಿದ್ದರೂ ಫಲಿತಾಂಶಗಳ ಬಗ್ಗೆ ಪಕ್ಷವಾರು ಹೇಳಿಕೆ ನೀಡುತ್ತಿವೆ. ಇದು ಸರಿಯಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ.

ಅಧಿಕಾರಿ ಸಾವು: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮತ‌ ಎಣಿಕೆ ಕೇಂದ್ರದ ಅಧಿಕಾರಿ ಬೋರೇಗೌಡ (52) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಆಗಿದ್ದ ಅವರು ಬುಧವಾರ ಬೆಳಿಗ್ಗೆ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದರು. ಎಂಟು ಗಂಟೆಯ ವೇಳೆಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಮಾರ್ಗಮಧ್ಯೆ ಕೊನೆಯುಸಿರೆಳೆದರು.

*
ಹಲವು ಕಡೆ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಸೆ, ಆಮಿಷ, ಬೆದರಿಕೆಗಳ ಮೂಲಕ ಸೆಳೆಯುವ ಪ್ರಯತ್ನ ನಡೆಯುತ್ತಿರುವ ದೂರುಗಳಿವೆ.
–ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

*
ನಗರ ಪ್ರದೇಶಕ್ಕೆ ಮಾತ್ರ ಬಿಜೆಪಿ ಸೀಮಿತ ಎಂದು ಟೀಕಿಸುತ್ತಿದ್ದವರಿಗೆ ಚುನಾವಣೆ ಫಲಿತಾಂಶ ದಿಟ್ಟ ಉತ್ತರ. ಗ್ರಾಮೀಣ ಭಾಗದಲ್ಲೂ ಬಿಜೆಪಿ ಬೇರು ಬಿಟ್ಟಿದೆ.
–ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು