ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ತೆರಿಗೆ: ಹಳೇ ವಾಹನಗಳ ಎಫ್‌ಸಿ ದುಬಾರಿ

Last Updated 31 ಮಾರ್ಚ್ 2022, 17:45 IST
ಅಕ್ಷರ ಗಾತ್ರ

ಬೆಂಗಳೂರು: 15 ವರ್ಷಕ್ಕೂ ಹಳೆಯದಾದ ವಾಹನಗಳಿಗೆ ಎಫ್‌ಸಿ (ಫಿಟ್‌ನೆಸ್ ಸರ್ಟಿಫಿಕೇಟ್‌) ಪಡೆಯುವುದು ಇನ್ನು ಭಾರಿ ದುಬಾರಿ ಆಗಲಿದೆ. ಈ ಹಿಂದೆ ಇದ್ದ ಶುಲ್ಕಕ್ಕೆ ಹೋಲಿಸಿದರೆ 15ರಿಂದ 60 ಪಟ್ಟು ಹೆಚ್ಚಿಸಲಾಗಿದೆ.

2002ರಿಂದಲೇ ಹಸಿರು ತೆರಿಗೆಯನ್ನು ಕರ್ನಾಟಕ ಸಂಗ್ರಹಿಸುತ್ತಿದೆ. ದ್ವಿಚಕ್ರ ವಾಹನಗಳಿಗೆ ₹250, ನಾಲ್ಕು ಚಕ್ರದ ವಾಹನಗಳಿಗೆ ₹500 ಮತ್ತು ಏಳು ವರ್ಷ ಮೇಲ್ಪಟ್ಟ ಎಲ್ಲಾ ಸಾರಿಗೆ ವಾಹನಗಳಿಗೆ ₹200 ಶುಲ್ಕವನ್ನು ನಾಮಮಾತ್ರಕ್ಕೆ ಪಡೆಯಲಾಗುತ್ತಿತ್ತು.

ಹೊಸ ನೀತಿ ಪ್ರಕಾರ ಹೆಚ್ಚಳವಾಗುವ ಶುಲ್ಕವು 15 ವರ್ಷ ಮೇಲ್ಪಟ್ಟ ವಾಣಿಜ್ಯ ಉದ್ದೇಶದ ವಾಹನಗಳನ್ನು ಬಳಸಲು ಇಚ್ಛಿಸುವ ಮಾಲೀಕರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಉದಾಹರಣೆಗೆ ಹಳೆಯ ಸ್ಕೂಟರ್ ಮತ್ತು ಬೈಕ್‌ಗಳ ಮಾಲೀಕರು ಎಫ್‌ಸಿ ಪಡೆಯಲು ₹1 ಸಾವಿರ ಶುಲ್ಕದ ಜತೆಗೆ ವಾಹನ ಪರೀಕ್ಷಾ ಶುಲ್ಕವಾಗಿ ₹400-₹500 ಪಾವತಿಸಬೇಕಾಗುತ್ತದೆ.

ಹಳೆಯ ಕಾರುಗಳಿಗೆ ₹4500, ಸರಕು ಸಾಗಣೆಯ ಮಧ್ಯಮ ವಾಹನಗಳಿಗೆ ₹10 ಸಾವಿರ ಮತ್ತು ಭಾರಿ ವಾಹನಗಳಿಗೆ ₹12 ಸಾವಿರ ಶುಲ್ಕ ಪಾವತಿಸಬೇಕಾಗುತ್ತದೆ. ರಾಜ್ಯದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ 70.29 ಲಕ್ಷ ವಾಹನಗಳಿದ್ದು, ಅವುಗಳಲ್ಲಿ 45.62 ಲಕ್ಷ ದ್ವಿಚಕ್ರ ವಾಹನಗಳು, 11.7 ಲಕ್ಷ ಕಾರುಗಳು, 2.4 ಲಕ್ಷ ಟ್ರಕ್ ಮತ್ತು ಲಾರಿಗಳು, 2.19 ಲಕ್ಷ ಸರಕು ಸಾಗಣೆ ಲಘು ವಾಹನಗಳಿವೆ.

‘ದೇಶದಾದ್ಯಂತ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಕೇಂದ್ರದ ನಿಯಮ ಎಲ್ಲರಿಗೂ ಒಂದೇ ಆಗಿದೆ’ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ(ಜಾರಿ) ನರೇಂದ್ರ ಹೋಳ್ಕರ್ ಹೇಳಿದರು.

‘ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ವಿಧಿಸಿರುವ ಹೆಚ್ಚುವರಿ ಶುಲ್ಕವು ವಾಹನಗಳ ಮಾಲೀಕರು ಮತ್ತು ಚಾಲಕರಿಗೆ ಕಿರುಕುಳ ನೀಡಲು ಸಾಧನವಾಗಲಿದೆ ಅಷ್ಟೇ. ಹಳೆಯ ವಾಹನಳು ಮಾಲಿನ್ಯಕ್ಕೆ ಕೊಡುಗೆ ನೀಡುತ್ತವೆ ಎಂಬುದು ತಪ್ಪು ಕಲ್ಪನೆ’ ಎಂದು ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಹೇಳಿದರು.

‘ಸರ್ಕಾರದ ಈ ನೀತಿಯನ್ನು ಒಪ್ಪಲಾಗದು. ಚೆನ್ನೈನಲ್ಲಿ ಏ.3ರಂದು ನಡೆಯಲಿರುವ ದಕ್ಷಿಣ ಭಾರತ ಲಾರಿ ಮಾಲೀಕರ ಸಂಘದ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ದಕ್ಷಿಣ ಭಾರತ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT