ಬುಧವಾರ, ಡಿಸೆಂಬರ್ 7, 2022
22 °C
ಅಕಾಲಿಕ ಮಳೆ; ಬೆಲೆ ಕುಸಿತ

ಬೆಲೆ ಕುಸಿತ: ಹಸಿ ಅಡಿಕೆ ಮಾರಾಟಕ್ಕೆ ಮುಂದಾದ ಬೆಳೆಗಾರರು

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

Prajavani

ಕಳಸ (ಚಿಕ್ಕಮಗಳೂರು): ಕೆಂಪು ಅಡಿಕೆ ಧಾರಣೆ ಸದ್ಯ ಇಳಿಮುಖ ಹಾದಿಯಲ್ಲಿದ್ದು, ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ.

ಆಗಸ್ಟ್‌ನಲ್ಲಿ ಕ್ವಿಂಟಲ್‌ಗೆ ₹58 ಸಾವಿರ ಇದ್ದ ‘ರಾಶಿ ಇಡಿ ಮಾದರಿ’ ಅಡಿಕೆ ಧಾರಣೆ ಸದ್ಯ ₹46 ಸಾವಿರಕ್ಕೆ ಕುಸಿದಿದೆ. ‘ಗೊರಬಲು’ ಮಾದರಿ ಅಡಿಕೆಯ ಬೆಲೆಯೂ ಕ್ವಿಂಟಲ್‌ಗೆ ₹32 ಸಾವಿರಕ್ಕೆ ಇಳಿದಿದೆ. ಸದ್ಯ ಕಳಸ ತಾಲ್ಲೂಕಿನಲ್ಲಿ ಅಡಿಕೆಯ ಮೊದಲ ಸುತ್ತಿನ ಕೊಯ್ಲು ನಡೆಯುತ್ತಿದ್ದು, ಅಕಾಲಿಕ ಮಳೆ ಮತ್ತು ಮೋಡ ಕವಿದ ವಾತಾವರಣ ಕೊಯ್ಲಿಗೆ ಅಡ್ಡಿಯಾಗಿದೆ. ಅಡಿಕೆ ಒಣಗಿಸಲು ಬಿಸಿಲಿನ ಕೊರತೆ ಇರುವುದರಿಂದ ಬೆಳೆಗಾರರು ಹಸಿ ಅಡಿಕೆಯನ್ನೇ ಮಾರಾಟ ಮಾಡಲು ಒಲವು ತೋರುತ್ತಿದ್ದಾರೆ. ಹಸಿ ಅಡಿಕೆ ಧಾರಣೆ ಕೆ.ಜಿಗೆ ₹58 ರಿಂದ ₹60ರವರೆಗೆ ಇದೆ.

'ಹಸಿ ಅಡಿಕೆ ಬೆಲೆ ಕೆ.ಜಿಗೆ ₹75 ತಲುಪುವ ಎಲ್ಲ ನಿರೀಕ್ಷೆಗಳಿದ್ದವು. ಆದರೆ, ಈಗ ಕೊಯ್ಲಿನ ವೇಳೆಗೆ ರಾಶಿ ಇಡಿ ಅಡಿಕೆ ಜತೆಗೆ ಹಸಿ ಅಡಿಕೆ ಬೆಲೆಯೂ ಕುಸಿದಿದೆ' ಎಂದು ಬೆಳೆಗಾರ ಅಜಿತ್ ಪ್ರಭು ಹೇಳಿದರು. ಕಳಸ ತಾಲ್ಲೂಕಿನ ಬಹುತೇಕ ಪ್ರದೇಶದಲ್ಲಿ ಅಡಿಕೆಗೆ ಎಲೆಚುಕ್ಕಿ ರೋಗದ ಹೆಚ್ಚುತ್ತಿದೆ. ಮೂರು ವರ್ಷಗಳಿಂದ ಎಲೆಚುಕ್ಕಿ ರೋಗ ಇದ್ದ ಸಂಸೆ, ಮೈದಾಡಿ, ಗುತ್ಯಡ್ಕ, ಎಳನೀರು ಪ್ರದೇಶದಲ್ಲಿ ಈ ವರ್ಷ ಶೇ 90ರಷ್ಟು ಇಳುವರಿ ಕುಸಿತ ಆಗಿದೆ.

‘ಬೆಲೆ ಇಳಿಯುತ್ತಿರುವುದು, ಪ್ರತಿಕೂಲ ಹವಾಮಾನದ ಕಾರಣದಿಂದ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಬೆಳೆಗಾರರಿಗೆ ಹಸಿ ಅಡಿಕೆ ಮಾರಾಟ ಮಾಡದೆ ಬೇರೆ ದಾರಿಯೇ ಇಲ್ಲ’ ಎನ್ನುತ್ತಾರೆ ವರ್ತಕರು.

‘ಚನ್ನಗಿರಿ ತಾಲ್ಲೂಕಿನಿಂದ ಬರುವ ಹಸಿ ಅಡಿಕೆ ಖರೀದಿದಾರರು ಗರಿಷ್ಠ  ಬೆಲೆಯನ್ನೇ ಕೊಡುತ್ತಿದ್ದಾರೆ. ಇಲ್ಲಿ ಮೋಡ, ಮಳೆ ಇರುವುದರಿಂದ ಬೆಳೆಗಾರರು ಕೂಡ ಹಸಿ ಅಡಿಕೆ ಮಾರಾಟ ಮಾಡಿ,
ಕೂಡಲೇ ಹಣ ಪಡೆಯಲು ಇಚ್ಛಿಸುತ್ತಾರೆ' ಎಂದು ಹಸಿ ಅಡಿಕೆ ವ್ಯಾಪಾರದ ಮಧ್ಯವರ್ತಿ ಸುನಿಲ್ ಕುಮಾರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು