ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಳಿಹಟ್ಟಿ ಶೇಖರ್‌ ತಾಯಿ ಕ್ರೈಸ್ತ ಧರ್ಮದ ಅನುಯಾಯಿ, ಬಲವಂತದ ಮತಾಂತರವಲ್ಲ: ವರದಿ

Last Updated 7 ಮಾರ್ಚ್ 2021, 1:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಕ್ರಿಶ್ಚಿಯನ್‌ ಧರ್ಮಕ್ಕೆ ಬಲವಂತದ ಮತಾಂತರ ನಡೆದಿರುವುದಕ್ಕೆ ದಾಖಲೆಗಳು ಲಭ್ಯವಾಗಿಲ್ಲ. ಕೆಲವರು ಸ್ವಯಂಪ್ರೇರಿತವಾಗಿ ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂಬುದು ಪೊಲೀಸರ ತನಿಖಾ ವರದಿಯಿಂದ ಬೆಳಕಿಗೆ ಬಂದಿದೆ.

ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರ ತಾಯಿ ಪುಟ್ಟಮ್ಮ ಸೇರಿ ಹೊಸದುರ್ಗ ತಾಲ್ಲೂಕಿನ ಹಲವರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂಬ ದೂರು ಕೇಳಿಬಂದ ಕಾರಣ ಮೂರು ತಿಂಗಳ ಹಿಂದೆ ಪೊಲೀಸರು ತನಿಖೆ ನಡೆಸಿದ್ದರು.

‘ಮತಾಂತರಕ್ಕೆ ಸಂಬಂಧಿಸಿದ ಆರೋಪ ಕೇಳಿಬಂದಿದ್ದರಿಂದ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಲಾಗಿತ್ತು. ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಪುಟ್ಟಮ್ಮ ಅವರ ಹೇಳಿಕೆಯನ್ನು ಪಡೆಯಲಾಗಿದೆ. ಹಲವು ವರ್ಷಗಳಿಂದ ಸ್ವಯಂಪ್ರೇರಿತವಾಗಿ ಚರ್ಚ್‌ಗೆ ಹೋಗುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಬಲವಂತದ ಮತಾಂತರ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಮಾಹಿತಿ ನೀಡಿದ್ದಾರೆ.

ಸಿಪಿಐ ನೇತೃತ್ವದ ತನಿಖಾ ತಂಡ ಮತಾಂತರಕ್ಕೆ ಸಂಬಂಧಿಸಿದ ಮಾಹಿತಿ ಕಲೆಹಾಕಿದೆ. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿರುವ ಎಲ್ಲ ಚರ್ಚ್‌ಗಳಿಗೆ ಭೇಟಿ ನೀಡಿ ಧಾರ್ಮಿಕ ಮುಖಂಡರ ಹೇಳಿಕೆ ಪಡೆದಿದೆ. ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿರುವವರ ಹೇಳಿಕೆ ಪಡೆದಿದೆ. ಜಿಲ್ಲೆಯಲ್ಲಿ ಬಲವಂತದ ಮತಾಂತರ ನಡೆದಿಲ್ಲ ಎಂಬ ವರದಿಯನ್ನು ಸರ್ಕಾರಕ್ಕೆ ಈ ತಂಡ
ಸಲ್ಲಿಸಿದೆ.

ದೇವರು ಕಾಪಾಡಲಿಲ್ಲ

‘ಹಿರಿಯ ಮಗನನ್ನು ಯಾವ ದೇವರೂ ಕಾಪಾಡಲಿಲ್ಲ. ಮಗ ನಿಧನನಾದ ಬಳಿಕ ದೇವರ ಮೇಲಿನ ಭರವಸೆ ಹೊರಟುಹೋಗಿದೆ. ಅಂದಿನಿಂದ ದೇವರ ಪೂಜೆ ಮಾಡುವುದನ್ನು ಕೈಬಿಟ್ಟಿದ್ದೇನೆ. ಚರ್ಚ್‌ಗೆ ಬರಲಾರಂಭಿಸಿದ ಬಳಿಕ ನೆಮ್ಮದಿ ಸಿಕ್ಕಿದೆ’ ಎನ್ನುತ್ತಾರೆ ಶಾಸಕ ಗೂಳಿಹಟ್ಟಿ ಶೇಖರ್‌ ಅವರ ತಾಯಿ ಪುಟ್ಟಮ್ಮ.

‘ಮೂರು ವರ್ಷಗಳ ಹಿಂದೆ ಮನೆಯನ್ನು ಶುಚಿಗೊಳಿಸುವಾಗ ಬಿದ್ದು ಕೈ ಮುರಿಯಿತು. ಆಸ್ಪತ್ರೆಗೆ ಹೋದರೂ ಕೈ ಗುಣವಾಗಲಿಲ್ಲ. ಚರ್ಚ್‌ನಲ್ಲಿ ದೀಕ್ಷೆ ಸ್ನಾನ ಮಾಡಿ ಕೈ ಮೇಲಕ್ಕೆ ಎತ್ತಿದಾಗ ಮುರಿದಿದ್ದ ಕೈ ಸರಿಯಾಯಿತು. ಚರ್ಚ್‌ಗೆ ಹೋಗುವುದಕ್ಕೆ ಜನ ಏನೆಂದುಕೊಂಡರೂ ತಲೆಕೆಡಿಸಿ ಕೊಳ್ಳುವುದಿಲ್ಲ‘ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ
ನೀಡಿದ್ದಾರೆ.

ಶಾಸಕರ ತಾಯಿ ಮತಾಂತರಗೊಂಡಿಲ್ಲ: ಫಾದರ್‌

ಹೊಸದುರ್ಗ: ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರ ತಾಯಿ ಪುಟ್ಟಮ್ಮ (ಪುಟ್ಟಜ್ಜಿ) ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ ಎಂದು ಪಟ್ಟಣದ ಹಿರಿಯೂರು ರಸ್ತೆ ಚರ್ಚ್‌ ಫಾದರ್‌ ಜಾರ್ಜ್‌ ಸ್ಟೀವನ್‌ ಡಿಸೋಜ ತಿಳಿಸಿದ್ದಾರೆ.

‘ಚರ್ಚ್‌ಗೆ ಬಂದು ಪ್ರಾರ್ಥನೆ ಸಲ್ಲಿಸಿದ ಮಾತ್ರಕ್ಕೆ ಮತಾಂತರ ಆಗುವುದಿಲ್ಲ. ಅವರು ಏಳು ವರ್ಷಗಳಿಂದ ಚರ್ಚ್‌ಗೆ ಬರುತ್ತಿದ್ದು, ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾರೆ. ಮಾನಸಿಕ ನೆಮ್ಮದಿಗೆ ಜನರು ದೇವಸ್ಥಾನ, ಮಸೀದಿಗೆ ಹೋಗುವಂತೆ ಅವರು ಚರ್ಚ್‌ಗೆ ಬರುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

‘ಪತಿ ದಿವಾಕರಪ್ಪ ಹಾಗೂ ಪುತ್ರ ರುದ್ರೇಶ್‌ ಅವರಾಗಿಯೇಪುಟ್ಟಜ್ಜಿಯನ್ನು ಚರ್ಚ್‌ಗೆ ಕರೆದುಕೊಂಡು ಬಂದಿದ್ದರು. ಯಾರ ಮನಸ್ಸನ್ನೂ ಪರಿವರ್ತಿಸುವ ಪ್ರಯತ್ನ ಮಾಡಿಲ್ಲ. ನಮ್ಮ ಚರ್ಚ್‌ನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವವರಿಗೆ ಬೈಬಲ್‌ ಸಂದೇಶ ತಿಳಿಸುತ್ತಿದ್ದೇವೆ. ಅವರಿಗೆ ಯಾವುದೇ ರೀತಿಯ ಜ್ಯೂಸ್‌ ಕೊಟ್ಟಿಲ್ಲ. ಈ ಬಗ್ಗೆ ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ’ ಎಂದರು.

ಇದು ಅನಧಿಕೃತ ಪರಿವರ್ತನೆ: ಗೂಳಿಹಟ್ಟಿ

‘ನನ್ನ ತಾಯಿ ಕ್ರಿಶ್ಚಿಯನ್‌ ಧರ್ಮಕ್ಕೆಅನಧಿಕೃತವಾಗಿ ಪರಿವರ್ತನೆ ಹೊಂದಿದ್ದಾರೆ. ಬಡತನ, ಮಾನಸಿಕ ತೊಳಲಾಟದಲ್ಲಿ ಇರುವವರನ್ನು ಮೋಡಿ ಮಾಡಿ ಚರ್ಚ್‌ಗೆ ಕರೆದೊಯ್ಯುವ ಕ್ರಿಶ್ಚಿಯನ್‌ ಮಿಷನರಿಗಳ ವ್ಯವಸ್ಥಿತ ಜಾಲ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಆರೋಪಿಸಿದ್ದಾರೆ.

‘ತಂದೆ ಮತ್ತು ಸಹೋದರ ಒಂದೇ ವರ್ಷದಲ್ಲಿ ನಿಧನರಾದರು. ಇದರಿಂದ ತಾಯಿ ಖಿನ್ನತೆಗೆ ಒಳಗಾಗಿದ್ದರು. ಊರಲ್ಲಿದ್ದ ತಾಯಿಯನ್ನು ಪುಸಲಾಯಿಸಿ ಚರ್ಚ್‌ಗೆ ಕರೆದೊಯ್ದು ಪರಿವರ್ತನೆ ಮಾಡಲಾಗಿದೆ. ಇದನ್ನು ಅಧಿಕೃತವಾಗಿ ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಚರ್ಚ್‌ಗೆ ಹೋಗುವವರಲ್ಲಿ ಹಿಂದೂ ಧರ್ಮದ ಬಗ್ಗೆ ಕೆಟ್ಟ ಭಾವನೆ ಮೂಡಿಸಲಾಗುತ್ತಿದೆ. ಮನೆಯಲ್ಲಿ ದೇವರ ಪೂಜೆ ಮಾಡದಂತೆ ಸೂಚನೆ ನೀಡಲಾಗುತ್ತಿದೆ. ದೇವರ ಚಿತ್ರಗಳನ್ನು ಇಟ್ಟುಕೊಳ್ಳದಂತೆ ತಾಕೀತು ಮಾಡಲಾಗುತ್ತಿದೆ. ಗಣೇಶನ ಮೂರ್ತಿ ಇದ್ದಿದ್ದರಿಂದ ಹೊಸ ಮನೆಯ ಗೃಹಪ್ರವೇಶಕ್ಕೆ ತಾಯಿ ಬರಲಿಲ್ಲ’ ಎಂದು ಬೇಸರ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT