ಶನಿವಾರ, ಆಗಸ್ಟ್ 13, 2022
24 °C

ಡ್ರಗ್ಸ್‌ ಪ್ರಕರಣದಲ್ಲಿ ಬಂಧನವಾಗಿರುವ ನಟಿಯರಿಬ್ಬರ ತಲೆಕೂದಲು ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿಸಲಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸೇರಿದಂತೆ ಎಲ್ಲ ಆರೋಪಿಗಳನ್ನು ರಕ್ತ ಹಾಗೂ ತಲೆಗೂದಲು ಪರೀಕ್ಷೆಗೆ ಗುರುವಾರ ಒಳಪಡಿಸಲಾಯಿತು.

ಆರೋಪಿಗಳಿಗೆ ನ್ಯಾಯಾಲಯದಿಂದ ಶಿಕ್ಷೆ ಕೊಡಿಸಲು ಗಮನ ಹರಿಸಿರುವ ಪೊಲೀಸರು, ಕಾನೂನುಬದ್ಧ ಪುರಾವೆಗಳನ್ನು ಸಂಗ್ರಹಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಅದರ ಭಾಗವಾಗಿ ನ್ಯಾಯಾಲಯದಿಂದ ಅನುಮತಿ ಪಡೆದು ವಿವಿಧ ಪ್ರಕಾರದ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುತ್ತಿದ್ದಾರೆ.

ವಿಚಾರಣೆಗಾಗಿ ಕಸ್ಟಡಿಗೆ ಪಡೆದಿರುವ ರಾಗಿಣಿ ಹಾಗೂ ಸಂಜನಾ, ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾರೆ. ಉಳಿದ ಆರೋಪಿಗಳು ಸಿಸಿಬಿ ಕಚೇರಿಯಲ್ಲಿದ್ದಾರೆ. ನಟಿಯರನ್ನು ಒಂದೇ ಜೀಪಿನಲ್ಲಿ ಗುರುವಾರ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು, ಡ್ರಗ್ಸ್ ಅಂಶ ಪತ್ತೆಗಾಗಿ ರಕ್ತದ ಮಾದರಿ ಹಾಗೂ ತಲೆಕೂದಲು ಪಡೆದುಕೊಂಡರು.

‘ಮಾದಕ ವಸ್ತು ಪ್ರಕರಣಗಳಲ್ಲಿ ರಕ್ತ ಹಾಗೂ ತಲೆಕೂದಲು ಪರೀಕ್ಷೆ ವರದಿ ಮಹತ್ವದ ಪುರಾವೆ ಆಗುತ್ತದೆ. ಮಾದಕ ವಸ್ತು ಸೇವಿಸುವ ಅಭ್ಯಾಸ ಇದ್ದವರ ತಲೆಕೂದಲು ಪರೀಕ್ಷೆ ಮಾಡಿದರೆ, ಅದರ ಹಿಂದೆ 90 ದಿನ ಸೇವಿಸಿರಬಹುದಾದ ಮಾದಕ ವಸ್ತುವಿನ ಅಂಶ ಸಿಗುತ್ತದೆ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು, ಮಾದಕ ವ್ಯಸನಿಗಳೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಇದಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಪುರಾವೆ ಪರಿಶೀಲಿಸಿದ ನ್ಯಾಯಾಲಯ, ಪರೀಕ್ಷೆಗಳಿಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ’ ಎಂದೂ ಅಧಿಕಾರಿ ವಿವರಿಸಿದರು.

‘ಬಂಧಿತ ಎಲ್ಲ ಆರೋಪಿಗಳನ್ನು ಹಂತ ಹಂತವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯದಲ್ಲೇ ವೈದ್ಯರು ವರದಿ ನೀಡಲಿದ್ದಾರೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದೂ ಅವರು ತಿಳಿಸಿದರು.

ಹೇಳಿಕೆ ಪಡೆದ ಎಫ್‌ಎಸ್‌ಎಲ್‌: ನಟಿಯರ ಮನೆಯಲ್ಲಿ ಸಿಕ್ಕ ವಸ್ತುಗಳನ್ನು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಪರೀಕ್ಷೆ ನಡೆಸುತ್ತಿದ್ದಾರೆ. ಆಸ್ಪತ್ರೆಯಿಂದ ನಟಿಯರನ್ನು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಗುರುವಾರ ಮಧ್ಯಾಹ್ನ ಕರೆದೊಯ್ಯಲಾಯಿತು. ಅಧಿಕಾರಿಗಳು, ನಟಿಯರಿಂದ ಲಿಖಿತ ಹೇಳಿಕೆ ಪಡೆದುಕೊಂಡು ವಾಪಸ್‌ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದರು.

ಪರೀಕ್ಷೆಗೆ ಆಕ್ಷೇಪಿಸಿದ್ದ ಸಂಜನಾ

‘ಪರೀಕ್ಷೆಗೆ ಒಳಪಡಬೇಕೋ ಬೇಡವೋ ಎಂಬುದು ನನ್ನ ಹಕ್ಕು. ಡ್ರಗ್ಸ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅಷ್ಟಾದರೂ ಬಂಧಿಸಿದ್ದೀರಾ. ಈಗ ನನ್ನ ಅನುಮತಿ ಇಲ್ಲದೇ ಪರೀಕ್ಷೆಗೂ ಒಳಪಡಿಸುತ್ತಿದ್ದಾರೆ’ ಎಂದು ಸಂಜನಾ, ಸಿಸಿಬಿ ಪೊಲೀಸರನ್ನು ಪ್ರಶ್ನಿಸಿದರು.

ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಾಗ ಸಂಜನಾ, ಪರೀಕ್ಷಾ ಕೊಠಡಿಗೆ ಹೋಗಲು ಹಿಂದೇಟು ಹಾಕಿದರು. ತಮ್ಮ ವಕೀಲರನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ವಕೀಲರಿಗೆ ಪೊಲೀಸರು ನ್ಯಾಯಾಲಯದ ಆದೇಶ ಪ್ರತಿ ತೋರಿಸಿದರು. ಬಳಿಕವೇ ಸಂಜನಾ, ಪರೀಕ್ಷೆ ಮಾಡಿಸಿಕೊಂಡರು.

ಬೆಂಗಳೂರು ತೊರೆದ ಫೈಜಲ್‌?

ನಟಿ ಸಂಜನಾ ಬಂಧನವಾಗುತ್ತಿದ್ದಂತೆ, ಅವರ ಆಪ್ತ ಎನ್ನಲಾದ ಉದ್ಯಮಿ ಫೈಜಲ್ ನಾಪತ್ತೆಯಾಗಿದ್ದಾನೆ. ಆತನ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ಹುಡುಕಾಟ ನಡೆಸುತ್ತಿದ್ದಾರೆ.

‘ಫೈಜಲ್, ಶ್ರೀಲಂಕಾ ಸೇರಿದಂತೆ ಹಲವೆಡೆ ಕ್ಯಾಸಿನೊ ನಡೆಸುತ್ತಿದ್ದಾನೆ. ಸದ್ಯ ಆತ ಬೆಂಗಳೂರು ತೊರೆದು ಶ್ರೀಲಂಕಾಗೆ ಹೋಗಿ ತಲೆಮರೆಸಿಕೊಂಡಿರುವ ಮಾಹಿತಿ ಇದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು